ಗುರುವಾರ , ಜುಲೈ 7, 2022
23 °C
ಸರ್ಕಾರದ ವಿರುದ್ಧ ಎಂ.ಬಿ.ಪಾಟೀಲ ವಾಗ್ದಾಳಿ

ನೀರಾವರಿ: 'ಹೇಳಿದ್ದು ₹1.5 ಲಕ್ಷ ಕೋಟಿ, ಕೊಟ್ಟಿದ್ದು ₹60 ಸಾವಿರ ಕೋಟಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ ₹1.5 ಲಕ್ಷ ಕೋಟಿ ಕೊಡುವುದಾಗಿ ಬಿಜೆಪಿ ಪ್ರಕಟಿಸಿತ್ತು. ಆದರೆ, ಕೊಟ್ಟಿರುವುದು ₹60 ಸಾವಿರ ಕೋಟಿ ಮಾತ್ರ. ಇದು ರಾಜ್ಯದ ಜನರಿಗೆ ಮಾಡುತ್ತಿರುವ ವಂಚನೆ’ ಎಂದು ಕಾಂಗ್ರೆಸ್‌ನ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ₹1.5 ಲಕ್ಷ ಕೋಟಿ ನೀಡಲಾಗುವುದು ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಆಡಳಿತಕ್ಕೆ ಬಂದರೆ ₹1 ಲಕ್ಷ ಕೋಟಿ ಮೀಸಲಿಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದರು. ಆದರೆ, ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್‌ ಮೇಲೆ ಜಲಸಂಪನ್ಮೂಲ ಸಚಿವರು ಆರೋಪ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ₹65 ಸಾವಿರ ಕೋಟಿ ವೆಚ್ಚ ಮಾಡಲಾಗಿತ್ತು’ ಎಂದು ಹೇಳಿದರು. ಆಗ, ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. 

ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್, ‘ಬಜೆಟ್‌ ಮೇಲಿನ ಚರ್ಚೆಯಲ್ಲಿ ಇದೇ ವಿಷಯ ಮಾತನಾಡಬೇಕು ಎಂಬುದೇನೂ ಇಲ್ಲ. ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರದ ಸಾಧನೆಗಳ ಹೋಲಿಕೆ ಮಾಡುತ್ತಿದ್ದಾರೆ’ ಎಂದು ಹೇಳಿದರು. ‘ಇಲಾಖಾವಾರು ಚರ್ಚೆ ವೇಳೆ ಅವರು ಈ ವಿಚಾರ ಮಾತನಾಡಲಿ’ ಎಂದು ಮಾಧುಸ್ವಾಮಿ ಸಲಹೆ ನೀಡಿದರು.

ರಮೇಶ್‌ ಕುಮಾರ್‌, ‘ಕುಮಾರಸ್ವಾಮಿ ಅವರು ಬಜೆಟ್‌ಗೆ ಸಂಬಂಧ ಇಲ್ಲದ ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತನಾಡಿದರು. ಆಗ ಬಿಜೆಪಿ ಸದಸ್ಯರು ಆಕ್ಷೇಪ ಎತ್ತಲಿಲ್ಲ. ಈಗೇಕೆ ಭಾಷಣಕ್ಕೆ ಅಡ್ಡಿಪಡಿಸುತ್ತಿರುವುದು’ ಎಂದು ಪ್ರಶ್ನಿಸಿದರು.

ಬಳಿಕ ಮಾತು ಮುಂದುವರಿಸಿದ ಎಂ.ಬಿ.ಪಾಟೀಲ, ‘ಬ್ರಿಟಿಷರಿಗಿಂತ ಕಾಂಗ್ರೆಸ್‌ನವರು ಹೆಚ್ಚು ಮೋಸ ಮಾಡಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಬಿಜೆಪಿಯವರು ಮಾಡಿದ ಮೋಸಗಳನ್ನು ನಾನು ಬಿಚ್ಚಿಡುತ್ತಿದ್ದೇನೆ’ ಎಂದರು. 

ಗೋವಿಂದ ಕಾರಜೋಳ ಆಕ್ಷೇಪ ವ್ಯಕ್ತಪಡಿಸಿ, ‘ಕಾಂಗ್ರೆಸ್‌ ನಡಿಗೆ ಕೃಷ್ಣೆ ಕಡೆಗೆ ಹೆಸರಿನಲ್ಲಿ ಕಾಂಗ್ರೆಸ್‌ನವರು ಪಾದಯಾತ್ರೆ ನಡೆಸಿದರು. ಕೃಷ್ಣಾ ಮೇಲ್ದಂಡೆ ಯೋಜನೆಗೆ ₹50 ಸಾವಿರ ಕೋಟಿ ಮೀಸಲಿಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು’ ಎಂದು ಪತ್ರಿಕಾ ತುಣುಕುಗಳನ್ನು ಪ್ರದರ್ಶಿಸಿದರು.

ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ನಾವು ನೀರಾವರಿ ಯೋಜನೆಗೆ ₹50 ಸಾವಿರ ಕೋಟಿ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ನುಡಿದಂತೆ ನಡೆದಿದ್ದೇವೆ’ ಎಂದರು. ಕಾಂಗ್ರೆಸ್‌ ಸದಸ್ಯ ಜಿ.‍ಪರಮೇಶ್ವರ ಧ್ವನಿಗೂಡಿಸಿದರು. ‘ನೀವು ಸುಳ್ಳು ಹೇಳಿದ್ದಕ್ಕೆ ಇಲ್ಲಿದೆ ಸಾಕ್ಷಿ’ ಎಂದು ಕಾರಜೋಳ ಪತ್ರಿಕಾ ತುಣುಕುಗಳನ್ನು ಮತ್ತೆ ಪ್ರದರ್ಶಿಸಿದರು. ‘ಅದು ನಮ್ಮ ಪ್ರಣಾಳಿಕೆಯಲ್ಲ. ಅದು ಪತ್ರಿಕಾ ತುಣುಕು’ ಎಂದು ಸಿದ್ದರಾಮಯ್ಯ ಹೇಳಿದರು. ‘ನೀವು ಹೇಳಿದ್ದನ್ನೇ ಅವರು ಬರೆದಿದ್ದಾರೆ’ ಎಂದು ಕಾರಜೋಳ ಸಮರ್ಥಿಸಿಕೊಂಡರು.

*

ತಮ್ಮ ಸರ್ಕಾರದ ಸಾಧನೆ ಬಗ್ಗೆ ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಎಲ್ಲರೂ ಹೀಗೆ ಮಾಡಿದರೆ ಸರಿಯಲ್ಲ. ಈಗಿನ ಬಜೆಟ್‌ ಬಗ್ಗೆ ಚರ್ಚಿಸಿ. ಗತಕಾಲದ ವೈಭವ ಇಲ್ಲಿ ಕೇಳಲು ಕೂತಿಲ್ಲ.
-ಜೆ.ಸಿ. ಮಾಧುಸ್ವಾಮಿ, ಸಂಸದೀಯ ವ್ಯವಹಾರಗಳ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು