ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಿಗೆ ಹರಿಯಬಿಟ್ಟರೆ ಕತ್ತರಿಸಬೇಕಾದೀತು: ಯತ್ನಾಳ್‌ಗೆ ಸಚಿವ ನಿರಾಣಿ ಎಚ್ಚರಿಕೆ

Last Updated 14 ಜನವರಿ 2023, 18:37 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಲಿಗೆ ಹರಿಬಿಟ್ಟು ಮಾತನಾಡುವುದನ್ನು ಮುಂದುವರಿಸಿದರೆ ನಾಲಿಗೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು, ಹೆಸರನ್ನು ಹೇಳದೆ ಪರೋಕ್ಷವಾಗಿ ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ವಿಜಯಪುರದವರು ಒಬ್ಬರಿದ್ದಾರೆ. ಅವರದು ಎಲುಬಿಲ್ಲದ ನಾಲಿಗೆ. ಪದೇಪದೇ ಒಬ್ಬರನ್ನು ಹಿಯಾಳಿಸಿ ಮಾತನಾಡುವುದು, ಬಾಯಿಗೆ ಬಂದಂತೆ ಟೀಕಿಸುವುದು ಅವರಿಗೆ ಅಭ್ಯಾಸವಾಗಿದೆ. ಒಳ್ಳೆಯ ಕುಟುಂಬದ ಹಿನ್ನೆಲೆ, ಸಂಸ್ಕಾರ ಇದ್ದವರು ಈ ರೀತಿ ಮಾತನಾಡುವುದಿಲ್ಲ. ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಕೂಡ ಅದೇ ಧಾಟಿಯಲ್ಲಿ ಮಾತನಾಡಬೇಕಾಗುತ್ತದೆ. ನಾಲಿಗೆ ಉದ್ದ ಇದೆ ಎಂದು ಚಾಚಿದರೆ ಕತ್ತರಿಸುವ ಕೆಲಸವೂ ನಮಗೆ ಗೊತ್ತಿದೆ’ ಎಂದರು.

‘ಬಿಜೆಪಿಗೆ ಬಂದ ಮೇಲೆ ಮುಸ್ಲಿಮರ ವಿರುದ್ಧ, ಹಿಂದುತ್ವದ ಬಗ್ಗೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಜೆಡಿಎಸ್‍ಗೆ ಹೋದಾಗ ಟಿಪ್ಪು ಟೋಪಿ ಹಾಕುತ್ತಾರೆ. ಬಿಜೆಪಿಗೆ ಬಂದಾಗ ಅದೇ ಟೋಪಿ ವಿರೋಧಿಸುತ್ತಾರೆ. ಇವರಿಗೆ ಯಾವ ಬದ್ಧತೆ ಇದೆ. ಇಂಥವರಿಂದ ನಾವು ನೈತಿಕತೆ ಪಾಠ ಕಲಿಯಬೇಕೆ’ ಎಂದು ಪ್ರಶ್ನಿಸಿದರು.

‘ನಾವು ಪಕ್ಷದ ನಿಯಮ ಮೀರಿ ಮಾತನಾಡಬಾರದು. ಪಕ್ಷ ತಾಯಿ ಸಮಾನ. ಎಷ್ಟೇ ಅಸಮಾಧಾನವಿದ್ದರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಮುಖ್ಯ ಮಂತ್ರಿ ಸೂಚನೆ ನೀಡಿದ್ದಾರೆ. ಒಂದು ವೇಳೆ ಪಕ್ಷದಲ್ಲಿರಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರಗೆ ಹೋಗಿ ಪ್ರತಿಭಟನೆ ಮಾಡಲಿ’ ಎಂದರು.

ಇನ್ನೊಬ್ಬರ ಚಾರಿತ್ರ್ಯದ ಬಗ್ಗೆ ಮಾತನಾಡುವ ಅವರು ನ್ಯಾಯಾಲಯ ದಲ್ಲಿ ಏಕೆ ತಡೆಯಾಜ್ಞೆ ತಂದಿದ್ದಾರೆ? ತಾಕತ್ತಿದ್ದರೆ ಮೊದಲು ತಡೆಯಾಜ್ಞೆ ತೆರವುಗೊಳಿಸಲಿ. ಅವರಿಗೆ ವಿಜಯಪುರ ಕ್ಷೇತ್ರದ ಜನ ಈ ಬಾರಿ ತಕ್ಕ ಉತ್ತರ ಕೊಡುತ್ತಾರೆ ಎಂದರು.

ಕಾರು ಚಾಲಕ ಮೃತಪಟ್ಟಿದ್ದು ಹೇಗೆ?
ಬಸನಗೌಡ ಪಾಟೀಲ ಯತ್ನಾಳ ಅವರ ಕಾರು ಚಾಲಕ ಕುಮಾರ್ ಹೇಗೆ ಮೃತಪಟ್ಟ ಎಂದು ಬಹಿರಂಗಪಡಿಸುವಂತೆ ಸಚಿವ ಮರುಗೇಶ ನಿರಾಣಿ ಒತ್ತಾಯಿಸಿದರು. ಹಿಂದೆ ಮೃತಪಟ್ಟ ಚಾಲಕ ಈಗಿರುವ ಚಾಲಕನ ಸಂಬಂಧಿ. ಈ ಕುರಿತು ಮಾಧ್ಯಮಗಳು ವಿವರ ಪಡೆದು ಬೆಳಕು ಚೆಲ್ಲಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT