ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನಿ ಎನ್ನುವಂತಿಲ್ಲ; ‘ಬನ್ನಿ’ ಮುಡಿಯುವಂತಿಲ್ಲ

ಕೊರೊನಾ ಕರಿನೆರಳಲ್ಲಿ ನಾಡಹಬ್ಬ l ಡಾ.ಸಿ.ಎನ್‌.ಮಂಜುನಾಥ್‌ ಅವರಿಂದ ಚಾಲನೆ ಇಂದು
Last Updated 16 ಅಕ್ಟೋಬರ್ 2020, 20:55 IST
ಅಕ್ಷರ ಗಾತ್ರ
ADVERTISEMENT
""

ಮೈಸೂರು: ಹೆಸರಿನಿಂದಲೇ ದಸರೆಯ ಸಂಭ್ರಮವನ್ನು ಕಣ್ಮುಂದೆ ತರುತ್ತಿದ್ದ ಮೈಸೂರಿನಲ್ಲಿ ಈ ವರ್ಷ ಸಡಗರವಿಲ್ಲ. ‘ಅತಿಥಿ ದೇವೋಭವ’ ಎಂದು ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದ ಊರಿನಲ್ಲೀಗ, ಇದೇ ಮೊದಲ ಬಾರಿಗೆ ‘ಯಾರೂ ಬರಬೇಡಿ’ ಎಂದು ಹೇಳಬೇಕಾದ ಸಂಕಟ.

ಕೋವಿಡ್‌ ತಂದಿಟ್ಟ ಈ ಸಂಕಷ್ಟ ಮತ್ತು ಅನಿವಾರ್ಯತೆ, ಇಲ್ಲಿನ ಮನೆ–ಮನಗಳ ಮೇಲೆ ಮಾಡಿದ ದಾಳಿ ಸಣ್ಣದಲ್ಲ. ಊರ ತುಂಬ ಜಗಮಗಿಸುತ್ತಿರುವ ವಿದ್ಯುದ್ದೀಪದ ಬೆಳಕು, ಜನರ ಮನದಲ್ಲಿನ ಆತಂಕದ ಕತ್ತಲು ನೀಗಿಸುವಲ್ಲಿ ಸೋತಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಹಾಗೂ ಸಾವಿನ ಪ್ರಮಾಣದಿಂದಾಗಿ, ಸರಳ– ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ಮುಂದಾಗಿದೆ. ಜನದಟ್ಟಣೆ ತಪ್ಪಿಸಿ, ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತ ಹಲವು ನಿರ್ಬಂಧ ಹೇರಿದೆ.

ಯುವ ದಸರಾ, ರೈತ ದಸರಾ, ಕವಿಗೋಷ್ಠಿ, ಆಹಾರ ಮೇಳ, ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ, ಕ್ರೀಡಾಕೂಟ, ನಾಡಕುಸ್ತಿ, ವಜ್ರಮುಷ್ಟಿ ಕಾಳಗ, ಪಂಜಿನ ಕವಾಯತು ರದ್ದಾಗಿವೆ.

ದಸರೆಯು ಚಾಮುಂಡಿಬೆಟ್ಟ ಮತ್ತು ಅರಮನೆ ಆವರಣಕ್ಕಷ್ಟೇ ಸೀಮಿತವಾಗಿದೆ. ಕಳೆದ ಬಾರಿ ನೆರೆ–ಬರ ಇದ್ದರೂ ‘ಮನೆಮನೆಯಲ್ಲಿ ದಸರಾ’ ಪುನರಾರಂಭಿಸುವ ಜೊತೆಗೆ ವಿಜೃಂಭಣೆಯ ಹಬ್ಬವಾಗಿತ್ತು. ಈ ಬಾರಿ ಕೊರೊನಾ ಜೊತೆಗೆ ರಾಜ್ಯದಲ್ಲಿ ಅತಿವೃಷ್ಟಿ–ನೆರೆ ತಂದಿಟ್ಟ ಅನಾಹುತ ಕೂಡ ದೊಡ್ಡದೇ ಆಗಿದೆ. ಸಂಬಂಧವನ್ನು ಬೆಳಗುವ, ‘ಬನ್ನಿ ಮುಡಿಯುವ ಹಬ್ಬ’ ಈ ಬಾರಿ ಅಂತರ ಕಾಯ್ದುಕೊಳ್ಳುವಂತೆ ಹೇಳುತ್ತಿದೆ!

ತಮ್ಮ ಜೀವದ ಹಂಗು ತೊರೆದು ದುಡಿದ, ಕೊರೊನಾ ಯೋಧರಿಗೆ ಗೌರವ ಅರ್ಪಿಸುತ್ತಿರುವುದು ಈ ಬಾರಿಯ ದಸರೆ ವಿಶೇಷ. ಶನಿವಾರ ಬೆಳಿಗ್ಗೆ 7.45ರಿಂದ 8.15ರೊಳಗೆ ಸಲ್ಲುವ ಮುಹೂರ್ತದಲ್ಲಿ, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಚಾಲನೆ ನೀಡುವರು. ಸಂಜೆ, ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಉದ್ಘಾಟನೆಗೆ 200, ಜಂಬೂಸವಾರಿಗೆ 300 ಜನರು ಸೇರಲಷ್ಟೇ ಅವಕಾಶವಿದೆ. ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ವರ್ಚುವಲ್‌ ವೇದಿಕೆಯಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು.

ಜಂಬೂಸವಾರಿಯು ಐದು ಆನೆಗಳಿಗೆ ಸೀಮಿತವಾಗಿದ್ದು, ಇದೇ ಮೊದಲ ಬಾರಿಗೆ ಅಭಿಮನ್ಯು ಆನೆ ಅಂಬಾರಿ ಹೊರಲಿದೆ. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುಷ್ಪಾರ್ಚನೆ ಮಾಡುವರು. ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್‌ ಕೂಡ ಸಾಂಕೇತಿಕವಾಗಿ ನಡೆಯಲಿದೆ. ದಸರೆ ಬಂದಿದೆಯೆಂಬುದು ನಗರದಲ್ಲಿನ ದೀಪಾಲಂಕಾರದಿಂದ ಗೊತ್ತಾಗುತ್ತಿದೆ ಹೊರತು, ಜನರ ಪಾಲ್ಗೊಳ್ಳುವಿಕೆ ಇಲ್ಲದ ಈ ಹಬ್ಬಕ್ಕೆ ಹಿಗ್ಗು ಕಾಣುತ್ತಿಲ್ಲ.

ಕೊರೊನಾ ಯೋಧರಿಗೆ ಸನ್ಮಾನ

* ಡಾ.ನವೀನ್‌ ಟಿ.ಆರ್‌, ವೈದ್ಯಾಧಿಕಾರಿ, ಎಚ್‌ಎಚ್‌ಎಂಬಿಜಿ ಆಸ್ಪತ್ರೆ, ಮೈಸೂರು

* ರುಕ್ಮಿಣಿ, ಹಿರಿಯ ಶುಶ್ರೂಷಾಧಿಕಾರಿ, ಜಿಲ್ಲಾ ಆಸ್ಪತ್ರೆ ಮೈಸೂರು

* ಕುಮಾರ ಪಿ, ಪೊಲೀಸ್‌ ಕಾನ್‌ಸ್ಟೆಬಲ್‌, ಮೈಸೂರು ನಗರ

* ಮರಗಮ್ಮ, ಪೌರಕಾರ್ಮಿಕರು, ಮೈಸೂರು ಮಹಾನಗರ ಪಾಲಿಕೆ

* ನೂರ್ ಜಾನ್, ಆಶಾ ಕಾರ್ಯಕರ್ತೆ, ನಂಜನಗೂಡು

* ಅಯೂಬ್‌ ಅಹಮದ್‌, ಸಮಾಜ ಸೇವಕರು, ಮೈಸೂರು

***

ದಸರಾ ಉದ್ಘಾಟನೆ ನನ್ನ ಜೀವಿತಾವಧಿಯ ಸೌಭಾಗ್ಯ. ಬಯಸದೇ ಬಂದ ಭಾಗ್ಯವಿದು. ಮರೆಯಲಾಗದ ಅವಿಸ್ಮರಣೀಯ ಕ್ಷಣ

- ಡಾ.ಸಿ.ಎನ್.ಮಂಜುನಾಥ್, ದಸರಾ ಉದ್ಘಾಟಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT