ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಮಕ್ಕಳಲ್ಲಿ ‘ಕವಾಸಾಕಿ’ ಕಾಯಿಲೆ ಹೋಲುವ ಉರಿಯೂತ ರೋಗ: ಮಗು ಸಾವು

‘ಕವಾಸಾಕಿ’ ಹೋಲುವ ರೋಗ; ಕೋವಿಡ್‌ನಿಂದ ಚೇತರಿಸಿಕೊಂಡ ಮಕ್ಕಳಲ್ಲಿ ಪತ್ತೆ
Last Updated 12 ಜೂನ್ 2021, 21:35 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ಚೆಲುವಾಂಬಾ ಆಸ್ಪತ್ರೆಯೊಂದರಲ್ಲೇ ಕಳೆದ 12 ದಿನಗಳಲ್ಲಿ 8 ಮಕ್ಕಳಲ್ಲಿ ‘ಕವಾಸಾಕಿ’ ಕಾಯಿಲೆ ಹೋಲುವ ಬಹುಅಂಗಗಳ ಉರಿಯೂತದ ಸಿಂಡ್ರೋಮ್ (ಎಂಐಎಸ್‌–ಸಿ) ಕಾಣಿಸಿಕೊಂಡಿದ್ದು, ಒಂದು ಮಗು ಮೃತಪಟ್ಟಿದೆ.

ಕೋವಿಡ್‌ನಿಂದ ಚೇತರಿಸಿಕೊಂಡ 2–4 ವಾರಗಳ ಬಳಿಕ ಮಕ್ಕಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಬೇರೆ ರೋಗಗಳು ಇದ್ದ ಪಕ್ಷದಲ್ಲಿ ಈ ಕಾಯಿಲೆ ಉಲ್ಬಣಗೊಂಡು ಅಪಾಯ ತಂದೊಡ್ಡುತ್ತಿದೆ. 19 ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ. ಅಪೌಷ್ಟಿಕತೆಯಿಂದಲೂ ಉಲ್ಬಣ ಗೊಳ್ಳುತ್ತಿದೆ.

‘ನಮ್ಮ ಆಸ್ಪತ್ರೆಯಲ್ಲಿ ಈ ತಿಂಗಳಲ್ಲಿ ಕವಾಸಾಕಿ ಕಾಯಿಲೆ ಹೋಲುವ 8 ಪ್ರಕರಣಗಳು ಪತ್ತೆಯಾಗಿವೆ. ಕಳೆದ ತಿಂಗಳು ಒಂದು ಮಗುವಿನಲ್ಲಿ ಪತ್ತೆ ಯಾಗಿತ್ತು. ಬಹುತೇಕ ಪ್ರಕರಣಗಳಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಇರುವುದರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ’ ಎಂದು ಚೆಲುವಾಂಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಸುಧಾ ರುದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕಿತ್ಸೆ ದುಬಾರಿ: ‘ರೋಗ ಉಲ್ಬಣ ಗೊಂಡರೆ ಚಿಕಿತ್ಸೆಗೆ ಇಂಟರ್‌ವೀನಸ್‌ ಇಮ್ಯುನೊಗ್ಲೋಬುಲಿನ್‌ (ಐವಿಐಜಿ) ಚಿಕಿತ್ಸೆ ನೀಡಲಾಗುತ್ತದೆ. ಇದು ದುಬಾರಿಯಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಚುಚ್ಚುಮದ್ದಿಗೆ ಸುಮಾರು ₹30 ಸಾವಿರ ವ್ಯಯಿಸಬೇಕಾಗುತ್ತದೆ. ಚೆಲುವಾಂಬಾದಲ್ಲಿ ಉಚಿತವಾಗಿ ಲಭ್ಯವಿದ್ದು, ಸಮಸ್ಯೆ ಇಲ್ಲ’ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಪ್ರದೀಪ್‌ ಹೇಳಿದರು.

ಐವಿಐಜಿಚಿಕಿತ್ಸೆನೀಡಿ 24 ಗಂಟೆಗಳಲ್ಲಿ ಮಕ್ಕಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ನಾಲ್ಕೈದು ದಿನಗಳಲ್ಲಿ ಪೂರ್ಣವಾಗಿ ಗುಣಮುಖರಾಗುತ್ತಾರೆ ಎಂದರು.

30 ಮಕ್ಕಳೂ ಆರೋಗ್ಯ

ಮೈಸೂರಿನಲ್ಲಿ ಲಸಿಕೆ ಪಡೆದಿರುವ 12ರಿಂದ 18 ವರ್ಷದ 30 ಮಕ್ಕಳೂ ಆರೋಗ್ಯವಾಗಿದ್ದಾರೆ ಎಂದು ಚೆಲುವಾಂಬ ಆಸ್ಪತ್ರೆಯ ಮಕ್ಕಳ ವೈದ್ಯ ಪ್ರದೀಪ್‌ ತಿಳಿಸಿದರು.

‘ಒಂದು ವಾರ ಮಕ್ಕಳ ಮೇಲೆ ನಿಗಾ ಇಡಲಾಗಿದೆ. ನಿತ್ಯ ದೂರವಾಣಿ ಕರೆ ಮಾಡಿ ಮಾಹಿತಿ ಪಡೆಯಲಾಗುತ್ತಿದೆ. ಲಸಿಕೆ ಪಡೆದ ಜಾಗದಲ್ಲಿ ಕೆಲವರಲ್ಲಿ ಮೊದಲ ದಿನ ನೋವು ಕಾಣಿಸಿಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಸಮಸ್ಯೆ ಆಗಿಲ್ಲ. ಮುಂದಿನ ಹಂತದಲ್ಲಿ ಅಂದರೆ 10 ದಿನಗಳ ಬಳಿಕ 6ರಿಂದ 12 ವರ್ಷದ ಮಕ್ಕಳಿಗೆ ಲಸಿಕೆ ಹಾಕಲಾಗುವುದು’ ಎಂದರು.

ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ (ಎಂಎಂಸಿಆರ್‌ಐ) ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಜೂನ್‌ 6ರಂದು ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗಿತ್ತು. 28 ದಿನಗಳ ಬಳಿಕ 2ನೇ ಡೋಸ್‌ ನೀಡಲಾಗುತ್ತದೆ.

ರೋಗ ಲಕ್ಷಣ

*ಚರ್ಮದ ಮೇಲೆ ಊತ, ಕೆಂಪು ಗುಳ್ಳೆ

*ಮೂರು ದಿನಗಳಿಗಿಂತ ಹೆಚ್ಚು ದಿನ ಜ್ವರ

*ಹೊಟ್ಟೆ ನೋವು, ಬೇಧಿ ಮತ್ತು ವಾಂತಿ

*ಕಣ್ಣು ಕೆಂಪಾಗುವುದು

* ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. 9 ಬೆಡ್‌ಗಳ ವ್ಯವಸ್ಥೆ ಇದೆ.ಮಕ್ಕಳಲ್ಲಿ ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಚಿಕಿತ್ಸೆ ಕೊಡಿಸಿ.

-ಡಾ.ಸುಧಾ ರುದ್ರಪ್ಪ, ಚೆಲುವಾಂಬ ಆಸ್ಪತ್ರೆ, ವೈದ್ಯಕೀಯ ಅಧೀಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT