ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಹಾಮಳೆಗೆ ನಲುಗಿದ ಜನತೆ: ಬಾಲಕಿ ಸೇರಿ ಐದು ಮಂದಿ ಸಾವು

ಮದ್ದೂರು ಬಳಿಯೇ ಸಂಚಾರ ಬದಲಾವಣೆ
Last Updated 29 ಆಗಸ್ಟ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ನಸುಕಿನವರೆಗೂ ಧಾರಾಕಾರ ಮಳೆಯಾಗಿದ್ದು, ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ.

ರಸ್ತೆಗಳು ಜಲಾವೃತವಾಗಿ ಗ್ರಾಮಗಳ ನಡುವೆ ಸಂಪರ್ಕ ಕಡಿತವಾಗಿದ್ದು, ಜನ–ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಮಳೆ ಸಂಬಂಧಿಸಿದ ಅವಘಡಗಳಲ್ಲಿ ಬಾಲಕಿ ಸೇರಿ ಐದು ಮಂದಿ ಮೃತಪಟ್ಟಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ತೊರೆದೊಡ್ಡಿ ಗ್ರಾಮದಲ್ಲಿ ಕಾರಿನ ಮೇಲೆ ಬೃಹತ್‌ ಆಲದ ಮರ ಬಿದ್ದು ಇಟ್ಟಮಡು ನಿವಾಸಿ ಬೋರೇಗೌಡ (52) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮಧುಗಿರಿಯಲ್ಲಿ ನಿವೃತ್ತ ಶಿಕ್ಷಕ ಗಂಗಾಧರಪ್ಪ (63)ರಸ್ತೆ ಗುಂಡಿಯಿಂದಾಗಿ ಬಿದ್ದು ಸಾವಿಗೀಡಾಗಿದ್ದಾರೆ.

ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ–ಕುಸುಗಲ್‌ ರಸ್ತೆ ಮೇಲೆ ತುಂಬಿಹರಿಯುತ್ತಿದ್ದ ಬೆಣ್ಣೆ ಹಳ್ಳ ದಾಟಲು ಮುಂದಾದ ನಾಲ್ವರು ಯುವಕರ ಪೈಕಿ, ಬ್ಯಾಹಟ್ಟಿಯ ಆನಂದ ಹಿರೇಗೌಡ್ರನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೊಣ್ಣಹಳ್ಳಿಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಸವರಾಜ (60) ಹಾಗೂ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಉದ್ಬಾಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮೂರು ವರ್ಷದ ಬಾಲಕಿ ಶ್ರೀದೇವಿ ಮೃತಪಟ್ಟಿದ್ದಾಳೆ.

ರಾಮನಗರ, ಚನ್ನಪಟ್ಟಣ ತಾಲ್ಲೂಕುಗಳಲ್ಲಿ ಕುಂಭದ್ರೋಣ ಮಳೆ ಸುರಿದಿದ್ದು,ಪಟ್ಟಣ ಭಾಗಶಃ ಜಲಾವೃತಗೊಂ
ಡಿತ್ತು. ಭಕ್ಷಿಕೆರೆ ಕೋಡಿ ಪ್ರವಾಹದಂತೆ ಉಕ್ಕಿ ಹರಿದಿದ್ದು, ಮಧ್ಯಾಹ್ನದ ವೇಳೆಗೆ ಕೆರೆ ಏರಿಯೇ ಒಡೆದು ಅಪಾರ ಪ್ರಮಾಣದ ನೀರು ನಗರದತ್ತ ನುಗ್ಗಿತು.

ರಾಮನಗರದ ರಾಮಕೃಷ್ಣ ಆಸ್ಪತ್ರೆಯ ತಳ ಮಹಡಿ‌ ಪೂರ್ತಿ ಜಲಾವೃತಗೊಂಡಿದ್ದು, ರೋಗಿಗಳು ಪರದಾಡಿದರು. ತುರ್ತಾಗಿ ರೋಗಿಗಳು ಮತ್ತು ದುಬಾರಿ ವೈದ್ಯಕೀಯ ಉಪಕರಣಗಳನ್ನು ಮೇಲಿನ ಮಹಡಿಗೆ ಸ್ಥಳಾಂತರ ಮಾಡಲಾಯಿತು.

ಬೆಂಗಳೂರು- ಮೈಸೂರು ಹತ್ತು ಪಥಗಳ ಹೆದ್ದಾರಿಯಲ್ಲಿ ಇಡೀ ದಿನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಜನರು ಪರದಾಡಿದರು. ಬಸವನಪುರ ಅಂಡರ್ ಪಾಸ್ ಬಳಿ ಮಳೆ ಪ್ರವಾಹದಲ್ಲಿ ನಾಲ್ಕೈದು ಕಾರುಗಳು, ಅಟೊ ಹಾಗೂ ಒಂದು ಬಸ್ ಮುಳುಗಡೆ ಆಗಿತ್ತು. ಬಿಳಗುಂಬ ಅಂಡರ್ ಪಾಸ್‌ನಲ್ಲಿ ಖಾಸಗಿ ಬಸ್ ಸಿಲುಕಿದ್ದು, ಸ್ಥಳೀಯರು ಪ್ರಯಾಣಿಕರ ನೆರವಿಗೆ ಧಾವಿಸಿದರು. ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಉದ್ದಕ್ಕೆ ವಾಹನಗಳು ನಿಂತಿದ್ದವು.

ರಾಮನಗರ ಹಾಗೂ ಚನ್ನಪಟ್ಟಣ ರೈಲು ನಿಲ್ದಾಣಗಳಲ್ಲಿ ನೀರು ನಿಂತಿತ್ತು. ರಾಮನಗರದ ರೈಲ್ವೆ ಅಂಡರ್ ಪಾಸ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ನೀರಿನಲ್ಲಿ ಸಿಲುಕಿದ್ದು, ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದರು.

ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ತುಂಬಿ ಹರಿದಿವೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿ, ಹಲವು ಗ್ರಾಮಗಳಿಗೆ ನೀರು ನುಗ್ಗಿತ್ತು. ಮಡಿಕೇರಿ– ಮಂಗಳೂರು ರಸ್ತೆಯ 7ನೇ ಮೈಲಿ ಬಳಿ ಗುಡ್ಡದ ಮಣ್ಣು ರಸ್ತೆಗೆ ಕುಸಿದಿದೆ.ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ.

ಚನ್ನಪಟ್ಟಣ, ರಾಮನಗರದಲ್ಲಿ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವುದರಿಂದ ಮಂಡ್ಯ ಜಿಲ್ಲೆಯ ಮದ್ದೂರು ಬಳಿಯೇ ವಾಹನಗಳ ಮಾರ್ಗ ಬದಲಾಯಿಸಲಾಗಿತ್ತು. ಮೈಸೂರು ಕಡೆ ವಾಹನಗಳು ಮದ್ದೂರು– ಹುಲಿಯೂರು ದುರ್ಗ, ಕುಣಿಗಲ್‌ ಮೂಲಕ ಬೆಂಗಳೂರು ತಲುಪಿದವು.

ಹಾವೇರಿ ಜಿಲ್ಲೆಯ ಅಕ್ಕೂರ ಮತ್ತು ಮರಡೂರ ಗ್ರಾಮಗಳ ನಡುವೆ ವರದಾ ನದಿಗೆ ನಿರ್ಮಿಸಿರುವ ಸೇತುವೆ ಪ್ರವಾಹಕ್ಕೆ ಸಂಪೂರ್ಣ ಕೊಚ್ಚಿ ಹೋಗಿದೆ. 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದಿರುವುದರಿಂದ ಗ್ರಾಮದ ಜನರು ಗುತ್ತಲ ಮತ್ತು ಹೊಸರಿತ್ತಿ ಗ್ರಾಮಕ್ಕೆ ಹೋಗಲು 20 ಕಿ.ಮೀ ಸುತ್ತುವರೆದು ಸಂಚರಿಸುತ್ತಿದ್ದಾರೆ.

ಸುಬ್ರಹ್ಮಣ್ಯ ಸಮೀಪದ ಕಡಮಕಲ್ಲು ಎಸ್ಟೇಟ್‌ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಭಾರಿ ಭೂ ಕುಸಿತ ಉಂಟಾಗಿದ್ದು, ಹೊಳೆಯಲ್ಲಿ ಮಣ್ಣು ಕೊಚ್ಚಿಕೊಂಡು ಬಂದಿದೆ. ಮೂರನೇ ಬಾರಿಗೆ ಉಪ್ಪುಕಳ ಕಾಲು ಸೇತುವೆ ಕೊಚ್ಚಿ ಹೋಗಿದೆ.

ಅತಿವೃಷ್ಟಿ ಹಾನಿ ಪರಿಶೀಲಿಸಿದ ಸಿ.ಎಂ
ರಾಮನಗರ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾದ ಹಾನಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ವೀಕ್ಷಿಸಿದ್ದು, ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಮೊದಲಿಗೆ ರಾಮನಗರದ ಬಸವನಪುರ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದಾದ ಹಾನಿಯನ್ನು ಪರಿಶೀಲಿಸಿದರು. ಬಳಿಕ ರಾಮನಗರದ ಭಕ್ಷಿ ಕೆರೆ ಪ್ರದೇಶಕ್ಕೆ ಭೇಟಿ ಕೊಟ್ಟು, ಅರ್ಧ ಕಿ.ಮೀ. ಉದ್ದಕ್ಕೆ ರೈಲು ಹಳಿ ಮೇಲೆ ನಡೆಯುತ್ತಲೇ ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಮಳೆಯಿಂದ ಹಾನಿಗೊಳಗಾದ ಮನೆ ಮಾಲೀಕರಿಗೆ ₹50 ಸಾವಿರದಿಂದ ₹5 ಲಕ್ಷದವರೆಗೆ ಪರಿಹಾರ ನೀಡಲಾಗುವುದು. ಜಿಲ್ಲೆಯಲ್ಲಿ ಬೆಳೆ ಹಾನಿ ಸಂಬಂಧ ಜಂಟಿ ಸರ್ವೆ ನಡೆಸಲಾಗುವುದು. ಕೇಂದ್ರ ಸರ್ಕಾರ ಸೂಚಿಸಿರುವ ಪರಿಹಾರಕ್ಕಿಂತ ದುಪ್ಪಟ್ಟು ನೆರವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಪತ್ರಕರ್ತರಿಗೆ ಮಾಹಿತಿ ನೀಡಿದರು.

ಕಂದಾಯ ಸಚಿವ ಆರ್. ಅಶೋಕ್‌, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಚನ್ನಪಟ್ಟಣ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT