ಮಂಗಳವಾರ, ಜನವರಿ 19, 2021
27 °C

ರೂಪಾಂತರ ಕೋವಿಡ್: ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಇಬ್ಬರಿಗೆ ರೂಪಾಂತರಗೊಂಡ ಕೊರೊನಾ ವೈರಾಣು ಇರುವುದು ದೃಢಪಟ್ಟಿದೆ. ಇದರಿಂದಾಗಿ ಹೊಸ ಮಾದರಿಯ ಕೋವಿಡ್ ಪೀಡಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಬ್ರಿಟನ್‌ನಿಂದ ಬಂದು ಸೋಂಕಿತರಾದವರು ಹಾಗೂ ಸಂಪರ್ಕಿತ ಕೋವಿಡ್ ಪೀಡಿತರ ಮಾದರಿಯನ್ನು ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅವರಲ್ಲಿ ಬೆಂಗಳೂರಿನ ಇಬ್ಬರಲ್ಲಿ ರೂಪಾಂತರ ಮಾದರಿಯ ವೈರಾಣು ಇರುವುದು ದೃಢಪಟ್ಟಿದೆ. ಇವರು ಸಂಪರ್ಕಿತರಾಗಿದ್ದು, ಬೆಂಗಳೂರಿನಲ್ಲಿ ಹೊಸ ಮಾದರಿಯ ವೈರಾಣು ಹೊಂದಿರುವವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಕಳೆದ ಡಿ.9ರ ಬಳಿಕ 4,823 ಮಂದಿ ಬ್ರಿಟನ್‌ನಿಂದ ಇಲ್ಲಿಗೆ ಬಂದಿದ್ದಾರೆ. ಈವರೆಗೆ ಅಲ್ಲಿಂದ ಬಂದವರಲ್ಲಿ 45 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ಸಂಪರ್ಕಿತರಲ್ಲಿ 26 ಮಂದಿ ಸೋಂಕಿತರಾಗಿದ್ದಾರೆ. ರಾಜ್ಯದಲ್ಲಿ ಹೊಸದಾಗಿ 751 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇಲ್ಲಿಯವರೆಗೆ ಸೋಂಕಿಗೀಡಾದವರ ಒಟ್ಟು ಸಂಖ್ಯೆ 9.28 ಲಕ್ಷ ದಾಟಿದೆ. ಸೋಂಕಿತರಲ್ಲಿ ಮತ್ತೆ ಐದು ಮಂದಿ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 12,149ಕ್ಕೆ ತಲುಪಿದೆ.

ಕೋವಿಡ್ ಪೀಡಿತರಲ್ಲಿ ಮತ್ತೆ 1,183 ಮಂದಿ ಗುಣಮುಖರಾಗಿದ್ದು, ಇದರಿಂದಾಗಿ ಚೇತರಿಸಿಕೊಂಡವರ ಸಂಖ್ಯೆ 9.07 ಲಕ್ಷಕ್ಕೆ ತಲುಪಿದೆ. ಸೋಂಕಿತರಲ್ಲಿ ಸದ್ಯ 203 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇದ್ದಾರೆ.

ಬೆಂಗಳೂರಿನಲ್ಲಿ 384 ಮಂದಿ ಕೋವಿಡ್ ಪೀಡಿತರಾಗಿದ್ದು, ಸೋಂಕಿತರ ಸಂಖ್ಯೆ 3.93 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 35 ಪ್ರಕರಣಗಳು ವರದಿಯಾಗಿದೆ. ಅಲ್ಲಿ ಸೋಂಕಿತರ ಸಂಖ್ಯೆ 52,863ಕ್ಕೆ ತಲುಪಿದೆ. ಚಿಕ್ಕಬಳ್ಳಾಪುರದಲ್ಲಿ 53, ಹಾಸನದಲ್ಲಿ 32, ದಕ್ಷಿಣ ಕನ್ನಡದಲ್ಲಿ 24, ತುಮಕೂರು ಹಾಗೂ ಕಲಬುರ್ಗಿಯಲ್ಲಿ ತಲಾ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 2 ಹಾಗೂ ಬೆಂಗಳೂರು ಗ್ರಾಮಾಂತರ, ಕಲಬುರ್ಗಿ ಮತ್ತು ತುಮಕೂರಿನಲ್ಲಿ ತಲಾ ಒಂದು ಮರಣ ಪ್ರಕರಣ ಹೊಸದಾಗಿ ವರದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು