ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಕರ್ಮಿ ಎಂ.ಸಿ. ಆನಂದ್ ನಿಧನ

Last Updated 5 ಮೇ 2021, 3:42 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ರಂಗಕರ್ಮಿ ಹಾಗೂ ರಂಗನಟ ಎಂ.ಸಿ. ಆನಂದ್‌ (72) ಅವರು ಹೃದಯಾಘಾತದಿಂದ ಮಂಗಳವಾರ ಬೆಳಿಗ್ಗೆ 11.30ಕ್ಕೆ ಮೃತಪಟ್ಟಿದ್ದಾರೆ.

ನಾಲ್ಕು ದಿನಗಳ ಹಿಂದೆ ಕೊರೊನಾ ಸೋಂಕಿತರಾಗಿದ್ದ ಅವರು, ಕೋಣನಕುಂಟೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಅವರ ಪತ್ನಿ ಕೂಡ ಸೋಂಕಿತರಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಎಂ.ಎಸ್. ಸತ್ಯು ನಿರ್ದೇಶನದ ‘ವಾರಸುದಾರ’ ನಾಟಕಕ್ಕೆ ಆನಂದ್ ಅವರು ರಂಗತಾಲೀಮು ನಡೆಸಿದ್ದರು. ಇಲ್ಲಿನ ಎಡಿಎ ರಂಗ ಮಂದಿರದಲ್ಲಿ ನಾಟಕದ ರಂಗ ಪ್ರದರ್ಶನಕ್ಕೆ ಸಿದ್ಧತೆ ನಡೆದಿತ್ತು. ಆದರೆ, ಸರ್ಕಾರವು ಕೋವಿಡ್ ಕರ್ಫ್ಯೂ ಜಾರಿ ಮಾಡಿದ ಕಾರಣದಿಂದಾಗಿ ಈ ನಾಟಕದ ಪ್ರದರ್ಶನವು ಮುಂದೂಡಲ್ಪಟ್ಟಿತ್ತು.

ಆನಂದ್‌ ಅವರು ಕಂಟ್ರೋಲರೇಟ್ ಆಫ್ ಕ್ವಾಲಿಟಿ ಅಶ್ಯೂರೆನ್ಸ್‌ ಸಂಸ್ಥೆಯಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ರಂಗಭೂಮಿ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಅವರು, ಕನ್ನಡ ಸಾಹಿತ್ಯ ಕಲಾ ಸಂಘ, ರಂಗಸಂಪದ, ಸಮುದಾಯ, ಸ್ಪಂದನ ಸೇರಿದಂತೆ ವಿವಿಧ ರಂಗ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದರು. ‘ಯಯಾತಿ’, ‘ತಾಯಿ’, ‘ಹುತ್ತವ ಬಡಿದರೆ’, ‘ಸಂಕ್ರಾಂತಿ’, ‘ಜೋಕುಮಾರಸ್ವಾಮಿ’, ‘ಗೆಲಿಲಿಯೋ’, ‘ಕತ್ತಲೆ ದಾರಿ ದೂರ’, ‘ದಂಗೆಯ ಮುಂಚಿನ ದಿನಗಳು’, ‘ವಾಸಂತಿ’, ‘ಕೇಸರಿ ಬಿಳಿ ಹಸಿರು’ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಅನುವಾದಕರಾಗಿ ಕೂಡ ಹೆಸರು ಮಾಡಿದ್ದ ಇವರು, ಹಲವು ನಾಟಕಗಳನ್ನು ಕನ್ನಡಕ್ಕೆ ತಂದಿದ್ದರು.

ರಂಗ ನಟನೆ, ರಂಗ ವಿನ್ಯಾಸ ಮತ್ತು ಪ್ರಚಾರ ಕಲೆಯ ವಿನ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶಂಕರ್‌ ನಾಗ್‌ ಅವರ ‘ಮಾಲ್ಗುಡಿ ಡೇಸ್’ ಸೇರಿದಂತೆ ವಿವಿಧ ಕಿರುತೆರೆ ಧಾರಾವಾಹಿ ಮತ್ತು ‘ಸಿಂಹಾಸನ’, ‘ಅವಸ್ಥೆ’ ಸೇರಿದಂತೆ ಕೆಲ ಚಲನಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕಾರ ಸೇರಿದಂತೆ ವಿವಿಧ ಪ್ರಶಸ್ತಿಗಳು ಇವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT