ಗುರುವಾರ , ಫೆಬ್ರವರಿ 9, 2023
29 °C
ಆರೋಪಿ ಪತ್ತೆಗೆ ಆ್ಯಪ್‌ ನೆರವು ಪಡೆದಿದ್ದ ಪೊಲೀಸರು

ಕೊಲೆ ಪ್ರಕರಣ: 12 ವರ್ಷಗಳ ಬಳಿಕ ಆರೋಪಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಎಂ–ಸಿಸಿಟಿಎನ್‌ಎಸ್‌’ ಎಂಬ ಮೊಬೈಲ್‌ ಆ್ಯಪ್‌ ನೆರವಿನಿಂದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ರಮೇಶ್‌ ಎಂಬಾತನನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

‘2005ರ ಆಗಸ್ಟ್‌ 29ರಂದು ತಾವರೆಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದ ಬಾಲಾಜಿ ನಗರದಲ್ಲಿ ಮನೆಯೊಂದಕ್ಕೆ ಬಣ್ಣ ಬಳಿಯಲು 12 ಮಂದಿ ಬಂದಿದ್ದರು. ಅವರೊಂದಿಗೆ ರಮೇಶ್‌ ಸಹ ಇದ್ದ. ಮನೆಯ ಮಾಲೀಕರೊಂದಿಗೆ ನಡೆದ ಗಲಾಟೆಯಲ್ಲಿ ಮಾಲೀಕರನ್ನೇ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಎಲ್ಲರನ್ನೂ ಬಂಧಿಸಲಾಗಿತ್ತು. 2010ರಲ್ಲಿ ಜಾಮೀನನ ಮೇಲೆ ಬಿಡುಗಡೆಯಾಗಿದ್ದ ರಮೇಶ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯವು ಆರೋಪಿ ವಿರುದ್ಧ ವಾರೆಂಟ್‌ ಹೊರಡಿಸಿತ್ತು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಎಂ–ಸಿಸಿಟಿಎನ್‌ಎಸ್‌’ ಮೊಬೈಲ್‌ ಆ್ಯಪ್‌ ಮೂಲಕ ಬೆರಳು ಮುದ್ರೆ ಪರಿಶೀಲನೆಗೆ ಪುಟ್ಟದಾದ ಬೆರಳು ಮುದ್ರೆ ಪರಿಕರವನ್ನು ಎಲ್ಲ ಪೊಲೀಸ್‌ ಠಾಣೆಗಳಿಗೂ ನೀಡಲಾಗಿತ್ತು. ಈ ಪರಿಕರ ಬಳಸಿಕೊಂಡು ಮೊಬೈಲ್ ಅಪ್ಲಿಕೇಶನ್‌ ಮೂಲಕ ಅನುಮಾನಾಸ್ಪದ ವ್ಯಕ್ತಿಗಳ ಬೆರಳು ಮುದ್ರೆ ಪರಿಶೀಲಿಸಿದರೆ ಆ ವ್ಯಕ್ತಿ ಹಿಂದೆ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅದರ ಮಾಹಿತಿ ತಿಳಿಯಲಿದೆ. ಇದೇ ತಂತ್ರಜ್ಞಾನ ಬಳಸಿಕೊಂಡು 12 ವರ್ಷಗಳ ಬಳಿಕ ಆರೋಪಿ ಬಂಧಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಯಶವಂತಪುರ ಪೊಲೀಸ್‌ ಠಾಣೆಯ ಬಿಕೆ ನಗರದ 1ನೇ ಮುಖ್ಯರಸ್ತೆಯಲ್ಲಿ ರಮೇಶ್‌ ಅನುಮಾನಾಸ್ಪದವಾಗಿ ಈಚೆಗೆ ಓಡಾಟ ನಡೆಸುತ್ತಿದ್ದ. ಆತನನ್ನು ವಶಕ್ಕೆ ಪಡೆದು ಆ್ಯಪ್‌ ಮೂಲಕ ಬೆರಳು ಮುದ್ರೆ ಪರಿಶೀಲಿಸಿದಾಗ ಆರೋಪಿಯ ಮಾಹಿತಿ ಪೊಲೀಸರ ದತ್ತಾಂಶದಲ್ಲಿ ಇರುವುದು ದೃಢಪಟ್ಟಿತ್ತು’ ಎಂದು ಮೂಲಗಳು ತಿಳಿಸಿವೆ.

₹ 1.30 ಕೋಟಿಯ ವಸ್ತು ಜಪ್ತಿ
ಬೆಂಗಳೂರು: ಒಂದು ತಿಂಗಳ ಅವಧಿಯಲ್ಲಿ ದಕ್ಷಿಣ ವಿಭಾಗದ ಪೊಲೀಸರು ₹ 1.30 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 161 ಆರೋಪಿಗಳನ್ನು ಬಂಧಿಸಿ, 176 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

2 ಕೆ.ಜಿ. 676 ಗ್ರಾಂ ಚಿನ್ನಾಭರಣ, 134 ಬೈಕ್‌, 141 ಕೆ.ಜಿ ಗಾಂಜಾ, 1 ಕೆ.ಜಿ. ಎಂಡಿಎಂಎ, ₹ 3.83 ಲಕ್ಷ ಮೌಲ್ಯದ ವಿವಿಧ ಕಂಪನಿಯ 29 ಮೊಬೈಲ್‌ ವಶಕ್ಕೆ ಪಡೆದಿದ್ದಾರೆ.

ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದವರನ್ನು ಬಂಧಿಸಿ, ₹ 28 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಡಿಸಿಪಿ ಪಿ.ಕೃಷ್ಣಕಾಂತ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು