ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರಕ್ಕೆ ಔಷಧ ಕೊರತೆ: ಡಾ.ಕೆ. ಸುಧಾಕರ್‌

Last Updated 1 ಜೂನ್ 2021, 16:34 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಮೂರನೆ ಅಲೆ ಎದುರಿಸುವುದಕ್ಕಾಗಿ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 70ರಿಂದ 80 ಹಾಸಿಗೆಗಳ ಪ್ರತ್ಯೇಕ ಮಕ್ಕಳ ಚಿಕಿತ್ಸಾ ವಿಭಾಗಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮಂಗಳವಾರ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ ಮೂರನೆ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ. ಮಕ್ಕಳ ಚಿಕಿತ್ಸೆಗೆ ಸೌಲಭ್ಯಗಳನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

ಕೆಲವೆಡೆ ಈಗಾಗಲೇ ಇರುವ 20 ಹಾಸಿಗೆಗಳ ಮಕ್ಕಳ ವಿಭಾಗವನ್ನು 80 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗುವುದು. ಮಕ್ಕಳ ವಿಭಾಗಕ್ಕೆ ಅಗತ್ಯ ಸಂಖ್ಯೆಯ ತಜ್ಞ ವೈದ್ಯರು, ನರ್ಸಿಂಗ್‌ ಸಿಬ್ಬಂದಿಯನ್ನು ಒದಗಿಸಲಾಗುವುದು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೂಲಕ ಅವರಿಗೆ ತರಬೇತಿ ನೀಡಲಾಗುವುದು ಎಂದರು.

ಪ್ರಯೋಗಾಲಯ ಆರಂಭ: ಎರಡನೆ ಅಲೆಯಲ್ಲಿ ಕಂಡುಬಂದಿರುವ ರೂಪಾಂತರಿ ವೈರಾಣುವಿನ ವಂಶವಾಹಿ ಕುರಿತು ಅಧ್ಯಯನ ನಡೆಸಲು ರಾಜ್ಯದ ಐದು ವೈದ್ಯಕೀಯ ಕಾಲೇಜುಗಳು, ಮಂಗಳೂರಿನ ವೆನ್ಲಾಕ್‌ ಮತ್ತು ವಿಜಯಪುರದ ಸರ್ಕಾರಿ ಆಸ್ಪತ್ರೆ ಸೇರಿದಂತೆ ಏಳು ಜೆನೋಮಿಕ್‌ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.

ಔಷಧಿ ಕೊರತೆ ಇದೆ: ಕಪ್ಪು ಶಿಲೀಂಧ್ರ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸುವ ಅ್ಯಂಫೋಟೆರಿಸಿನ್‌ ಚುಚ್ಚುಮದ್ದಿನ ಕೊರತೆ ಇದೆ. ಕೇಂದ್ರ ಸರ್ಕಾರ 1,300 ವಯಲ್ಸ್‌ ಹಂಚಿಕೆ ಮಾಡಿದ್ದು, ರಾಜ್ಯದಲ್ಲಿರುವ ರೋಗಿಗಳ ಸಂಖ್ಯೆಗೆ ಹೋಲಿಸಿದರೆ ಸಾಕಾಗುವುದಿಲ್ಲ. ಕೇಂದ್ರ ಸಚಿವರನ್ನು ಸಂಪರ್ಕಿಸಿ ಹೆಚ್ಚಿನ ಪಡೆಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಕಪ್ಪು ಶಿಲೀಂಧ್ರ ಕಣ್ಣಿಗೆ ತಲುಪಿದ ಬಳಿಕ ಅದು ಮೆದುಳನ್ನು ಪ್ರವೇಶಿಸದಂತೆ ತಡೆಯಲು ಕಣ್ಣನ್ನೇ ತೆಗೆಯಲಾಗುತ್ತಿದೆ. ನೇತ್ರ ತಜ್ಞರು, ದಂತ ವೈದ್ಯರು ಸೇರಿದಂತೆ ತಜ್ಞ ವೈದ್ಯರ ತಂಡ ಸೇರಿ ಈ ತೀರ್ಮಾನ ಕೈಗೊಳ್ಳುತ್ತಿದೆ. ಇದು ಔಷಧಿ ಕೊರತೆಯಿಂದ ಆದ ಸಮಸ್ಯೆ ಅಲ್ಲ ಎಂದರು.

‘ಕವಾಸಕಿ’ ಸೋಂಕು ಪತ್ತೆ

ಕೋವಿಡ್‌ನಿಂದ ಗುಣಮುಖರಾದ ಇಬ್ಬರು ಮಕ್ಕಳಲ್ಲಿ ರಕ್ತನಾಳಗಳಲ್ಲಿ ಉರಿಯೂತಕ್ಕೆ ಕಾರಣವಾಗುವ ‘ಕವಾಸಕಿ’ ಸೋಂಕು ಕಂಡುಬಂದಿದೆ. ಕೋವಿಡ್‌ ಅದಕ್ಕೆ ಕಾರಣವಾಗಿರಬಹುದು ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ಶಂಕಿಸಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ಸೋಂಕು ಯಾವ ಕಾರಣದಿಂದ ಬಂದಿದೆ, ಮಕ್ಕಳ ಸಾಮಾಜಿಕ ಹಿನ್ನೆಲೆ, ಆಹಾರ ಕ್ರಮಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT