ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕರರ ಬೇಡಿಕೆಗೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ: ಪ್ರತಿಭಟನೆ ಹಿಂದಕ್ಕೆ

Last Updated 17 ಆಗಸ್ಟ್ 2022, 19:11 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತಿ ಹೊಂದಿರುವ ಅಕ್ಷರ ದಾಸೋಹ ನೌಕರರಿಗೆ ನಿವೃತ್ತಿ ವೇತನ ಮತ್ತು ₹1 ಲಕ್ಷ ಇಡುಗಂಟು ನೀಡಬೇಕು ಎಂಬ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟವನ್ನು ನೌಕರರು ಹಿಂಪಡೆದಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ಆರಂಭಿಸಿದ್ದ ನೌಕರರು ಅಹೋರಾತ್ರಿ ಧರಣಿ ನಡೆಸಿದ್ದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರ ಜತೆ ನೌಕರರ ಸಂಘದ ಪದಾಧಿ ಕಾರಿಗಳು ಬುಧವಾರ ಸಭೆ ನಡೆಸಿದರು.

‘ಬೇಡಿಕೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಸೆಲ್ವಕುಮಾರ್ ಶಿಫಾರಸು ಮಾಡಿದ್ದಾರೆ. ಇಲಾಖೆ ಕೇಳಿರುವ ಮಾಹಿತಿ ಒದಗಿಸಲು ಪ್ರಯತ್ನಿಸುತ್ತಿರುವ ಬಗ್ಗೆಯೂ ನಮಗೆ ವಿವರಿಸಿದರು’ ಎಂದು ಸಂಘದ ಗೌರವಾಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.

‘ಸಭೆಯ ನಡಾವಳಿಯನ್ನು ಲಿಖಿತವಾಗಿ ಒದಗಿಸಿದ ಬಳಿಕವೇ ಪ್ರತಿಭಟನೆ ಹಿಂಪಡೆಯಲು ನಿರ್ಧರಿಸಲಾಯಿತು. ಅಲ್ಲದೇ ಮುಖ್ಯಮಂತ್ರಿ ಅವರನ್ನು ನಾವು ಭೇಟಿ ಮಾಡಿದ್ದು, ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಮಾತನಾಡುವುದಾಗಿ ಅವರೂ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.‍

‘ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಕೇಳಿರುವ ಮಾಹಿತಿ ಯನ್ನು ಒದಗಿಸಿ 15 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಸೆಲ್ವಕುಮಾರ್ ತಿಳಿಸಿದ್ದಾರೆ. ಆದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ತಿಳಿಸಿದರು.

ಶೌಚ, ಊಟಕ್ಕೆ ಪರದಾಡಿದ ನೌಕರರು
ಮಂಗಳವಾರ ರಾತ್ರಿ ಚಳಿಯನ್ನೂ ಲೆಕ್ಕಿಸದೆ ಸ್ವಾತಂತ್ರ್ಯ ಉದ್ಯಾನದಲ್ಲೇ ನೌಕರರು ಪ್ರತಿಭಟನೆ ನಡೆಸಿದರು.

ಸಾವಿರಾರು ಸಂಖ್ಯೆಯಲ್ಲಿದ್ದ ಮಹಿಳೆಯರು, ಶೌಚಕ್ಕೆ ಪರದಾಡಬೇಕಾಯಿತು. ‘ಸ್ವಾತಂತ್ರ್ಯ ಉದ್ಯಾನದಲ್ಲಿರುವ ಬೆರಳೆಣಿಕೆಯಷ್ಟು ಶೌಚಾಲಯ, ಗಾಂಧಿನಗರದಲ್ಲಿನ ಸಣ್ಣ ಪುಟ್ಟ ಹೋಟೆಲ್‌ಗಳನ್ನು ಹುಡುಕಿ ಶೌಚಕ್ಕೆ ಬಳಸಿದೆವು’ ಎಂದು ನೌಕರರು ಹೇಳಿದರು.

ರಾಜ್ಯದ ಎಲ್ಲೆಡೆಯಿಂದ ಬಂದಿದ್ದ ನೌಕರರಲ್ಲಿ ಕೆಲವರು ರೊಟ್ಟಿ ಮತ್ತು ಚಪಾತಿ ಬುತ್ತಿಗಳನ್ನು ತಂದಿದ್ದು, ಅದನ್ನೇ ಎರಡು ದಿನ ಸೇವಿಸಿದರು. ಬುತ್ತಿ ತರದೆ ಬಂದಿದ್ದವರು ಊಟಕ್ಕಾಗಿ ಪರಿತಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT