ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಗಾಂಧಿ ಕುಟುಂಬದ ಸೇವೆ ಬಿಟ್ಟು ಜನಸೇವೆ ಮಾಡಿ: ಖರ್ಗೆ ವಿರುದ್ಧ ಬಿಜೆಪಿ ಟೀಕೆ

Last Updated 4 ಡಿಸೆಂಬರ್ 2021, 7:19 IST
ಅಕ್ಷರ ಗಾತ್ರ

ಬೆಂಗಳೂರು:‘ನನ್ನ ಬಗ್ಗೆ ಪ್ರಧಾನಿ ಮೋದಿಗೆ ಭಯವಿದೆ‘ ಎಂಬ ಮಲ್ಲಿಕಾರ್ಜುನಖರ್ಗೆ ಹೇಳಿಕೆಗೆ ಬಿಜೆಪಿ ರಾಜ್ಯ ಘಟಕವು ಶನಿವಾರ ತಿರುಗೇಟು ನೀಡಿದೆ.

ಈ ವಿಚಾರದ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಮಾನ್ಯ ಖರ್ಗೆ ಅವರೇ, ಮೋದಿಗೆ ನಿಮ್ಮನ್ನು ಕಂಡರೆ ಭಯವೇ? ಲೋಕಸಭಾ ಚುನಾವಣಾ ಸೋಲಿನ ನೋವು ನಿಮ್ಮನ್ನು ಈಗಲೂ ನಿದ್ರೆ ಮಾಡಲು ಬಿಡುತ್ತಿಲ್ಲ ಎನ್ನುವುದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು. ನಿದ್ದೆಗೆಟ್ಟಾಗ, ಆರೋಗ್ಯ, ಮನಸು, ಬುದ್ಧಿ, ಮಾತು ಎಲ್ಲವೂ ಕೆಡುತ್ತದೆ. ಯಾರನ್ನು ಸೋಲಿಸಬೇಕು ಯಾರ ಕೈ ಹಿಡಿಯಬೇಕೆಂದು ಜನ ನಿರ್ಧರಿಸುತ್ತಾರೆ‘ ಎಂದು ಟೀಕಿಸಿದೆ.

‘ನೀವು(ಖರ್ಗೆ) ಈಗ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ನಿಮ್ಮ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡುತ್ತಿದ್ದೀರಿ. ನಾಳೆ ಆ ಅಭ್ಯರ್ಥಿ ಸೋತರೆ, ನಾನು‌ ಮೋದಿ ವಿರುದ್ಧ ಮಾತನಾಡಿದೆ. ಅದಕ್ಕಾಗಿ ಬಿಜೆಪಿಯವರು ನಮ್ಮ ಅಭ್ಯರ್ಥಿಯನ್ನು ಸೋಲಿಸಿದರು ಎಂದು ನೊಂದುಕೊಳ್ಳಬೇಡಿ. ನೀವು ಹೋದಲ್ಲೆಲ್ಲ ಸೋಲು ಕಟ್ಟಿಟ್ಟಬುತ್ತಿ‘ ಎಂದು ಬಿಜೆಪಿ ಹೇಳಿದೆ.

‘ನಿಮ್ಮ ಸೋಲಿಗೆ ನೀವು ಕೊಡುತ್ತಿರುವ ಕಾರಣ ಪಿಳ್ಳೆ ನೆವ ಎಂಬಂತಿದೆ. ನಿಮ್ಮ ದುರಾಡಳಿತ, ಕುಟುಂಬ ರಾಜಕಾರಣ, ಪುತ್ರ ವ್ಯಾಮೋಹ, ಭ್ರಷ್ಟಾಚಾರದಿಂದ ರೋಸಿ ಹೋದ ಜನರು ನಿಮ್ಮನ್ನು ಸೋಲಿಸಿದ್ದರು. ಆ ಸೋಲಿಗೆ ನೀವು ಅನ್ಯರನ್ನು ಹೊಣೆಯಾಗಿಸಬೇಡಿ. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಹಾಕುವುದೇ ಪ್ರತಿಸ್ಪರ್ಧಿಯನ್ನು ಸೋಲಿಸುವುದಕ್ಕೆ‘ ಎಂದು ಬಿಜೆಪಿ ಟ್ವೀಟಿಸಿದೆ.

‘ಖರ್ಗೆಯವರೇ ಕಾಂಗ್ರೆಸ್ ಪಕ್ಷದ ವಲಯದಲ್ಲಿ ನಿಮ್ಮ ಬಗ್ಗೆ ಒಂದು ಮಾತಿದೆ. ನಿಮಗೂ ಗೊತ್ತಿರಬಹುದು. ಖರ್ಗೆಯವರು ರಾಜಕೀಯಕ್ಕೆ ಬಂದಾಗಿನಿಂದ ಸರ್ಕಾರಿ ವೆಚ್ಚದಲ್ಲೇ‌ ಬದುಕಿದ್ದು ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತದೆ. ಅಧಿಕಾರವಿಲ್ಲದೆ ಬದುಕು ಅಸಹನೀಯ ಅನ್ನಿಸುತ್ತಿರಬೇಕು, ಹಿಂಬಾಗಿಲ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದು ಅದಕ್ಕಾಗಿಯಲ್ಲವೇ?‘ ಎಂದು ಬಿಜೆಪಿ ಪ್ರಶ್ನಿಸಿದೆ.

‘ನಿಮ್ಮ ಜಿಲ್ಲೆಯ ಗ್ರಾಮಗಳಿಗೆ ನೀರು, ರಸ್ತೆ ಸಂಪರ್ಕ ಕಲ್ಪಿಸುವುದಕ್ಕೆ ನಿಮಗಿನ್ನೂ ಸಾಧ್ಯವಾಗಿಲ್ಲ. ಹೀಗಿರುವಾಗ ಕಲ್ಯಾಣ ಕರ್ನಾಟಕದ ಪ್ರಗತಿ ನನ್ನಿಂದಲೇ ಆಯ್ತು ಎನ್ನುತ್ತೀರಿ. ಬಹುಶಃ ಈ ಭ್ರಮೆಯೂ ನಿದ್ರಾಹೀನತೆಯ ಸಮಸ್ಯೆ ಇರಬೇಕು. ನಕಲಿ ಗಾಂಧಿ ಕುಟುಂಬದ ಸೇವೆ ಮತ್ತು ಪುತ್ರ ವ್ಯಾಮೋಹ ಬಿಟ್ಟು ಜನಸೇವೆ ಮಾಡಿ‘ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT