ಸೋಮವಾರ, ಆಗಸ್ಟ್ 15, 2022
26 °C

ದೇಶದ ಆರ್ಥಿಕ ಸ್ಥಿತಿ ಹದಗೆಡಲು ಮೋದಿ ಕಾರಣ: ಕಾಂಗ್ರೆಸ್‌ ನಾಯಕ ವಿ.ಎಸ್‌. ಉಗ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ದೇಶದ ಆರ್ಥಿಕ ಸ್ಥಿತಿ ಹದಗೆಡಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಟೀಕಿಸಿದರು.

ಭಾನುವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಆಧುನಿಕ ಭಸ್ಮಾಸುರ. ಇವರಷ್ಟು ಬೇಜವಾಬ್ದಾರಿ ಪ್ರಧಾನಿಯನ್ನು ದೇಶ ಕಂಡಿಲ್ಲ. ಇವರ ಬೇಜವಾಬ್ದಾರಿತನದಿಂದ ಕೋವಿಡ್‌ನಿಂದ ದೇಶದಾದ್ಯಂತ ಅಪಾರ ಜನ ಮೃತಪಟ್ಟಿದ್ದಾರೆ. ಮೂರು ಕೋಟಿಗೂ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾದರೆ, 3 ಲಕ್ಷ ಜನ ಮರಣ ಹೊಂದಿದ್ದಾರೆ’ ಎಂದರು.

‘ಪೆಟ್ರೋಲ್‌, ಡೀಸೆಲ್‌ ದರ, ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಗಗನಕ್ಕೆ ಏರುತ್ತಿದೆ. ಹೀಗಿದ್ದರೂ ಮೋದಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಬೆಲೆ ಇಳಿಸುತ್ತಾರೆ. ಮುಗಿದ ತಕ್ಷಣ ಹೆಚ್ಚಿಸುತ್ತಾರೆ. ಜನ ಅವರಿಗೆ ಪಾಠ ಕಲಿಸದಿದ್ದರೆ ಇದು ಹೀಗೆಯೇ ಮುಂದುವರೆಯುತ್ತದೆ’ ಎಂದು ಹೇಳಿದರು.

ಜನರ ಒಳಿತಿಗೆ ಕೆಲಸ ಮಾಡಲಿ: ‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಮಗನ ಮೇಲಿನ ಧೃತರಾಷ್ಟ್ರ ಪ್ರೇಮ ಕೈಬಿಡಬೇಕು. ರಾಜ್ಯದ ಜನರ ಒಳಿತಿಗೆ ಕೆಲಸ ಮಾಡಬೇಕು’ ಎಂದು ಉಗ್ರಪ್ಪ ತಾಕೀತು ಮಾಡಿದರು.

‘ಯಡಿಯೂರಪ್ಪನವರ ಸಿ.ಡಿ. ಹೊರಬಂದರೆ ಅವರು ಇನ್ನೊಬ್ಬ ರಮೇಶ ಜಾರಕಿಹೊಳಿ ಆಗುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಹೇಳಿದ್ದಾರೆ. ಸಚಿವ ಸಿ.ಪಿ. ಯೋಗೇಶ್ವರ್‌ ಲ್ಯಾಪ್‌ಟಾಪ್‌ ಹಿಡಿದುಕೊಂಡು ಮಠಗಳಿಗೆ ಓಡಾಡುತ್ತಿದ್ದಾರೆ. ವಿದೇಶದಲ್ಲಿ ಯಡಿಯೂರಪ್ಪ ಹಣ ಇಟ್ಟಿದ್ದಾರೆ ಎಂದು ಬಿಜೆಪಿ ಶಾಸಕರೇ ಹೇಳಿದರೂ ಯಡಿಯೂರಪ್ಪ ಮೌನಿಬಾಬಾ ಆಗಿದ್ದಾರೆ. ಹೈಕಮಾಂಡ್‌ ಬಯಸಿದರೆ ಸಿ.ಎಂ. ಸ್ಥಾನ ತೊರೆಯುವೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಎಂದೂ ಅವರು ಈ ರೀತಿ ಹೇಳಿದವರಲ್ಲ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದು ಹೇಳಿದರು.

‘ಜಿಂದಾಲ್‌ಗೆ ಭೂಮಿ ಕೊಟ್ಟು ಸರ್ಕಾರ ಪುನಃ ಅದನ್ನು ವಾಪಸ್‌ ಪಡೆದಿದೆ. ಈ ಕುರಿತು ಈ ಹಿಂದೆ ಧರಣಿ ನಡೆಸಿದ್ದ ಆನಂದ್‌ ಸಿಂಗ್‌, ಅವರ ಸರ್ಕಾರ ಜಿಂದಾಲ್‌ಗೆ ಭೂಮಿ ಕೊಟ್ಟಾಗ ಏಕೆ ಒಪ್ಪಿಕೊಂಡರು. ಇವರಿಗೆ ಕೊಟ್ಟ ಕಿಕ್‌ಬ್ಯಾಕ್‌ ಸಾಕಾಗಲಿಲ್ಲವೇ?’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ, ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಗಾದೆಪ್ಪ, ನಿಂಬಗಲ್ ರಾಮಕೃಷ್ಣ, ಗುಜ್ಜಲ್ ನಾಗರಾಜ್, ಪತ್ರೇಶ್‌ ಹಿರೇಮಠ ಇದ್ದರು.

ತೈಲಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

‘ತೈಲ ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದ್ದು, ಅದರ ಭಾಗವಾಗಿ ಸೋಮವಾರ (ಜೂ.14) ನಗರದ ಉದ್ಯೋಗ ಪೆಟ್ರೋಲ್‌ ಬಂಕ್‌ ಬಳಿ ಕೂಡ ನಡೆಸಲಾಗುವುದು’ ಎಂದು ವಿ.ಎಸ್‌. ಉಗ್ರಪ್ಪ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು