ಬುಧವಾರ, ಜೂನ್ 16, 2021
23 °C

ಕಪ್ಪು ಶಿಲೀಂಧ್ರ: ರಾಜ್ಯಕ್ಕೆ 1,270 ಎಂಫೋಟೆರಿಸಿನ್-ಬಿ ವಯಲ್ಸ್‌ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಪ್ಪು ಶಿಲೀಂಧ್ರ (ಬ್ಲ್ಯಾಕ್‌ ಫಂಗಸ್) ರೋಗದ ಚಿಕಿತ್ಸೆಗೆ ವಿವಿಧ ರಾಜ್ಯಗಳಿಗೆ ಹೆಚ್ಚುವರಿಯಾಗಿ ಒಟ್ಟು 23,680 ಎಂಫೋಟೆರಿಸಿನ್-ಬಿ ವಯಲ್ಸ್‌ಗಳನ್ನು ಕೇಂದ್ರ ಸರ್ಕಾರ ಶನಿವಾರ ಹಂಚಿಕೆ ಮಾಡಿದೆ. ಅದರಲ್ಲಿ ರಾಜ್ಯಕ್ಕೆ 1,270 ಹಂಚಿಕೆ ಮಾಡಲಾಗಿದೆ.

ವಿವಿಧ ರಾಜ್ಯಗಳಲ್ಲಿರುವ ಕಪ್ಪು ಶಿಲೀಂಧ್ರ ರೋಗಿಗಳ ಸಂಖ್ಯೆ ಧರಿಸಿ ಈ ಹಂಚಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ ಇಡೀ ದೇಶದಲ್ಲಿ ಸದ್ಯ ಒಟ್ಟು 8,848 ಪ್ರಕರಣಗಳಿವೆ. ರಾಜ್ಯದಲ್ಲಿ 500 ಪ್ರಕರಣಗಳ ಆಧಾರದಲ್ಲಿ 1,270 ವಯಲ್ಸ್‌ ಹಂಚಿಕೆ ಮಾಡಲಾಗಿದೆ.

ಅತೀ ಹೆಚ್ಚು ಕಪ್ಪು ಶಿಲೀಂಧ್ರ ರೋಗಿಗಳು ಗುಜರಾತ್‌ನಲ್ಲಿ 2,281 ಇದ್ದು, ಆ ರಾಜ್ಯಕ್ಕೆ 5,800 ವಯಲ್ಸ್ ಹಂಚಿಕೆ ಮಾಡಲಾಗಿದೆ. ಉಳಿದಂತೆ, ಮಹಾರಾಷ್ಟ್ರದಲ್ಲಿ 2,000 (5090), ಆಂಧ್ರಪ್ರದೇಶ 910 (2,310), ಮದ್ಯಪ್ರದೇಶ 720 (1830), ರಾಜಸ್ಥಾನ 700 (1780), ತೆಲಂಗಾಣ 350 (890), ಹರಿಯಾಣ 250 (640) ರೋಗಿಗಳು ( ಆವರಣದಲ್ಲಿ ಹಂಚಿಕೆ ಮಾಡಿದ ವಯಲ್ಸ್‌ ಪ್ರಮಾಣ) ಇದ್ದಾರೆ. ಕರ್ನಾಟಕವೂ ಸೇರಿದಂತೆ ಈ ಎಂಟು ರಾಜ್ಯಗಳಿಗೆ ಒಟ್ಟು ಔಷಧ ಪ್ರಮಾಣದ ಶೇ 75ರಷ್ಟನ್ನು ಹಂಚಿಕೆ ಮಾಡಲಾಗಿದೆ. ಉಳಿದ ಶೇ 25ರಷ್ಟನ್ನು ರೋಗಿಗಳ ಸಂಖ್ಯೆಯನ್ನು ಪರಿಶೀಲಿಸಿದ ಬಳಿಕ ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಔಷಧ ಇಲಾಖೆಯನ್ನೂ ಹೊಂದಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ, ‘ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಪ್ಪು ಶಿಲೀಂಧ್ರ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ಹಂಚಿಕೆ ಮಾಡಲಾಗಿದೆ. ಒಟ್ಟು ರೋಗಿಗಳ ಸಂಖ್ಯೆ ಆಧರಿಸಿ ಈ ಹಂಚಿಕೆ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು