ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪಾ– ರೋಹಿಣಿ ಸಂಧಾನಕ್ಕೆ ಯತ್ನ: ಗೋಪ್ಯ ಸಭೆ ನಡೆಸಿದ ಮುಖ್ಯ ಕಾರ್ಯದರ್ಶಿ

Last Updated 4 ಜೂನ್ 2021, 23:33 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಟಾಪಟಿಗೆ ತೆರೆ ಎಳೆಯಲಿಕ್ಕಾಗಿಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಶುಕ್ರವಾರ ನಗರದಲ್ಲೇ ಗೋಪ್ಯ ಸಭೆ ನಡೆಸಿದರು ಎಂಬುದು ಗೊತ್ತಾಗಿದೆ.

ಮುಖ್ಯ ಕಾರ್ಯದರ್ಶಿಯೇ ಸಂಧಾನಕ್ಕೆ ಯತ್ನಿಸಿದರೂ, ಇಬ್ಬರು ಐಎಎಸ್‌ ಅಧಿಕಾರಿಗಳ ನಡುವಿನ ಜಗಳ ಶಮನಗೊಳ್ಳುವ ಯಾವೊಂದು ಲಕ್ಷಣ ಗೋಚರಿಸಿಲ್ಲ. ಸಭೆ ಆರಂಭಕ್ಕೂ ಮುನ್ನವೇ ಇಬ್ಬರೂ ಪ್ರತ್ಯೇಕವಾಗಿ ಆರೋಪ–ಪ್ರತ್ಯಾರೋಪ ಮಾಡಿದರು. ಸಭೆಯ ನಂತರವೂ ಇದು ಮುಂದುವರಿಯಿತು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದೂರಿಗೆ, ಶಿಲ್ಪಾ ನಾಗ್‌ ಪತ್ರಿಕಾ ಪ್ರಕಟಣೆ ಮೂಲಕ ಪ್ರತ್ಯುತ್ತರ ನೀಡಿದರು. ಗುರುವಾರವೇ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ರವಾನಿಸಿರುವ ಪತ್ರವೊಂದನ್ನು ಬಿಡುಗಡೆ ಮಾಡಿದರು.

25 ನಿಮಿಷ ಸಭೆ: ‘ಕೋವಿಡ್‌ಗೆ ಸಂಬಂಧಿಸಿದಂತೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ರವರೆಗೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ಗೈರಾಗಿದ್ದರು. ಸಭೆಗೆ ಬರುವಂತೆ ಸೂಚಿಸಿದ ಬಳಿಕ 3.30ಕ್ಕೆ ಹಾಜರಾದರು. ಅರ್ಧ ಗಂಟೆಯ ಬಳಿಕ ಪಿ.ರವಿಕುಮಾರ್‌, ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌, ಶಿಲ್ಪಾ ನಾಗ್‌ ಮೂವರೇ 25 ನಿಮಿಷ ಗೋಪ್ಯ ಸಭೆ’ ನಡೆಸಿದರು ಎಂದು ಜಿಲ್ಲಾಡಳಿತದ ಅಧಿಕಾರಿ
ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೋಪ್ಯ ಸಭೆಯ ಆರಂಭದಲ್ಲೇ ಶಿಲ್ಪಾ ನಾಗ್‌ ಅವರು ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಲು ಮುಂದಾದರು. ರಾಜೀನಾಮೆ ಸ್ವೀಕರಿಸದ ರವಿಕುಮಾರ್‌, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಹಲವು ಮಾಹಿತಿ ಪಡೆದರು. ಕೆಲ ಪ್ರಶ್ನೆಗಳು, ದಾಖಲಾತಿಗಳನ್ನು ಕೇಳಿದರು ಎಂಬುದು ಮೂಲಗಳಿಂದ ಗೊತ್ತಾಗಿದೆ.

ಕೋವಿಡ್‌ ಸಭೆ ಆರಂಭಕ್ಕೂ ಮುನ್ನವೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಈಚೆಗಿನ ವಿದ್ಯಮಾನಗಳ ಮಾಹಿತಿ ನೀಡಿದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT