ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಝಿಲ್‌ ಕೊಲೆ ಪ್ರಕರಣ: ಶಾಸಕ ಭರತ್‌ ಶೆಟ್ಟಿ ಹೇಳಿಕೆಗೆ ಕಾಂಗ್ರೆಸ್ ಕಿಡಿ

ಅಕ್ಷರ ಗಾತ್ರ

ಬೆಂಗಳೂರು: ಫಾಝಿಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ, ಅವರ ಕುಟುಂಬದಲ್ಲಿ ಭೀತಿ ಹುಟ್ಟಿಸಿದರೆ ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂಬ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ರೀತಿಯ ಹೇಳಿಕೆ ನೀಡುವ ಮೂಲಕ, ಬಿಜೆಪಿ ಕಾರ್ಯಕರ್ತರು ಶಾಮೀಲಾಗಿದ್ದರೆ ಕಾನೂನು ಕ್ರಮ ಅನುಸರಿಸಬಾರದು ಎಂದು ಶಾಸಕರು ಸೂಚಿಸುತ್ತಿದ್ದಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಭರತ್ ಶೆಟ್ಟಿ ಹೇಳಿಕೆಗೆ ಸಂಬಂಧಿಸಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಪ್ರಕಟಿಸಿದ್ದ ವರದಿಯ ತುಣುಕನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಬಿಜೆಪಿ ಶಾಸಕರ ಈ ರೀತಿಯ ಬೆದರಿಕೆಗಳು ಅವರ ಕಾರ್ಯಕರ್ತರನ್ನು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಹುರಿದುಂಬಿಸಿವೆ ಹಾಗೂ ಪೊಲೀಸರನ್ನು ನಿರಾಶೆಗೊಳಿಸಿವೆ. ಇದುವೇ ಉತ್ತರ ಪ್ರದೇಶ ಮಾದರಿಯಾ?’ ಎಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದನ್ನು ಬಿಟ್ಟು, ಅಮಾಯಕ ಕಾರ್ಯಕರ್ತರನ್ನು ಎಳೆದುಕೊಂಡು ಹೋಗಿ ತನಿಖೆಯ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಭರತ್ ಶೆಟ್ಟಿ ಆರೋಪಿಸಿದ್ದರು. ಶಾಸಕರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌, ‘ನಮಗೆ ಆರೋಪಿಗಳಷ್ಟೇ ಮುಖ್ಯ. ನಾವು ಅವರು ಯಾವ ಸಂಘಟನೆಯವರು ಎಂದೆಲ್ಲಾ ನೋಡಲು ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

ಈ ಮಧ್ಯೆ,ಹತ್ಯೆ ಪ್ರಕರಣದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಮಂಗಳೂರಿನ ಅಜಿತ್ ಕ್ರಾಸ್ತ ಎಂದು ಗುರುತಿಸಲಾಗಿದೆ.ಅಜಿತ್ ಕ್ರಾಸ್ತಾ ಅವರು ಕೊಲೆ ಕೃತ್ಯಕ್ಕೆ ಬಳಸಲಾದ ಹ್ಯುಂಡೈ ಕಾರಿನ ಮಾಲೀಕ. ಕೃತ್ಯದಲ್ಲಿ ಅಜಿತ್ ನೇರವಾಗಿ ಭಾಗಿಯಾಗಿದ್ದರೇ, ಅಥವಾ ಅವರ ಕಾರನ್ನು ಮಾತ್ರ ಬಳಸಲಾಗಿತ್ತೇ ಎಂಬುದು ವಿಚಾರಣೆ ಬಳಿಕವಷ್ಟೇ ತಿಳಿದು ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT