ಭಾನುವಾರ, ಮೇ 29, 2022
31 °C

ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಯಾರಿಗೂ ಅಸಮಾಧಾನ ಇಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಉಸ್ತುವಾರಿ ಹಂಚಿಕೆಗೂ ಮೊದಲು ನಾನು ಎಲ್ಲ ಸಚಿವರ ಜೊತೆ ಮಾತನಾಡಿದ್ದೇನೆ. ಯಾರೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾರಿಗೂ ಅಸಮಾಧಾನ ಇಲ್ಲ. ಆ ಪ್ರಶ್ನೆಯೇ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು ‘ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡುವ ಮೊದಲು ಮತ್ತು ನಂತರ ಎಲ್ಲರ ಜೊತೆಗೂ ಮಾತನಾಡಿದ್ದೇನೆ. ಸ್ವಂತ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಉಸ್ತುವಾರಿ ನೀಡಬೇಕು ಎನ್ನುವಂಥದ್ದು ನಮ್ಮ ಪಕ್ಷದ ರಾಷ್ಟ್ರೀಯ ನೀತಿ. ಇದರ ಬಗ್ಗೆ ಸುದೀರ್ಘವಾಗಿ ಸಚಿವರ ಕೊತೆ ಚರ್ಚೆ ಮಾಡಿದ್ದೇನೆ’ ಎಂದರು.

‘ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ. ಒಂದಾಗಿದ್ದೇವೆ. ಸರ್ಕಾರವನ್ನು ಅತ್ಯಂತ ಸೂಕ್ತವಾಗಿ ಜನರ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದೇನೆ. ಅಸಮಾಧಾನ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಕಾಂಗ್ರೆಸ್ಸಿಗರಿಗೆ ಅಭದ್ರತೆ ಕಾಡುತ್ತಿದೆ ಎನ್ನುವುದು ಅವರಿಬ್ಬರ ಹೇಳಿಕೆಗಳಿಗಿಂತ ಗೊತ್ತಾಗುತ್ತಿದೆ. ಅದರ ಪ‍ರಿಣಾಮ ಇಬ್ಬರೂ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಬಿಜೆಪಿಯಿಂದ ಯಾರೂ ಹೋಗುವ ಪ್ರಶ್ನೆಯೇ ಇಲ್ಲ’ ಎಂದರು.

‘ರಾಜಕೀಯ ಬೆಳವಣಿಗೆಳ ಬಗ್ಗೆ ವ್ಯಾಖ್ಯಾನಗಳನ್ನು ನಾನು ಈಗ ಮಾಡುವುದಿಲ್ಲ. ಆದರೆ, ಕೆಲವೇ ದಿನ ಕಾಯಿರಿ. ಬಿಜೆಪಿ ಪರವಾಗಿ ಯಾವ ರೀತಿ ಬಲವರ್ಧನೆ ಆಗುತ್ತದೆ ಎಂದು ನೀವೇ ನೋಡಿ‘ ಎಂದರು.

ಜೈಲು ಡಿಜಿ ಜೊತೆ ಮಾತನಾಡುತ್ತೇನೆ:  ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿ ಆಗಿರುವ ಜೆಸಿಬಿ ನಾರಾಯಣ ಹಣ ಕೊಟ್ಟು ಸೌಲಭ್ಯ ಪಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅಲ್ಲಿ ಏನು ನಡೆಯುತ್ತಿದೆ ಎನ್ನುವುದರ ವಾಸ್ತವಿಕ ವರದಿ ತರಿಸಿಕೊಳ್ಳುತ್ತೇನೆ. ಜೈಲು ಡಿಜಿ ಅವರನ್ನು ಕರೆಸಿ ಮಾತನಾಡುತ್ತೇನೆ’ ಎಂದರು.

Koo App
ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರಿಗೆ ಅದೇ ಜಿಲ್ಲೆಯ ಉಸ್ತುವಾರಿಯ ಜವಾಬ್ದಾರಿ ಕೊಡದಿರುವ ನಮ್ಮ @BJP4Karnataka ಸರ್ಕಾರದ ವಿನೂತನ ಪ್ರಯೋಗ ಸ್ವಾಗತಾರ್ಹ. ಇದರನ್ವಯ ರಾಮನಗರದ ಉಸ್ತುವಾರಿ ಜವಾಬ್ದಾರಿಯನ್ನು ನನಗೆ ವಹಿಸಿದ್ದು ಮಾನ್ಯ ಮುಖ್ಯಮಂತ್ರಿ @bsbommai ನೇತೃತ್ವದಲ್ಲಿ ಜಿಲ್ಲೆಯ ಅಭಿವೃದ್ಧಿಗಾಗಿ ಒಂದು ತಂಡವಾಗಿ ಶ್ರಮಿಸಲಿದ್ದೇವೆ.

- Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 25 Jan 2022

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು