ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ, ತೋಳ್ಬಲದ ಚುನಾವಣೆ ಸಂಸ್ಕೃತಿ ಕಾಂಗ್ರೆಸ್‌ನದ್ದು: ಯಡಿಯೂರಪ್ಪ

ಆರ್‌ಎಸ್‌ಎಸ್‌ ಬಗ್ಗೆ ಪ್ರಶ್ನಿಸುವ ಹಕ್ಕು ಕುಮಾರಸ್ವಾಮಿಗೆ ಇಲ್ಲ: ಯಡಿಯೂರಪ್ಪ
Last Updated 21 ಅಕ್ಟೋಬರ್ 2021, 19:42 IST
ಅಕ್ಷರ ಗಾತ್ರ

ಸಿಂದಗಿ (ವಿಜಯಪುರ): ‘ಕಾಂಗ್ರೆಸ್ ಪಕ್ಷ ದಿನವೂ ಬಿಜೆಪಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದೆ. ಬಿಜೆಪಿ ಚೀಲದಲ್ಲಿ ಹಣ ತುಂಬಿ ಹಂಚುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದೆ. ಹಣ, ಹೆಂಡ, ತೋಳ್ಬಲ ಕಾಂಗ್ರೆಸ್ ಸಂಸ್ಕೃತಿಯೇ ವಿನಾ ಬಿಜೆಪಿಯದ್ದಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ 26 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಕಾಂಗ್ರೆಸ್‌ ಕೆಲವೆಡೆ ಉಸಿರಾಡಿಸುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ತಕ್ಕಂತೆ ವರ್ತಿಸಬೇಕು’ ಎಂದರು.

ರಾಜಕೀಯದಿಂದ ನಿವೃತ್ತಿಯಾಗುವೆ: ಸ್ವಾತಂತ್ರ್ಯಾನಂತರದಿಂದಲೂ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರರನ್ನು ತಪ್ಪು ದಾರಿಗೆ ಎಳೆದು ದ್ರೋಹ ಮಾಡುತ್ತಲೇ ಬಂದಿದೆ. ಮುಸ್ಲಿಮರೇ ಕಾಂಗ್ರೆಸ್ ವ್ಯಾಮೋಹದಿಂದ ಹೊರಬನ್ನಿ. ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಅಲ್ಪಸಂಖ್ಯಾತರಿಗೆ ದ್ರೋಹ ಮಾಡಿರುವ ಒಂದಾದರೂ ಉದಾಹರಣೆ ಕೊಟ್ಟರೆ ನಾನು ರಾಜಕೀಯದಿಂದ ನಿವೃತ್ತಿಯಾಗುವೆ’ ಎಂದು ಯಡಿಯೂರಪ್ಪ ಸವಾಲೆಸದರು.

ಆರ್‌ಎಸ್‌ಎಸ್‌ ಬಗ್ಗೆ ಪ್ರಶ್ನಿಸುವ ಹಕ್ಕು ಕುಮಾರಸ್ವಾಮಿಗೆ ಇಲ್ಲ: ‘ಆರ್‌ಎಸ್‌ಎಸ್ ಬಗ್ಗೆ ಪ್ರಶ್ನೆ ಕೇಳುವ ಹಕ್ಕು ಕುಮಾರಸ್ವಾಮಿಗೆ ಇಲ್ಲ. ಇಂಥ ಪ್ರಶ್ನೆ ಕೇಳುವ ಅಗತ್ಯ ಇಲ್ಲ. ಅವರಿಗೆ ಉತ್ತರ ಕೊಡುವ ಅಗತ್ಯವೂ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಆರ್ ಎಸ್ ಎಸ್ ಬಗ್ಗೆ ಹಗುರವಾಗಿ ಮಾತಾಡಿದರೆ ಅವರ ಗೌರವ ಕಡಿಮೆ ಆಗುತ್ತದೆಯೇ ಹೊರತು, ಸಂಘದ ಗೌರವ ಕಡಿಮೆ ಆಗೋದಿಲ್ಲ.ಈ ದೇಶದ ರಾಷ್ಟ್ರಪತಿ, ಪ್ರಧಾನಿ, ನಾವು ಆರ್ ಎಸ್ ಎಸ್ ಮೂಲಕವೇ ಬಂದಿದ್ದೇವೆ. ‌ಬಿಜೆಪಿ ಅಧಿಕಾರದಲ್ಲಿರುವ 26 ರಾಜ್ಯಗಳಲ್ಲಿನ ಬಹುತೇಕ ಮುಖಂಡರು ಆರ್.ಎಸ್.ಎಸ್‌ನಿಂದ ಬಂದವರಾಗಿದ್ದಾರೆ’ ಎಂದರು.

ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವತಃ ದೇವೇಗೌಡರೇ ಸಿಂದಗಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಾನು ಒಪ್ಪುವುದಿಲ್ಲ. ಇದರಲ್ಲಿ ಸತ್ಯಾಂಶ ಇಲ್ಲ ಎಂದರು.

ರಾಜ್ಯ ಪ್ರವಾಸ: ಅ. 30 ರಂದು ಚುನಾವಣೆ ಮುಗಿದ ಬಳಿಕ ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ‌. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 140 ಕ್ಕೂ ಹೆಚ್ಚು ಸೀಟು ಗೆಲ್ಲುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT