ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಶುಗರ್‌ ಪುನರಾರಂಭಕ್ಕೆ ಆಗ್ರಹ: ಅಕ್ರಮ ಗಣಿಗಾರಿಕೆ ತಡೆಗೆ ಒತ್ತಾಯ

Last Updated 5 ಜುಲೈ 2021, 20:43 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯದ ಮೈಶುಗರ್‌ ಕಾರ್ಖಾನೆ ಪುನರಾರಂಭಿಸಬೇಕು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯವರ ಗೃಹ ಕಚೇರಿಕೃಷ್ಣಾದಲ್ಲಿ ಸೋಮವಾರ ಮುಖ್ಯಮಂತ್ರಿ ಭೇಟಿ ಮಾಡಿದ ಅವರು, ಮೈಶುಗರ್‌ ಸಕ್ಕರೆ ಕಾರ್ಖಾನೆ ಮತ್ತೆ ಆರಂಭ ಆಗಬೇಕು. ಸರ್ಕಾರವಾದರೂ ವಹಿಸಿಕೊಳ್ಳಲಿ, ಖಾಸಗಿಯವರಾದರೂ ನಡೆಸಲಿ. ಅದು ಪುನರಾರಂಭಗೊಂಡು, ರೈತರಿಗೆಅನುಕೂಲ ಆಗಬೇಕು ಎಂದು ಒತ್ತಾಯಿಸಿದರು.

‘ಮೈಶುಗರ್‌ ಪುನರಾರಂಭದ ಬಗ್ಗೆ ಇವತ್ತಿನಿಂದ ಅಲ್ಲ, ಕಳೆದ ಎರಡು ವರ್ಷಗಳಿಂದ ಸಾಕಷ್ಟು ಬಾರಿ ಮಾತನಾಡಿದ್ದೇನೆ. ಸರ್ಕಾರದಿಂದ ಸ್ಪಷ್ಟ ಉತ್ತರ ಬರಬೇಕು, ಇಲ್ಲವಾದರೆ, ರೈತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ರೈತರು ಕಬ್ಬು ಬೆಳೆದು ಸಾಕಷ್ಟು ಬಾರಿ ಹಣ ಕಳೆದುಕೊಂಡಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಏನೂ ಮಾಡಿಲ್ಲ. ಕೇವಲ ದ್ವೇಷದ ರಾಜಕಾರಣ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಹೊಣೆಗಾರಿಕೆ’ ಎಂದರು ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.

ಮಂಡ್ಯದ ರೈತರು ಕಬ್ಬನ್ನು ಬೇರೆ ಕಡೆಗೆ ಒಯ್ಯಬೇಕಾಗಿದೆ. ಮೈಶುಗರ್‌ ಆರಂಭವಾಗುವವರೆಗೆ ರೈತರ ಕಬ್ಬು ಸಾಗಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಅದರಿಂದ ರೈತರ ಹೊರೆ ಕಡಿಮೆ ಆಗುತ್ತದೆ ಎಂದು ಹೇಳಿದರು.

‘ಕೆಆರ್‌ಎಸ್‌ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದ್ದೇನೆ. ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಗಣಿಗಾರಿಕೆ ನಿಷೇಧ ಮಾಡಿದ್ದರೂ, ಕದ್ದುಮುಚ್ಚಿ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ’ ಎಂದರು.

‘ಗಣಿಗಾರಿಕೆಯಿಂದಾಗಿ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದ್ದವು. ಇದನ್ನು ಸಂಸತ್ತಿನಲ್ಲಿ ಮತ್ತು ಇತರ ಕಡೆಗಳಲ್ಲಿ ಪ್ರಸ್ತಾಪಿಸಿದ್ದೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕಿತ್ತು. ತನಿಖೆಯೇ ಆಗದೇ ಕೆಲವರು ಅಣೆಕಟ್ಟು ಬಿರುಕು ಬಿಟ್ಟಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಯಾವ ಕಾರಣಕ್ಕೆ, ಇದರಿಂದ ಅನುಮಾನ ಬರುವುದು ಸಹಜವಲ್ಲವೆ’ ಎಂದು ಸುಮಲತಾ ಪ್ರಶ್ನಿಸಿದರು.

ಕೋವಿಡ್‌ ಮೂರನೇ ಅಲೆ ಬರುವ ಸಾಧ್ಯತೆ ಇರುವ ಕಾರಣ ಮಂಡ್ಯ ಜಿಲ್ಲೆಗೆ ವಿಶೇಷ ಮಕ್ಕಳ ಆಸ್ಪತ್ರೆಯನ್ನು ತಕ್ಷಣವೇ ಆರಂಭಿಸಬೇಕು. ಅದಕ್ಕೆ ಸಕಲ ಸೌಲಭ್ಯಗಳನ್ನೂ ಕೊಡಿಸಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT