ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧೆ ಉಸಿರುಗಟ್ಟಿಸಿ ಹತ್ಯೆ; ತಂದೆ–ಮಗಳ ಬಂಧನ

Last Updated 5 ಸೆಪ್ಟೆಂಬರ್ 2020, 18:30 IST
ಅಕ್ಷರ ಗಾತ್ರ

ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಕಾಂತಮ್ಮ (70) ಎಂಬುವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ ಆರೋಪದಡಿ ಜಾನ್ ಜೋಸೆಫ್ (75) ಹಾಗೂ ಆತನ ಮಗಳು ಮರ್ಲಿನ್ (48) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

‘ಕೊಲೆಯಾದ ಕಾಂತಮ್ಮ, ಅಸ್ವಸ್ಥ ಮಗಳ ಜೊತೆಯಲ್ಲಿ ರಾಮಸ್ವಾಮಿ ಪಾಳ್ಯದಲ್ಲಿ ನೆಲೆಸಿದ್ದರು. ಅವರ ಮಾಲೀಕತ್ವದ ಬಾಡಿಗೆ ಮನೆಯಲ್ಲೇ ಜೋಸೆಫ್ ಹಾಗೂ ಮರ್ಲಿನ್ ವಾಸವಿದ್ದರು. ಕಾಂತಮ್ಮ ಬಳಿ ಚಿನ್ನಾಭರಣ ಇರುವುದನ್ನು ನೋಡಿಯೇ ಆರೋಪಿಗಳು ಕೃತ್ಯ ಎಸಗಿದ್ದರು. ಆರೋಪಿಗಳಿಂದ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ’ಪ್ರಜಾವಾಣಿ’ಗೆ ತಿಳಿಸಿದರು.

ಚಿಕಿತ್ಸೆಗೆ ₹1.50 ಲಕ್ಷ ಸಾಲ: ‘ತಮಿಳುನಾಡಿನ ಜೋಸೆಫ್, ಪೇಟಿಂಗ್ ಕೆಲಸ ಮಾಡುತ್ತಿದ್ದ. ಮರ್ಲಿನ್, ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಜೋಸೆಫ್‌ಗೆ ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆ ಇತ್ತು. ಚಿಕಿತ್ಸೆಗಾಗಿ ₹ 1.50 ಲಕ್ಷ ಸಾಲ ಮಾಡಿದ್ದ. ಲಾಕ್‌ಡೌನ್ ವೇಳೆ ಕೆಲಸವೂ ಹೋಗಿತ್ತು. ಮನೆ ನಡೆಸುವುದೂ ಕಷ್ಟವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಕಾಂತಮ್ಮ ಅವರ ಮನೆಗೆ ಹೋಗಿ ಬರುತ್ತಿದ್ದ ಮರ್ಲಿನ್, ಅವರಲ್ಲಿದ್ದ ಹಣ ಮತ್ತು ಚಿನ್ನಾಭರಣ ಗಮನಿಸಿದ್ದಳು. ಅದನ್ನು ದೋಚಲು ಸಂಚು ರೂಪಿಸಿದ ಮರ್ಲಿನ್, ಸೆ. 2ರಂದು ಬೆಳಿಗ್ಗೆ ಮನೆಗೆ ಹೋಗಿದ್ದಳು. ಆಧಾರ್‌ ಕಾರ್ಡ್‌ ಮಾಡಿಸುವುದಾಗಿ ಹೇಳಿ ಕಾಂತಮ್ಮ ಅವರ ಮಗಳನ್ನು ಹೊರಗಡೆ ಕರೆದೊಯ್ದಿದ್ದಳು. ಅದೇ ವೇಳೆ ಮನೆಯೊಳಗೆ ನುಗ್ಗಿದ್ದ ಜೋಸೆಫ್, ಕಾಂತಮ್ಮ ಅವರ ಉಸಿರುಗಟ್ಟಿಸಿ ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದ.’

‘ಮನೆ ಖಾಲಿ ಮಾಡಿಕೊಂಡು ಹೋಗಿದ್ದ ತಂದೆ–ಮಗಳು, ಮಳಿಗೆಯೊಂದರಲ್ಲಿ ಚಿನ್ನಾಭರಣವನ್ನು ₹ 1.80 ಲಕ್ಷಕ್ಕೆ ಮಾರಿದ್ದರು. ಆರೋಪಿಗಳು ವೃದ್ಧೆ ಮನೆಗೆ ಬಂದು ಹೋಗಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದಲ್ಲೇ ಅವರನ್ನು ಬಂಧಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT