ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕರಾವಳಿಯಲ್ಲಿ ‘ರೆಡ್‌ ಅಲರ್ಟ್‌’

Last Updated 6 ಜುಲೈ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬುಧವಾರವೂ ಭಾರಿ ಮಳೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜುಲೈ 7ರಂದು ಅಧಿಕ ಮಳೆಯಾಗುವ ಸಾಧ್ಯತೆ ಇದ್ದು, ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಸತತ 5ನೇ ದಿನವೂ ಧಾರಾಕಾರ‌ ಮಳೆ‌‌ ಸುರಿದಿದೆ. ಮತ್ತೆ ಭಾರಿ ಮಳೆಯ ಮುನ್ಸೂಚನೆಯಿದ್ದು, ಗುರುವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಭಾನುವಾರ ನದಿಗೆ ಸ್ನಾನಕ್ಕೆ ತೆರಳಿದ್ದ ವೇಳೆ ನೀರುಪಾಲಾಗಿದ್ದ ಬಂಟ್ವಾಳ ತಾಲ್ಲೂಕು ಸಜಿಪಪಡು ಗ್ರಾಮದ ಅಶ್ವಿತ್ ಗಾಣಿಗ(19) ಎಂಬ ಯುವಕನ ಶವ ಉಳ್ಳಾಲ ಸಮೀಪದ ಕೋಟೆಪುರ ಕೋಡಿಯಲ್ಲಿ ಬುಧವಾರ ಪತ್ತೆಯಾಗಿದೆ.ಬೀದರ್ ಜಿಲ್ಲೆಯ ಔರಾದ್‌ ತಾಲ್ಲೂಕಿನ ನಾಗೂರ(ಬಿ) ಗ್ರಾಮದಲ್ಲಿ ಮಂಗಳವಾರ ಸಂಜೆ ಹಳ್ಳ ದಾಟುತ್ತಿದ್ದ ವೇಳೆ ಸುಮನ್‌ಬಾಯಿ ಬಾಬುರೆಡ್ಡಿ ಖಂದಾಡೆ (48) ಎಂಬುವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಭಟ್ಕಳದ ತಾಲ್ಲೂಕಿನ ಶಿರಾಲಿಯಲ್ಲಿ ಮನೆಯೊಂದರ ಮಣ್ಣಿನ ಗೋಡೆ ಕುಸಿದು ಮಹಿಳೆ ಗಾಯಗೊಂಡಿದ್ದಾರೆ. ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಡಗು ಜಿಲ್ಲೆ ಸೇರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕೆಆರ್‌ಎಸ್‌ ಜಲಾಶಯದ ಒಳಹರಿವು 30 ಸಾವಿರ ಕ್ಯುಸೆಕ್‌ ದಾಟಿದೆ. ಬುಧವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 115.70 ಅಡಿಗೆ ತಲುಪಿದೆ. ಹಾರಂಗಿ ಜಲಾಶಯಕ್ಕೆ 12,644 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 11,940 ಕ್ಯುಸೆಕ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದೆ.

ಹುಬ್ಬಳ್ಳಿ, ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ದೂಧಗಂಗಾ ಹಾಗೂ ವೇದಗಂಗಾ ಉಪನದಿಗಳು ಮೈದುಂಬಿ ಹರಿಯುತ್ತಿವೆ. ಹಾಸನ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯಾಗಿದೆ.

***

* ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ಗುರುವಾರ ರಜೆ ಘೋಷಣೆ

* ಕಡಲು ಪ್ರಕ್ಷುಬ್ಧ: ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

* ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 8ರಂದು ‘ಆರೆಂಜ್ ಅಲರ್ಟ್’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT