ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರಣಿ ಕುಳಿತಿದ್ದ ಕಾಂಗ್ರೆಸ್‌ ಸದಸ್ಯನಿಗೆ ’ಏಯ್ ಹೋಗಾಚೆ’ ಎಂದ ಸಚಿವರು: ಗದ್ದಲ

ವಿಧಾನಸಭೆ
Last Updated 21 ಡಿಸೆಂಬರ್ 2022, 10:57 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಸಭಾಧ್ಯಕ್ಷರ ಪೀಠದ ಮುಂದೆ ಧರಣಿಯಲ್ಲಿದ್ದ ಕಾಂಗ್ರೆಸ್‌ ಸದಸ್ಯ ಎಚ್‌.ಡಿ.ರಂಗನಾಥ್‌ ಅವರನ್ನು ಉದ್ದೇಶಿಸಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಮತ್ತು ಗೋವಿಂದಕಾರಜೋಳ ಅವರು ’ಏಯ್ ಹೋಗಾಚೆ, ಕೂತ್ಕೋ‘ ಎಂದು ಗದರಿದ್ದು, ಬುಧವಾರ ವಿಧಾನಸಭೆಯಲ್ಲಿ ಭಾರಿ ಗದ್ದಲ ಮತ್ತು ಧರಣಿಗೆ ಕಾರಣವಾಯಿತು. ಕಲಾಪ ಎರಡು ಬಾರಿ ಮುಂದೂಡಿಕೆ ಆಯಿತು.

ಧರಣಿಯಲ್ಲಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಸಚಿವರ ವಿರುದ್ಧ ಹರಿಹಾಯ್ದ ಕಾರಣ ಅವರನ್ನು ಸದನದಿಂದ ಹೊರಹಾಕಬೇಕು ಎಂದು ಸಚಿವ ಮಾಧುಸ್ವಾಮಿ ಸಭಾಧ್ಯಕ್ಷರನ್ನು ಆಗ್ರಹಿಸಿದ ಘಟನೆಗೂ, ಏಕವಚನಗಳ ಪದಗಳ ಬಳಕೆಗೂ ವಿಧಾನಸಭೆ ಸಾಕ್ಷಿ ಆಯಿತು.

ಗದ್ದಲಕ್ಕೆ ಕಾರಣವೇನು?

ಬಿಜೆಪಿಯ ಸಿದ್ದು ಸವದಿ ಅವರು ಗ್ರಾಮಾಂತರ ಪ್ರದೇಶದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಿದೆ ಎಂಬ ವಿಷಯವನ್ನು ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರು ಇದಕ್ಕೆ ಧ್ವನಿಗೂಡಿಸಿದರು. ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು, ಕೋವಿಡ್‌ ಕಾರಣದ ಜತೆಗೆ ರಸ್ತೆಗಳು ಸರಿ ಇಲ್ಲದ ಕಾರಣ ಮತ್ತು ಡ್ರೈವರ್‌–ಕಂಡಕ್ಟರ್‌ ಇಲ್ಲದ್ದರಿಂದ ಬಸ್‌ ಬಿಡಲು ಆಗಿಲ್ಲ ಎಂದು ಹೇಳಿದರು.

ಈ ಉತ್ತರದಿಂದ ಕೆರಳಿದ ಜೆಡಿಎಸ್‌ ಸಭಾಧ್ಯಕ್ಷರ ಪೀಠದತ್ತ ಧಾವಿಸಿದರು. ಕಾಂಗ್ರೆಸ್‌ ಸದಸ್ಯರೂ ಅವರನ್ನು ಹಿಂಬಾಲಿಸಿದರು. ಎಚ್ಚೆತ್ತುಕೊಂಡ ಸಚಿವ ರಾಮುಲು ಅವರು, ನಾಲ್ಕು ವಿಭಾಗಗಳ ಶಾಸಕರ ಸಭೆಯನ್ನು ಕರೆದು ಸಮಸ್ಯೆಯನ್ನು ಇದೇ ಅಧಿವೇಶನ ಮುಗಿಯುವುದರೊಳಗೆ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದೂ ಅಲ್ಲದೆ, ವಿಸ್ತೃತ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.

ಇದರಿಂದ ತೃಪ್ತರಾದ ಎರಡೂ ಪಕ್ಷಗಳ ಸದಸ್ಯರು ತಮ್ಮ ಆಸನಗಳಿಗೆ ಹಿಂದಿರುಗಿದರು. ಆದರೆ,ರಂಗನಾಥ್‌ ಮಾತ್ರ ಅಲ್ಲೇ ನಿಂತಿದ್ದರು. ಧರಣಿ ಮಾಹಿತಿ ತಿಳಿದು ಅಲ್ಲಿಗೆ ಧಾವಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಲು ನಿಂತರು. ಅದೇ ವೇಳೆ ರಂಗನಾಥ್‌ ತಮ್ಮ ಪಕ್ಷದ ಸದಸ್ಯರತ್ತ ನೋಡಿ ಮಾತನಾಡಿ ಎಂದು ಸಂಜ್ಞೆ ಮಾಡಿದ್ದು ಮಾಧುಸ್ವಾಮಿ ಅವರನ್ನು ಕೆರಳಿಸಿತು. ‘ನಿಂದೇನು ಸ್ಪೆಷಲ್ ಹೋಗು ಆಚೆಗೆ, ಕೂತ್ಕೋ’ ಎಂದರು. ಗೋವಿಂದ ಕಾರಜೋಳ ಕೂಡ ಎದ್ದು ನಿಂತು ಹೋಗಾಚೆ ಎಂದು ಗದರಿದರು. ಸಚಿವರ ವರ್ತನೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು, ಸಭಾಧ್ಯಕ್ಷರ ಪೀಠದತ್ತ ಧಾವಿಸಿ ಬಂದರು.

ಸಚಿವರು ವಿಷಾದ ವ್ಯಕ್ತಪಡಿಸಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಈ ಹಂತದಲ್ಲಿ ಕಾಂಗ್ರೆಸ್‌ ಸದಸ್ಯರು ಮತ್ತು ಸಚಿವರ ಮಧ್ಯೆ ವಾಗ್ವಾದ ನಡೆಯಿತು. ಕಲಾಪದ ವೇಳೆ ಸದಸ್ಯರು ಹೇಗೆ ವರ್ತಿಸಬೇಕು ಎಂಬ ನಿಯಮಾವಳಿ ಇದೆ. ಅದರಂತೆಯೇ ವರ್ತಿಸಬೇಕು. ಅದನ್ನು ಮೀರಿ ವರ್ತಿಸುವುದು ಎಷ್ಟು ಸರಿ? ಎಂದು ಸಚಿವ ಮಾಧುಸ್ವಾಮಿ ಏರಿದ ಧ್ವನಿಯಲ್ಲೇ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಇಂತಹ ಪಾಳೆಗಾರಿಕೆಗೆ ಹೆದರುವುದಿಲ್ಲ. ಇವರೆನ್ನೆಲ್ಲಾ ನೋಡಿಕೊಂಡು ಬಂದಿದ್ದೇನೆ. ಪಾಳೆಗಾರಿಕೆ, ಗಲಾಟೆ ಮತ್ತು ಬೆದರಿಕೆಗಳಿಗೆ ನಾನು ಮಣಿಯುವುದಿಲ್ಲ ಎಂದು ಗೋವಿಂದಕಾರಜೋಳ ಹರಿಹಾಯ್ದರು.

ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು, ಸಚಿವರು ಉತ್ತರ ಕೊಟ್ಟ ಮೇಲೆ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ಹಿಂದಿರುಗಿದರು. ರಂಗನಾಥ್‌ ಒಬ್ಬರೇ ಉಳಿದಿದ್ದರು. ಇದು ಸರಿಯಾದ ರೀತಿ ಅನ್ನಿಸಲಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಕಾರಜೋಳ ಅವರ ಹಾವಭಾವ ನೋಡಿದರೆ ಹೆದರಿಸುವ ಹಾಗೆ ಇತ್ತು. ಒಬ್ಬ ಸಚಿವ ಶಾಸಕರನ್ನು ಈ ರೀತಿ ಹೆದರಿಸುವುದೇ? ನೀವು ನಮಗೆ ಮಾತ್ರ ನೀತಿ ಪಾಠ ಮಾಡುತ್ತೀರಿ, ಸಚಿವರಿಗೆ ಏಕೆ ಹೇಳಲ್ಲ ಎಂದು ಸಿದ್ದರಾಮಯ್ಯ ಅವರು ಸಭಾಧ್ಯಕ್ಷ ಸ್ಥಾನದಲ್ಲಿದ್ದ ಕುಮಾರ್‌ ಬಂಗಾರಪ್ಪ ಅವರನ್ನು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ವಾಗ್ದಾಳಿಯಿಂದ ಉತ್ತೇಜಿತರಾದ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ,ಯತೀಂದ್ರ ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ ಅವರು, ಗೂಂಡಾಗಿರಿ ಸರ್ಕಾರ, ರೌಡಿಗಳ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಕೂಗಿ ಕೂಗಿ ಎಂದು ಸಿದ್ದರಾಮಯ್ಯ ಶಾಸಕರನ್ನು ಹುರಿದುಂಬಿಸುತ್ತಿದ್ದದ್ದು ಕಂಡು ಬಂದಿತು.

ಭೋಜನ ವಿರಾಮದ ಬಳಿಕ ಸಭಾಧ್ಯಕ್ಷರ ಕೊಠಡಿಯಲ್ಲಿ ಆಡಳಿತ ಮತ್ತು ವಿರೋಧಪಕ್ಷದ ನಾಯಕರ ಮಧ್ಯೆ ಮಾತುಕತೆ ನಡೆದು, ಗದ್ದಲಕ್ಕೆ ತೆರೆ ಹಾಕಲು ನಿರ್ಣಯಿಸಿದರು. ಬಳಿಕ ಕಲಾಪ ಸಮಾವೇಶಗೊಂಡ ಬಳಿಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಪರಸ್ಪರ ಶಾಸಕರು ಮತ್ತು ಸಚಿವರು ಗೌರವದಿಂದ ನಡೆದುಕೊಳ್ಳಬೇಕು. ಜನರ ಸಮಸ್ಯೆಗಳ ವಿಚಾರವಾಗಿ ಹೆಚ್ಚು ಚರ್ಚೆ ನಡೆಯಬೇಕು ಎಂದು ಧರಣಿಗೆ ಮುಕ್ತಾಯ ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT