ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರು ಗೋ ಮಾಂಸ ತಿನ್ನಬೇಡಿ: ಸಿ.ಎಂ. ಇಬ್ರಾಹಿಂ ಮನವಿ

Last Updated 19 ಡಿಸೆಂಬರ್ 2020, 12:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಗೋ ಹತ್ಯೆ ನಿಷೇಧಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಮುಸ್ಲಿಮರು ಯಾರೂ ಗೋ ಮಾಂಸ ತಿನ್ನಬೇಡಿ. ಕೈ ಮುಗಿದು ಬೇಡಿಕೊಳ್ಳುತ್ತೇನೆ' ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ವಿನಂತಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದ್ದು ಸ್ವಾಗತಾರ್ಹ. ಆದರೆ, ಬಂಜೆಯಾದ, ವಯಸ್ಸಾದ ಗೋವುಗಳನ್ನು ನೋಡಿಕೊಳ್ಳುವವರು ಯಾರು? ಎನ್ನುವುದಕ್ಕೆ ಉತ್ತರವಿಲ್ಲ. ಅದಕ್ಕಾಗಿ ಪ್ರತಿ ಪಂಚಾಯ್ತಿಯಲ್ಲಿ ಒಂದೊಂದು ಗೋಶಾಲೆಯನ್ನು ತೆರೆಯಬೇಕು. ಆ ಮೂಲಕ ಗೋಸಾಕಾಣಿಕೆಗೆ ಸರ್ಕಾರ ವ್ಯವಸ್ಥೆ ಮಾಡಬೇಕು' ಎಂದು ಆಗ್ರಹಿಸಿದರು.

'ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣ ಯಾರು ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ವಿಶ್ಲೇಷಣೆ ಮಾಡುವುದರಲ್ಲಿ ಅರ್ಥವಿಲ್ಲ. ಮತ್ತೆ ಜೆಡಿಎಸ್ ಜೊತೆ ಪುನರ್'ವಿವಾಹ ಆಗಲು ಸಾಧ್ಯವಿದೆಯಾ ಎಂದು ನೋಡುತ್ತಿದ್ದೇವೆ. ಕಾಂಗ್ರೆಸ್ ಸಂಬಂಧ ಬೆಸೆಯುವ ಕೆಲಸ ಮಾಡುತ್ತದೆಯೇ ಹೊರತು, ಮುರಿಯುವ ಕೆಲಸ ಮಾಡುವುದಿಲ್ಲ' ಎಂದರು.

'ರಾಜಕೀಯ ಪಕ್ಷ ಅನ್ನೋದು ರೈಲ್ವೆ ಜಂಕ್ಷನ್ ಆದ ಹಾಗಾಗಿದೆ. ಯಾರು ಬೇಕಾದರೂ ಬರಬಹುದು. ಹೋಗಬಹುದು. ಹೀಗಾಗಿ ಕೆಲವರು ಕಾಂಗ್ರೆಸ್'ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅದರಿಂದ ನಾವು ತೊಂದರೆ ಅನುಭವಿಸುವಂತಾಗಿದೆ' ಎಂದು ಅಭಿಪ್ರಾಯಪಟ್ಟರು.

ಲವ್ ಜಿಹಾದ್ ನಿಷೇಧದ ಕುರಿತು ಮಾತನಾಡಿದ ಅವರು, 'ಯಾರು ಯಾರ ಜೊತೆ ಮದುವೆಯಾದರೆ ಮುಖ್ಯಮಂತ್ರಿಗೆ ಏನು ಸಮಸ್ಯೆ? ಅದನ್ನೆಲ್ಲ ಅವರು ನೋಡುತ್ತ ಇರಲು ಸಾಧ್ಯವೇ? ಒತ್ತಾಯ ಪೂರ್ವಕವಾಗಿ ಮದುವೆ ಮಾಡಿದರೆ ಕ್ರಮ ಕೈಗೊಳ್ಳಲಿ.‌ ಹುಡುಗ, ಹುಡುಗಿ ಅವರ ಇಚ್ಛೆಯಂತೆ ಮದುವೆಯಾದರೆ ಏನು ಮಾಡಲು ಸಾಧ್ಯ' ಎಂದು ಪ್ರಶ್ನಿಸಿದ ಅವರು, 'ಸರ್ಕಾರ ಇಂತಹ ಚಿಂತನೆ ಮಾಡುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

***
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸಭಾಪತಿಯೂ ಆಗುತ್ತಾರೆ, ಮುಖ್ಯಮಂತ್ರಿಯೂ ಆಗುತ್ತಾರೆ. ಮುಂದೆ ರಾಜ್ಯಕ್ಕೆ ಒಳ್ಳೆಯದಾಗಲಿದೆ

-ಸಿ.ಎಂ. ಇಬ್ರಾಹಿಂ, ವಿಧಾನಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT