ಶುಕ್ರವಾರ, ಜನವರಿ 27, 2023
26 °C

ಡಾ. ನಾಗೇಂದ್ರ ಕುಟುಂಬಕ್ಕೆ ₹30 ಲಕ್ಷ ಪರಿಹಾರ: ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ಕೊರೊನಾ ಸೇನಾನಿ ನಂಜನಗೂಡಿನ ಆರೋಗ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಅವರ ಕುಟುಂಬಕ್ಕೆ ನಮ್ಮ ಸರ್ಕಾರ ಕೂಡಲೇ 30 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ಅವರ ಸಾವಿನ ವಿಚಾರವನ್ನು ಅನ್ಯ ಕಾರಣಗಳಿಗೆ ದುರ್ಬಳಕೆ ಮಾಡಬಾರದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೋರಿದ್ದಾರೆ.

‘ಆರೋಗ್ಯಾಧಿಕಾರಿ ನಾಗೇಂದ್ರ ಅವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನು ಕೂಡ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಮೃತರ ಕುಟುಂಬದೊಂದಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ಆದರೆ ಅವರ ಸಾವಿನ ವಿಚಾರವನ್ನು ಬೇರೆ ಕಾರಣಗಳಿಗೆ ಬಳಸಬಾರದು. ವೈದ್ಯಾಧಿಕಾರಿಗಳ ಸಂಘದೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ನಾಗೇಂದ್ರ ಅವರ ಸಾವಿನಲ್ಲಿ ಗೊಂದಲ ಸೃಷ್ಟಿ ಮಾಡುವುದು ಅಮಾನವೀಯವಾಗುತ್ತದೆ. ಘಟನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯ ದೊರಕಿಸಿಕೊಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ... ಡಾ.ನಾಗೇಂದ್ರ ಆತ್ಮಹತ್ಯೆ: ಕುಟುಂಬಸ್ಥರಿಗೆ ನೆರವು ನೀಡುವುದಾಗಿ ಸುಧಾಕರ್‌ ಭರವಸೆ

ತನಿಖೆಗೆ ಆದೇಶ
‘ನಾಗೇಂದ್ರ ಅವರು ಜನಪರ, ಸಹೃದಯಿ ಹಾಗೂ ಬಹಳ ಸೂಕ್ಷ್ಮ ಮನಸ್ಸಿನವರು ಎಂದು ತಿಳಿಯಿತು. ಒಬ್ಬ ವೈದ್ಯನಾಗಿ ಅವರ ಸಾವಿನ ನೋವು ನನಗೂ ಅರ್ಥವಾಗುತ್ತದೆ. ಅವರ ಸಾವಿನ ತನಿಖೆಗೆ ಆದೇಶ ಮಾಡಿದ್ದು, ಕುಟುಂಬಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

‘ಕೊರೊನಾ ವಾರಿಯರ್‌ಗಳ ಕಷ್ಟಕ್ಕೆ ಸರ್ಕಾರ ಸದಾ ಸ್ಪಂದಿಸುತ್ತದೆ. ವೈದ್ಯ ಸಿಬ್ಬಂದಿ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡಕ್ಕೊಳಗಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ರಜೆ, ಒತ್ತಡ ಕಡಿಮೆ ಮಾಡಲು ಎಲ್ಲ ಬಗೆಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೊರೊನಾ ವಾರಿಯರ್‌ಗಳಿಗೆ ಏನೇ ಒತ್ತಡಗಳಿದ್ದರೂ ಮೇಲಧಿಕಾರಿಗಳ ಬಳಿ ಹೇಳಿಕೊಳ್ಳಬೇಕು’ ಎಂದು ಸಚಿವರು ಕೋರಿದ್ದಾರೆ.

ಇದನ್ನೂ ಓದಿ... ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಮೃತದೇಹವಿಟ್ಟು ಪ್ರತಿಭಟನೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು