ಮೈಸೂರು: ನಗರದಲ್ಲಿ ಚಿನ್ನದಂಗಡಿಯಲ್ಲಿ ಇತ್ತೀಚೆಗೆ ನಡೆದ ದರೋಡೆ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪಾಕಿಸ್ತಾನದ ಗಡಿಯಲ್ಲಿ ವಿಶೇಷ ತನಿಖಾ ತಂಡದ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನ ಗಡಿಗೆ 60 ಕಿ.ಮೀ ದೂರದಲ್ಲಿ,ರಾಜಸ್ಥಾನದ ಗ್ರಾಮವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ವಿಜಯಸೇನ್ ಎಂಬಾತನನ್ನು ಈಗಾಗಲೇ ಕರೆ ತರಲಾಗಿದೆ. ಪಾಕಿಸ್ತಾನ ಗಡಿಗೆ 10 ಕಿ.ಮೀ ದೂರದಲ್ಲಿ, ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗ್ರಾಮವೊಂದರಲ್ಲಿದ್ದ ಆರೋಪಿ ಮಂಜೂರ್‌ನನ್ನು ಬಂಧಿಸಿ ಕರೆತರಲಾಗುತ್ತಿದೆ. ಮಂಜೂರ್ ಇದ್ದ ಸ್ಥಳವನ್ನು ಮೊಬೈಲ್ ಲೊಕೇಶನ್ ಆಧಾರದಲ್ಲಿ ಪೊಲೀಸರು ಗುರುತಿಸಿದ್ದರು.
ಬೆಂಗಳೂರಿನ ಇನ್‌ಸ್ಪೆಕ್ಟರ್ ನವೀನ್ ಹಾಗೂ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯ ಇನ್‌ಸ್ಪೆಕ್ಟರ್ ರಾಜು ಹಾಗೂ ಕೆ.ಆರ್ ಠಾಣೆಯ ಪಿಎಸ್‌ಐ ಮಹಾವೀರ್ ಕಾರ್ಯಾಚರಣೆ ನಡೆಸಿದ್ದರು.
‘ಅದು ನಮ್ಮ ಜೀವನದ ಅತಿ ಕಠಿಣವಾದ ಕಾರ್ಯಾಚರಣೆ. ಕೇಂದ್ರೀಯ ಮೀಸಲು ಪಡೆಯ 4 ತುಕಡಿಗಳ ಭದ್ರತೆಯ ನಡುವೆಯೇ ಪ್ರತಿ ಠಾಣೆಯೂ ಕಾರ್ಯನಿರ್ವಹಿಸುತ್ತಿರುವ ಸೂಕ್ಷ್ಮ ಪ್ರದೇಶದಲ್ಲಿ ಗಡಿಭದ್ರತಾ ಪಡೆ, ಸ್ಥಳೀಯ ಪೊಲೀಸರು ಸಂಪೂರ್ಣ ಸಹಕರಿಸಿದರು’ ಎಂದು ತಂಡದಲ್ಲಿದ್ದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ ಅಂಗಡಿ ದರೋಡೆ ಮಾಡಿ, ಗ್ರಾಹಕರೊಬ್ಬರನ್ನು ಗುಂಡಿಕ್ಕಿ ಕೊಂದ ನಂತರ ಆರೋಪಿಗಳು ಚದುರಿ ಮುಂಬೈ ತಲುಪಿದ್ದರು. ನಂತರ ಒಡವೆಗಳನ್ನು ಹಂಚಿಕೊಂಡು ವಿವಿಧ ರಾಜ್ಯಗಳಿಗೆ ಪರಾರಿಯಾಗಿದ್ದರು.
ಇಬ್ಬರು ಮಹಾರಾಷ್ಟ್ರದಲ್ಲೇ ಉಳಿದರೆ, ಮತ್ತೊಬ್ಬ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ. ರಾಜಸ್ಥಾನಕ್ಕೆ ಇಬ್ಬರು ಹಾಗೂ ಜಮ್ಮು– ಕಾಶ್ಮೀರಕ್ಕೆ ಒಬ್ಬ ಆರೋಪಿ ಪರಾರಿಯಾಗಿದ್ದಾರೆಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಗರದ ಪೊಲೀಸರೊಂದಿಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಬೆಂಗಳೂರಿನ 120 ಪೊಲೀಸರನ್ನು ಒಳಗೊಂಡ ಒಟ್ಟು ಏಳು ತಂಡಗಳನ್ನು ರಚಿಸಲಾಗಿತ್ತು.
ಪಶ್ಚಿಮ ಬಂಗಾಳದಿಂದ ಒಬ್ಬ, ಮಹಾರಾಷ್ಟ್ರದಿಂದ ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಿ ಕರೆತರಲಾಗಿದೆ. ಮೈಸೂರಿನಲ್ಲಿ ಅವರಿಗೆ ಸಹಕಾರ ನೀಡಿದ್ದ ಆರೋಪಿಯನ್ನೂ ಬಂಧಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.