ಶನಿವಾರ, ಸೆಪ್ಟೆಂಬರ್ 26, 2020
22 °C
ಟೆಂಡರ್ ಪ್ರಕ್ರಿಯೆ ಪೂರ್ಣ: ಮುಖ್ಯಮಂತ್ರಿಯಿಂದ ಶೀಘ್ರವೇ ಚಾಲನೆ

ಬರಲಿದೆ ಕೆಎಸ್‌ಆರ್‌ಟಿಸಿ ಕೊರಿಯರ್; ವರ್ಷಕ್ಕೆ ₹100 ಕೋಟಿ ವರಮಾನ ನಿರೀಕ್ಷೆ

ವಿಜಯಕುಮಾರ್ ಎಸ್‌.ಕೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಕಾರಣದಿಂದ ನಷ್ಟದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ಸಂಸ್ಥೆಗಳು, ಇದರಿಂದ ಪಾರಾಗಲು ಕೊರಿಯರ್ ಸೇವೆ ಆರಂಭಿಸುವ ತಯಾರಿ ನಡೆಸಿವೆ. ವರ್ಷಕ್ಕೆ ₹100 ಕೋಟಿ ವರಮಾನ ಸಂಗ್ರಹಿಸುವ ಗುರಿ ಇದರ ಹಿಂದಿದೆ.

ಕೋವಿಡ್ ಬಂದ ಬಳಿಕ ಸುಮಾರು ₹3 ಸಾವಿರ ಕೋಟಿಯಷ್ಟು ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳು, ಅದರಿಂದ ಮೇಲೆ ಬರಲು ಹಲವು ದಾರಿಗಳನ್ನು ಹುಡುಕುತ್ತಿವೆ. ಪ್ರತಿ ಹಳ್ಳಿಗೂ ತಲುಪುವ ಸಾಮರ್ಥ್ಯ ಹೊಂದಿರುವ ಕೆಎಸ್‌ಆರ್‌ಟಿಸಿ, ಉಳಿದ ಮೂರು ಸಂಸ್ಥೆಗಳ (ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ) ಜತೆಗೂಡಿ ಕೊರಿಯರ್ ಸೇವೆ ಒದಗಿಸಲು ಸಜ್ಜಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕೊರಿಯರ್ ಸೇವೆಗೆ ಚಾಲನೆ ಸಿಗಲಿದೆ.

ಹೊರ ರಾಜ್ಯಗಳಲ್ಲಿ ಸಾರಿಗೆ ಸಂಸ್ಥೆಗಳು ನಡೆಸುತ್ತಿರುವ ಕೊರಿಯರ್ ಸೇವೆಗಳ ಬಗ್ಗೆ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ವರದಿ ನೀಡಿದೆ. ಅದನ್ನು ಆಧರಿಸಿ ತೆಲಂಗಾಣ ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ.

ಹೊರ ಗುತ್ತಿಗೆ: ನಾಲ್ಕು ನಿಗಮಗಳ ವಾಹನಗಳು ಮತ್ತು ಮೂಲ ಸೌಕರ್ಯಗಳನ್ನು ಈ ಸೇವೆಗೆ ಬಳಕೆ ಮಾಡಿಕೊಳ್ಳಲಿದೆ. ಆದರೆ, ಸಿಬ್ಬಂದಿ ಜತೆಗೆ ನಿರ್ವಹಣೆ ಜವಾಬ್ದಾರಿಯನ್ನು ಹೊರ ಗುತ್ತಿಗೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ನಡೆಸಿ ಚಾಂಪಿಯನ್ ಗ್ರೂಪ್ ಎಂಬ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದೆ.

‘ಕೊರಿಯರ್ ಸೇವೆ ನಿರ್ವಹಿಸುವ ಈ ಸಂಸ್ಥೆಗೆ ಶೇ 17.5ರಷ್ಟು ಕಮಿಷನ್ ನೀಡಲು ನಿರ್ಧರಿಸಲಾಗಿದೆ. ಗೋದಾಮು ನಿರ್ಮಿಸಿಕೊಳ್ಳುವ ಜವಾಬ್ದಾರಿಯೂ ಆ ಸಂಸ್ಥೆಗೆ ಇದೆ. ಜಾಗಕ್ಕೆ ಬಾಡಿಗೆಯನ್ನೂ ಪಾವತಿಸಲಿದೆ’ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಯೊಬ್ಬರು ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕೊರಿಯರ್ ಸೇವೆಯ ವಹಿವಾಟಿನ ಹಣಕಾಸಿನ ಸಂಪೂರ್ಣ ಹಿಡಿತ ಕೆಎಸ್‌ಆರ್‌ಟಿಸಿಯಲ್ಲೇ ಇರಲಿದೆ. ಅದಕ್ಕಾಗಿಯೇ ಸಾಫ್ಟ್‌ವೇರ್ ಕೂಡ ಸಿದ್ಧಗೊಂಡಿದೆ. ನಿಗಮದ ಖಾತೆಗೆ ಜಮೆ ಆಗುವ ಹಣದಲ್ಲಿ ನಿರ್ವಹಣೆ ಮಾಡುವ ಸಂಸ್ಥೆಗೆ ನೀಡಬೇಕಿರುವ ಕಮಿಷನ್ ಪಾವತಿಸಲಾಗುವುದು. ಹೀಗಾಗಿ ಹಣಕಾಸು ದುರುಪಯೋಗವಾಗುವ ಸಾಧ್ಯತೆಯೇ ಇಲ್ಲ’ ಎಂದು ಅವರು ವಿವರಿಸಿದರು.

‘ಈ ಹೊಸ ಸೇವೆಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಅಡಿಪಾಯ ಹಾಕಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಮೊದಲ ಹಂತದಲ್ಲಿ ವರ್ಷಕ್ಕೆ ₹100 ಕೋಟಿ ವರಮಾನ ನಿರೀಕ್ಷೆ ಮಾಡಲಾಗಿದೆ. ಅಂಚೆ ಇಲಾಖೆಯ ಜತೆ ಒಪ್ಪಂದ ಮಾಡಿಕೊಂಡು ಇನ್ನಷ್ಟು ವಿಸ್ತಾರವಾಗಿ ಬೆಳೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ಮೊತ್ತದ ವರಮಾನ ಬರುವ ಸಾಧ್ಯತೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಲವು ರೀತಿಯ ಅನುಕೂಲ
‘ಕೊರಿಯರ್ ಸೇವೆ ಆರಂಭಿಸಿರುವುದರಿಂದ ಸಾರಿಗೆ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೂ ಅನುಕೂಲವಾಗಲಿದೆ’ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

‘ರಾಜ್ಯದ ಮೂಲೆ ಮೂಲೆಗೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಸಂಚರಿಸುತ್ತಿವೆ. ಈ ಜಾಲ ಉಪಯೋಗಿಸಿಕೊಂಡು ಉತ್ತಮವಾದ ಸೇವೆ ನೀಡಬಹುದಾಗಿದೆ. ವಿಶ್ವಾಸಾರ್ಹತೆ ಮತ್ತು ತ್ವರಿತ ಸೇವೆ ಸಿಗುವ ಕಾರಣ ಜನರಿಗೂ ಅನುಕೂಲವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು