ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವನಾಥ್‌ಗೆ ಹಣ; ಲೋಕಾಯುಕ್ತ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಐಸಿಸ್‌ ಎಂಬ ಟ್ವೀಟ್‌ಗೆ ಗರಂ
Last Updated 3 ಡಿಸೆಂಬರ್ 2020, 14:03 IST
ಅಕ್ಷರ ಗಾತ್ರ

ಮೈಸೂರು: ‘ಹುಣಸೂರು ಉಪಚುನಾವಣೆ ಖರ್ಚಿಗೆಂದು ಬಿಜೆ‍ಪಿ ನೀಡಿದ ದೊಡ್ಡ ಮೊತ್ತವನ್ನು ಎನ್‌.ಆರ್‌.ಸಂತೋಷ್ ಹಾಗೂ ಸಿ.ಪಿ.ಯೋಗೀಶ್ವರ್ ತಮಗೆ ತಲುಪಿಸದೇ ಲಪಟಾಯಿಸಿದರು ಎಂಬ ವಿಶ್ವನಾಥ್ ಆರೋಪದ ವಿಚಾರವಾಗಿ ಲೋಕಾಯುಕ್ತ ತನಿಖೆ ನಡೆಯಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

‘ಇದು ಕೇವಲ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ್ದಲ್ಲ. ಉಪಚುನಾವಣೆಯಲ್ಲಿ ಉಳಿದ ಕ್ಷೇತ್ರಗಳಿಗೆ ಎಷ್ಟು ದೊಡ್ಡ ಮೊತ್ತ ಹೋಗಿದೆ? ಹಣ ನೀಡಿದ್ದು ಯಾರು? ಎಷ್ಟು ಹಣ? ಅದು ಬ್ಲ್ಯಾಕ್ ಮನಿಯೇ ಅಥವಾ ವೈಟ್‌ ಮನಿಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಲಿ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕುರುಬ ಸಮುದಾಯದ ಎಸ್‌ಟಿ ಹೋರಾಟದ ಕುರಿತು, ‘ಈ ವಿಚಾರದಲ್ಲಿ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ. ನನ್ನನ್ನು ಏಕಾಂಗಿ ಮಾಡಲು ಹಾಗೂ ಕೆಟ್ಟ ಹೆಸರಲು ತರಲು ಹುನ್ನಾರ ನಡೆದಿದೆ. ಇದರ ಹಿಂದೆ ಆರ್‌ಎಸ್‌ಎಸ್‌ ಇದ್ದು, ಕುರುಬ ಸಮುದಾಯವನ್ನು ಒಡೆಯುವ ಪ್ರಯತ್ನ ನಡೆದಿದೆ. ಇದಕ್ಕೆ ಈಶ್ವರಪ್ಪ ಕೈಗೊಂಬೆಯಾಗಿದ್ದಾರೆ’ ಎಂದು ಆರೋ‍ಪಿಸಿದರು.

‘ಹೋರಾಟಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ನನಗೆ ಒಮ್ಮೆ ಫೋನ್‌ ಮಾಡಿದ್ದರು. ಅದನ್ನು ಬಿಟ್ಟರೆ ಯಾರೂ ನನ್ನನ್ನು ಕರೆದಿಲ್ಲ. ರಾಜಕೀಯೇತರ ಹೋರಾಟವಾಗಿದ್ದರೆ ನಾನು ಹೋಗುತ್ತಿದ್ದೆ’ ಎಂದರು.

‘ಈಶ್ವರಪ್ಪ ಕುರುಬರ ಪರವಾಗಿ ಯಾವಾಗ ಹೋರಾಟ ಮಾಡಿದ್ದಾರೆ ಹೇಳಿ? ಹಿಂದುಳಿದ ವರ್ಗದ ಹಿತ ಕಾಪಾಡಿದ್ದಾರೆಯೇ? ಸ್ವಾರ್ಥಕ್ಕಾಗಿ ರಾಯಣ್ಣ ಬ್ರಿಗೇಡ್‌ ಕಟ್ಟಿದರು. ಅದು ಈಗ ಏನಾಗಿದೆ? ಉಡುಪಿಯಲ್ಲಿ ಕನಕ ಗೋಪುರ ಒಡೆದಾಗ ಮಠದ ಪರ ಮಾತನಾಡಿದರು. ಕುರುಬರ ಮಠ ಕಟ್ಟುವಾಗ ಎಲ್ಲಿದ್ದರು? ಮೀಸಲಾತಿ ಪರವಾಗಿ ಹೋರಾಟ ಮಾಡಿಲ್ಲ. ಸಂವಿಧಾನ ಸುಟ್ಟುಹಾಕಬೇಕು ಎಂದು ಅನಂತಕುಮಾರ ಹೆಗಡೆ ಹೇಳಿದಾಗ ಈಶ್ವರಪ್ಪ ಖಂಡಿಸಲಿಲ್ಲ. ಮುಸ್ಲಿಮರಿಗೆ ಟಿಕೆಟ್ ಕೊಡಲ್ಲ ಎಂಬ ಹೇಳಿಕೆ ನೀಡುವ ಅವರಿಗೆ ಸಂವಿಧಾನದ ಮೇಲೆ ಗೌರವ ಇದೆಯೇ’ ಎಂದು ಹರಿಹಾಯ್ದರು.

ಲವ್‌ ಜಿಹಾದ್ ತಡೆಗೆ ಕಾನೂನು ಜಾರಿಗೆ ತರುವ ಬಿಜೆಪಿ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಮದುವೆ ವಿಚಾರ ವೈಯಕ್ತಿಕ. ಇಂಥವರನ್ನೇ ಮದುವೆ ಆಗಬೇಕು ಎಂದು ಹೇಳಲು ಇವರು ಯಾರು? ಈ ಕಾನೂನು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ’ ಎಂದರು.

ಐಸಿಸ್‌ ಎಂಬ ಟ್ವೀಟ್‌ಗೆ ಸಿದ್ದರಾಮಯ್ಯ ಗರಂ
ಐಸಿಸ್‌ ಉಗ್ರಗಾಮಿ ಸಂಘಟನೆ‌ ಹಾಗೂ ಸಿದ್ದರಾಮಯ್ಯ ಅವರ ಮನಸ್ಥಿತಿ ಎರಡೂ ಒಂದೇ ಎಂಬ ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯಿಸಿ, ‘ಸಂವಿಧಾನದ ಮೇಲೆ ನಂಬಿಕೆ, ಗೌರವ ಇಟ್ಟುಕೊಂಡವನು ನಾನು. ಸಹಬಾಳ್ವೆ, ಸಹಿಷ್ಟುತೆ, ಬಹುತ್ವದ ಮೇಲೆ ನಂಬಿಕೆ ಇದೆ. ಆದರೆ, ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆಯೇ ಇಲ್ಲ. ಹೀಗಾಗಿ, ಅವರು ಹೇಳಿದ್ದು ಅವರಿಗೇ ಅನ್ವಯಿಸುತ್ತದೆ’ ಎಂದು ಸಿದ್ದರಾಮಯ್ಯ ಗರಂ ಆದರು.

‘ಪ್ರಚೋದನೆ ಮಾಡುವುದು, ಬೆಂಕಿ ಇಡುವುದು, ಹುಳಿ ಹಿಂಡುವುದು ಬಿಜೆಪಿ ಕೆಲಸ. ಯಾರದ್ದು ಐಸಿಸ್ ಉಗ್ರರ ಮನಸ್ಥಿತಿ ಎಂಬುದನ್ನು ಜನರೇ ನಿರ್ಧರಿಸಬೇಕು’ ಎಂದು ನುಡಿದರು.

‘ಸಿ.ಎಂ ಬದಲಾವಣೆ ಖಚಿತ’
‘ನನ್ನ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತಾರೆ. ಈ ವಿಚಾರ ತಿಳಿದುಕೊಳ್ಳಲು ನನಗೆ ಬೇಕಾದಷ್ಟು ಮೂಲಗಳಿವೆ. ಬಿಜೆಪಿ ನಾಯಕರ ಸಂಪರ್ಕದಲ್ಲೇ ಇರಬೇಕು ಎಂದೇನಿಲ್ಲ. ಈ ಬಗ್ಗೆ ಒಂದು ತಿಂಗಳ ಹಿಂದೆಯೂ ಹೇಳಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಸರ್ಕಾರ ಇನ್ನೂ ಟೇಕಾಫ್‌ ಆಗಿಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ನೆಲೆಸಿದೆ. ಯಡಿಯೂರಪ್ಪ ಅಸಮರ್ಥ ಮುಖ್ಯಮಂತ್ರಿ. ನಿಗಮ, ಮಂಡಳಿಗಳ ರಚನೆ ಸಂವಿಧಾನಬದ್ಧವಾಗಿ ನಡೆದಿಲ್ಲ. ಯಾರನ್ನೋ ಓಲೈಸಲು ರಚಿಸಲಾಗಿದೆ’ ಎಂದು ಟೀಕಿಸಿದರು.

‘ಬಿಜೆಪಿಯು ಈಗ ಗ್ರಾಮ ಸ್ವರಾಜ್‌ ಸಮಾವೇಶ ಮಾಡುತ್ತಿದೆ. ಗಾಂಧಿಯನ್ನು ಕೊಂದವರು ಈಗ ಅವರ ಪರಿಕಲ್ಪನೆಯನ್ನು ಕಾಪಿ ಮಾಡುತ್ತಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT