ಕುತೂಹಲ ಮೂಡಿಸಿದ ಬೊಮ್ಮಾಯಿ ಮತ್ತು ಆರೆಸ್ಸೆಸ್ ಸಹ ಸರಕಾರ್ಯವಾಹ ಮುಕುಂದ ಭೇಟಿ

ಬೆಂಗಳೂರು: ಭಾನುವಾರ ಬೆಳಿಗ್ಗೆ ಬಿಜೆಪಿ ಕಾರ್ಯಕಾರಿಣಿ ಆರಂಭಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆರೆಸ್ಸೆಸ್ ಸಹ ಸರಕಾರ್ಯವಾಹ ಮುಕುಂದ ಸಿ.ಆರ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು.
ರೇಸ್‌ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಯ ಸರ್ಕಾರಿ ನಿವಾಸದಲ್ಲಿ ನಡೆದ ಈ ಇಬ್ಬರ ಭೇಟಿ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಧಾರವಾಡದಲ್ಲಿ ಇತ್ತೀಚೆಗೆ ಆರೆಸ್ಸೆಸ್ಸ್ ರಾಷ್ಟ್ರೀಯ ಕಾರ್ಯಕಾರಿ ಬೈಠಕ್‌ನಲ್ಲಿ ನಡೆದಿತ್ತು. ಬಳಿಕ, ಮುಕುಂದ ಅವರು ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.
ಬಿಟ್ ಕಾಯಿನ್ ಹಗರಣ, ಈ ಹಗರಣದಲ್ಲಿ ಪ್ರಭಾವಿಗಳು, ಪ್ರಭಾವಿಗಳ ಮಕ್ಕಳು ಭಾಗಿಯಾಗಿದ್ದಾರೆಂಬ ಕಾಂಗ್ರೆಸ್ ಆರೋಪ, ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದೆ ಎಂಬ ಮುಖ್ಯಮಂತ್ರಿ ಹೇಳಿಕೆ ನಡುವೆಯೇ ನಡೆದ ಭೇಟಿ ರಾಜಕೀಯವಾಗಿಯೂ ಕುತೂಹಲ ಮೂಡಿಸಿದೆ.
ಉಪಹಾರ ಸೇವನೆಯ ಜೊತೆಗೆ ಇಬ್ಬರೂ 20 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಉಪ ಚುನಾವಣೆಯ ಫಲಿತಾಂಶವೂ ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಇಬ್ಬರೂ ಚರ್ಚೆ ನಡೆಸಿದರು ಎಂದು ಮುಖ್ಯಮಂತ್ರಿಯ ಆಪ್ತ ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.