ಬುಧವಾರ, ಜೂನ್ 29, 2022
23 °C
ಆರೋಪ– ಪ್ರತ್ಯಾರೋಪ l ಚಾಮುಂಡೇಶ್ವರಿ ಮಡಿಲಿಗೆ ಹಾಕಿದ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌

ಮೈಸೂರು: ಅಧಿಕಾರಿಗಳ ಮುಂದುವರಿದ ಜಟಾಪಟಿ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶುಕ್ರವಾರ ಮತ್ತೆ ಆಕ್ರೋಶ ಹೊರಹಾಕಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್‌,  ಒಬ್ಬರ ಅಹಂಕಾರದಿಂದ ಇಡೀ ವ್ಯವಸ್ಥೆ ಹದಗೆಡಬಾರದು ಎಂಬ ವಿಚಾರ ಹೇಳಲು ತಾವು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದು, ತಪ್ಪು ಮಾಡಿದ್ದರೆ ಕ್ಷಮಿಸುವಂತೆ ಹೇಳಿದರು.

ಮೈಸೂರು ನಾಗರಿಕರ ವೇದಿಕೆ ವತಿಯಿಂದ ಸುತ್ತೂರು ಶಾಖಾ ಮಠದಲ್ಲಿ ಶುಕ್ರವಾರ ನಡೆದ ಔಷಧಿ ಕಿಟ್‌ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಲಸ ನಡೆಯುತ್ತಿದ್ದರೂ ನಡೆಯುತ್ತಿಲ್ಲ ಎಂಬುದನ್ನು ಬಿಂಬಿಸಿ, ದಿನವೂ ನೋಟಿಸ್‌ ನೀಡುತ್ತಿದ್ದಾರೆ. ಎಲ್ಲರಲ್ಲಿ ಭಯದ ವಾತಾವರಣ ನಿರ್ಮಿಸಿ, ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ’ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯ ಆಶೀರ್ವಾದ ಪಡೆದ ಶಿಲ್ಪಾನಾಗ್‌,   ನಡೆದಿರುವ ವಿಚಾರವನ್ನು ಹೇಳಿಕೊಂಡರು. ಈ ಸಂದರ್ಭದಲ್ಲಿ ಸಚಿವ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪಸಿಂಹ, ಶಾಸಕ ಎಸ್‌.ಎ.ರಾಮದಾಸ್‌ ಸೇರಿದಂತೆ ಹಲವು ಜನಪ್ರತಿನಿಧಿಗಳು ಇದ್ದರು.‌

ಭೂಗಳ್ಳರು ಹೆಣೆದ ತಂತ್ರ: ಎಚ್‌. ವಿಶ್ವನಾಥ್‌

ಹುಣಸೂರು: ‘ಮೈಸೂರಿನ ಹಿರಿಯ ಅಧಿಕಾರಿಗಳ ಗುದ್ದಾಟದ ಹಿಂದೆ ಕೆಲವು ರಾಜಕಾರಣಿಗಳು, ಭೂ
ಹಗರಣದಲ್ಲಿ ಭಾಗಿಯಾದವರಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಹೇಳಿದರು.

’ಅವರೆಲ್ಲ, ಶಿಲ್ಪಾ ನಾಗ್ ಹೆಗಲ ಮೇಲೆ ಬಂದೂಕು ಇಟ್ಟು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ‘ಶೂಟ್’ ಮಾಡುವ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಆ ಮೂಲಕ ವರ್ಗಾವಣೆಗೆ ಒತ್ತಡ ಹೇರುವ ಕೆಲಸ ನಡೆದಿದೆ. ರೋಹಿಣಿ ಅವರ ಜಾಗಕ್ಕೆ ಶಿಲ್ಪಾ ಅವರನ್ನು ತರುವ ತೆರೆಮರೆಯ ಕಸರತ್ತೂ ನಡೆದಿದೆ. ಈ ಚಟುವಟಿಕೆಯಲ್ಲಿ ಸಂಸದರು, ಸಾ.ರಾ.ಮಹೇಶ್ ಮತ್ತು ಹಲವು ಭೂಗಳ್ಳರ ಒತ್ತಡವೂ ಇದೆ’ ಎಂದು ಆರೋಪಿಸಿದರು.

‘ಅಧಿಕಾರಿಗಳ ಕಿತ್ತಾಟ ನಿಲ್ಲಿಸಿ’

ಬೆಂಗಳೂರು: ಮೈಸೂರಿನಲ್ಲಿ ನಡೆಯುತ್ತಿರುವ ಐಎಎಸ್‌ ಅಧಿಕಾರಿಗಳ ಕಿತ್ತಾಟ ನಿಲ್ಲಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಅವರು, ‘ಅಧಿಕಾರಿಗಳ ಬೀದಿ ಜಗಳದಿಂದ ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗುವ ಅಪಾಯವಿದೆ. ಈಗಿನ ಸ್ಥಿತಿ ನೋಡಿದರೆ ರಾಜ್ಯದಲ್ಲಿ ಸರ್ಕಾರ ಇದೆಯೊ? ಇಲ್ಲವೊ? ಎಂಬ ಅನುಮಾನ ಮೂಡಿದೆ. ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

ಅಧಿಕಾರಿಗಳ ಕಿತ್ತಾಟದಲ್ಲಿ ಪರ, ವಿರೋಧದ ಹೇಳಿಕೆ ನೀಡುತ್ತಿರುವ ಜನಪ್ರತಿನಿಧಿಗಳು ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಎಲ್ಲ ಅಧಿಕಾರಿಗಳೂ ನಾಳೆ ಇದೇ ಹಾದಿ ತುಳಿದರೆ ಪರಿಸ್ಥಿತಿ ಏನಾಗಬಹುದು? ಜಗಳಕ್ಕೆ ಇಳಿದಿರುವ ಇಬ್ಬರ ವಿರುದ್ಧವೂ ಹಣ ದುರ್ಬಳಕೆ ಆರೋಪಗಳಿವೆ. ಈ ಬಗ್ಗೆ ಸರ್ಕಾರ ಕಂಡೂ ಕಾಣದಂತೆ ಇರುವುದೇಕೆ ಎಂದು ಕೇಳಿದ್ದಾರೆ.

***

ಇಷ್ಟೊಂದು ಅಹಂಕಾರ ಇರಬಾರದು. ತಾನು ಮಾಡಿದ್ದೇ ಸರಿ, ಎಲ್ಲವೂ ತನ್ನಿಂದಲೇ ಆಗಬೇಕು ಎಂಬ ಸಮರ್ಥನೆ ಸರಿಯಲ್ಲ. ಪ್ರಶಂಸೆ, ಟೀಕೆಗಳನ್ನು ಸಮನಾಗಿ ಸ್ವೀಕರಿಸಬೇಕು

-ಶಿಲ್ಪಾ ನಾಗ್‌
 

***

ಶಿಲ್ಪಾನಾಗ್‌ ಫೆ. 15ರಂದು ಪಾಲಿಕೆ ಆಯುಕ್ತರಾಗಿ ಬಂದರು. ಇತ್ತೀಚಿನವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಕಳೆದ 15 ದಿನಗಳಲ್ಲಿ ಮಾತ್ರ ಏಕೆ ಸಮಸ್ಯೆ‌ ಉದ್ಭವಿಸಿದೆ?

-ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು