ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಕಾವೇರಿ ‘ಅನ್ಯಾಯ’ದ ಹಿಂದಿನ ಸತ್ಯ - ಮಿಥ್ಯೆ

Last Updated 2 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಕರ್ನಾಟಕ ಮತ್ತು ತಮಿಳುನಾಡಿನ ನಡುವಣ ಕಾವೇರಿ ಜಲವಿವಾದಕ್ಕೆ ಒಂದೂಕಾಲು ಶತಮಾನದ ಇತಿಹಾಸವಿದೆ. ಇತಿಹಾಸದುದ್ದಕ್ಕೂ ತನಗೆ ಅನ್ಯಾಯ ಆಗಿದೆ ಎಂಬ ಕರ್ನಾಟಕದ ಭಾವನೆ ಸಂಪೂರ್ಣ ನಿರಾಧಾರ ಅಲ್ಲ. ಹಾಗೆಯೇ ಈ ಭಾವನೆಯನ್ನು ಸಾರಾಸಗಟಾಗಿ ಒಪ್ಪುವುದೂ ಸಾಧ್ಯವಿಲ್ಲ.

ಈ ‘ಅನ್ಯಾಯ’ದ ಹಿಂದೆ ಹಲವು ಕಾರಣಗಳು ಒಂದನ್ನೊಂದು ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ಐತಿಹಾಸಿಕ ಕಾರಣಗಳಿವೆ. ರಾಜಕಾರಣವೂ ಇದೆ. ಮೈಸೂರು ಸೀಮೆಯನ್ನು ಆಳಿದ ಅರಸೊತ್ತಿಗೆ ಕಾವೇರಿ ನೀರು ಬಳಕೆ ಕುರಿತು ತೀರಾ ತಡವಾಗಿ ಎಚ್ಚೆತ್ತುಕೊಂಡ
‘ಸ್ವಯಂಕೃತಾಪರಾಧ’ವೂ ಇದೆ. ಕಾವೇರಿ ನೀರು ಬಳಕೆಗೆ ಕರ್ನಾಟಕದಲ್ಲಿ ತಲೆಯೆತ್ತಿದ ಮೊದಲ ಯೋಜನೆ ಕೃಷ್ಣರಾಜಸಾಗರ. ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಪ್ರಗತಿಪರ ಅರಸರೇ ಬರಬೇಕಾಯಿತು. ನಿರ್ಮಾಣ ಕಾರ್ಯ 1911ರಲ್ಲಿ ಆರಂಭವಾಗಿ 1931ರಲ್ಲಿ ಪೂರ್ಣಗೊಂಡಿತು. ಆದರೆ ತಮಿಳುನಾಡಿನಲ್ಲಿ ಕಾವೇರಿ ನೀರು ಬಳಕೆಗೆ ಮೊದಲ ಅಣೆಕಟ್ಟು ಕಟ್ಟಿದ್ದು ಎರಡನೆಯ ಶತಮಾನದಲ್ಲಿ, ಚೋಳರ ಆಳ್ವಿಕೆಯಲ್ಲಿ. ಕೃಷ್ಣರಾಜಸಾಗರ ಅಣೆಕಟ್ಟು ಮತ್ತು ಕರಿಕಾಲ ಚೋಳ ಕಟ್ಟಿದ ಕಲ್ಲಾಣೈ ಎಂಬ ಕಲ್ಲಿನ ಅಣೆಕಟ್ಟೆಗೂ 17 ನೂರು ವರ್ಷಗಳ ಅಂತರ! ಅರ್ಥಾತ್ ಕನ್ನಡಿಗರು ನೀರಾವರಿಗಾಗಿ ಕಾವೇರಿ ನೀರನ್ನು ಬಳಸುವ 17 ಶತಮಾನಗಳಷ್ಟು ಹಿಂದೆಯೇ ತಮಿಳರು ಆ ಕೆಲಸವನ್ನು ಮಾಡಿದ್ದರು.

ತಮಿಳುನಾಡು ಮತ್ತು ಕರ್ನಾಟಕದ ನಡುವೆ 1894 ಮತ್ತು 1924ರ ಒಪ್ಪಂದಗಳು ಏರ್ಪಡುವ ಹೊತ್ತಿಗೆ ತಮಿಳುನಾಡು ತನ್ನ ಕಾವೇರಿ ಕಣಿವೆಯಲ್ಲಿ ಸುಮಾರು 15 ಲಕ್ಷ ಎಕರೆಗಳಷ್ಟು ನೀರಾವರಿಯನ್ನು ಅಭಿವೃದ್ಧಿಪಡಿಸಿತ್ತು. ಶೇ 80ರಷ್ಟು ಕಾವೇರಿ ನೀರನ್ನು ತಮಿಳುನಾಡು ಬಳಸಿಕೊಳ್ಳುತ್ತಿತ್ತು. 1924ರ ಒಪ್ಪಂದ 1974ರಲ್ಲಿ ತೀರಿದಾಗಲೂ ಇದೇ ಪರಿಸ್ಥಿತಿ ಇತ್ತು. ತಡವಾಗಿ ಕಣ್ಣು ತೆರೆದ ಕರ್ನಾಟಕ ಬಹಳ ಹಿಂದೆ ಬಿದ್ದಿತ್ತು.

ಕರ್ನಾಟಕಕ್ಕೆ ಆದ ಕಾವೇರಿ ಅನ್ಯಾಯದ ಹಿಂದೆ ಇನ್ನೊಂದು ಐತಿಹಾಸಿಕ ಕಾರಣವಿದೆ.

ಅಂದಿನ ಮೈಸೂರು ಮತ್ತು ಮದ್ರಾಸ್ ಪ್ರೆಸಿಡೆನ್ಸಿ ನಡುವೆ 1892 ಮತ್ತು 1924ರ ಕಾವೇರಿ ಒಪ್ಪಂದಗಳು ಅಸಮಾನರ ನಡುವೆ ಜರುಗಿದ ಒಡಂಬಡಿಕೆಗಳು. ಮದ್ರಾಸ್ ಪ್ರೆಸಿಡೆನ್ಸಿಗೆ ಅಧೀನವಾಗಿದ್ದ ಮೈಸೂರು ಈ ಒಪ್ಪಂದಗಳಿಗೆ ಸಹಿ ಹಾಕದೆ ವಿಧಿಯೇ ಇರಲಿಲ್ಲ. ಈ ಒಪ್ಪಂದಗಳು ಕಾವೇರಿ ನೀರಿನ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕದ ಕೈಗಳನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದವು.ಕಾವೇರಿ ಜಲವಿವಾದದ ಪ್ರಶ್ನೆ ಬಂದಾಗಲೆಲ್ಲ ತನ್ನ ನೇರ ಆಳ್ವಿಕೆಯಿದ್ದ ತಮಿಳುನಾಡಿನ ಹಿತವನ್ನೇ ಕಾಯುತ್ತಿತ್ತು ಅಂದಿನ ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿ.

ಈ ಒಪ್ಪಂದಗಳ ಹೇರಿಕೆ ಕುರಿತು ಈ ಸಂದರ್ಭದಲ್ಲಿ ಉಲ್ಲೇಖಿಸಲೇಬೇಕಿರುವ ಅಂಶ ವೊಂದಿದೆ. ಕರ್ನಾಟಕದ ನಿಷ್ಕ್ರಿಯತೆಗೆ ಕನ್ನಡಿ ಹಿಡಿಯುವ ಅಂಶವಿದು. ಕಾವೇರಿ ವಿವಾದ ಕುರಿತು 2018ರಲ್ಲಿ ಹೊರಬಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ಈ ಅಂಶವನ್ನು ಗಮನಿಸಿ.

‘1892 ಮತ್ತು 1924ರಲ್ಲಿ ಚೌಕಾಶಿ ಮಾಡುವ ಅಧಿಕಾರ ಅಂದಿನ ಮೈಸೂರು ಅರಸೊತ್ತಿಗೆಗೆ ಇಲ್ಲದಿರಬಹುದು. ಆದರೆ
ಸ್ವಾತಂತ್ರ್ಯಾನಂತರ ಮತ್ತು ಸಂವಿಧಾನ ಅಳವಡಿಕೆಯ ನಂತರ ಈ ಒಪ್ಪಂದಗಳನ್ನು ಪ್ರಶ್ನಿಸುವ ಅಧಿಕಾರ ಕರ್ನಾಟಕ ರಾಜ್ಯಕ್ಕೆ ಖಚಿತವಾಗಿ ಇತ್ತು. ಆದರೆ ಆ ಗೊಡವೆಗೇ ಹೋಗಲಿಲ್ಲ. ಪುರಾಣದ ‘ಫೀನಿಕ್ಸ್’ ಹಕ್ಕಿಯಂತೆ ಬೂದಿಯಿಂದ ಮೇಲೇಳಲಿಲ್ಲ. ಬದಲಾಗಿ ‘ಸ್ಫಿಂಕ್ಸ್’ನಂತೆ (ಮಹಿಳೆಯ ರುಂಡ ಮತ್ತು ಸಿಂಹದ ಮುಂಡ ಹೊಂದಿದ ಪುರಾತನ ಈಜಿಪ್ಟ್‌ನ ಬೃಹತ್ ಪೌರಾಣಿಕ ಶಿಲ್ಪ) ನಿಗೂಢ ಮೌನ ತಳೆದೇ ಉಳಿಯಿತು. ಹೀಗಾಗಿ ಅನೀತಿಯುತ ಎಂಬ ಕಾರಣ ನೀಡಿ ಈ ಒಪ್ಪಂದಗಳನ್ನು ಅಸಿಂಧುವೆಂದು ಸಾರಬೇಕೆಂಬ ವಾದವನ್ನು ನಾವು ಒಪ್ಪುವುದಿಲ್ಲ. 1956ರಲ್ಲಿ ರಾಜ್ಯಗಳ ಮರುವಿಂಗಡಣೆಯ ನಂತರವೂ ಹೊಸ ಮೈಸೂರು ರಾಜ್ಯ ಈ ಒಪ್ಪಂದಗಳನ್ನು ಪ್ರಶ್ನಿಸದೆ ಜಾರಿಗೊಳಿಸಿತು’.

ಕೇಂದ್ರದಲ್ಲಿ ವಿಶೇಷವಾಗಿ ಸಮ್ಮಿಶ್ರ ಸರ್ಕಾರಗಳ ಶಕೆ ಆರಂಭ ಆದ ನಂತರ ತಮಿಳು ನಾಡಿನ ಎರಡು ಪ್ರಬಲ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ತಮ್ಮ ರಾಜಕೀಯ ಪ್ರಾಬಲ್ಯ ಮೆರೆದಿವೆ. ಕೇಂದ್ರ ಸರ್ಕಾರವನ್ನು ತಮ್ಮ ಹಿತಾಸಕ್ತಿಗಳಿಗೆ ಬಗ್ಗಿಸಿಕೊಂಡಿವೆ.

ತಮಿಳುನಾಡು ಕಾಲ ಕಾಲಕ್ಕೆ ಕೇಂದ್ರದ ತೋಳು ತಿರುಚಿ ತನ್ನ ಕಾವೇರಿ ಬೇಳೆ ಬೇಯಿಸಿ ಕೊಳ್ಳುವ ರಾಜಕೀಯ ಕೂಡ ಎಲ್ಲ ಕಾಲಕ್ಕೂ ಅಷ್ಟೇ ತೀವ್ರವಾಗಿ ನಡೆಯಲಿಲ್ಲ. ಈ ಮಾತಿಗೆ ಹಲವು ನಿದರ್ಶನಗಳಿವೆ. ತಮಿಳುನಾಡಿನ ಕಾವೇರಿ ಸಿಂಹಪಾಲು ಅಬಾಧಿತವಾಗಿ ಮುಂದುವರಿದಿಲ್ಲ. ತಾನು ಅನುಭವಿಸುತ್ತಿದ್ದ ಶೇ 80ರ ಪ್ರಮಾಣಕ್ಕೆ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಕತ್ತರಿ ಬಿದ್ದು ಅದು ಶೇ 54.50ರಷ್ಟಕ್ಕೆ ಇಳಿದಿದೆ. ಕರ್ನಾಟಕದ ಪಾಲಿನ ಪ್ರಮಾಣ ಶೇ 16ರಿಂದ ಶೇ 39ರಷ್ಟಕ್ಕೆ ಏರಿದೆ.

1995-96ರ ಮಳೆಯ ಅಭಾವದ ವರ್ಷದಲ್ಲಿ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಆದೇಶದ ಪಾಲನೆ ಕರ್ನಾಟಕದ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಕನಿಷ್ಠ 30 ಟಿಎಂಸಿ ಅಡಿಗಳಷ್ಟು ನೀರು ಹರಿಸಲು ತಮಿಳುನಾಡು ಒತ್ತಡ ಹೇರಿತ್ತು. ನ್ಯಾಯಮಂಡಳಿಯು 30 ಟಿಎಂಸಿ ಅಡಿಗಳನ್ನು 11 ಟಿಎಂಸಿ ಅಡಿಗಳಿಗೆ ತಗ್ಗಿಸಿತು. ತಮಿಳುನಾಡು ಪುನಃ ಸುಪ್ರೀಂ ಕೋರ್ಟ್‌ಗೆ ಹೋಯಿತು. ರಾಜಕೀಯ ಪರಿಹಾರ ವನ್ನು ಕಂಡು ಹಿಡಿಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು ನ್ಯಾಯಾಲಯ. ಪ್ರಧಾನಿ ಪಿ.ವಿ.ನರಸಿಂಹರಾವ್ ನೀರು ಬಿಡುಗಡೆಯ ಪ್ರಮಾಣವನ್ನು ಆರು ಟಿ.ಎಂ.ಸಿ.ಅಡಿಗಳಿಗೆ ತಗ್ಗಿಸಿ ಉಭಯ ರಾಜ್ಯಗಳನ್ನು ಒಪ್ಪಿಸಿದ್ದರು.

1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೆ ಅಗತ್ಯ ಬಹುಮತವನ್ನು ನೀಡಿದ್ದು ತಮಿಳುನಾಡು. ಜಯಲಲಿತಾ ಅವರ ಆಕ್ರೋಶಕ್ಕೆ ಗುರಿಯಾದ ವಾಜಪೇಯಿ ಸರ್ಕಾರ ವರ್ಷದೊಪ್ಪತ್ತಿನಲ್ಲಿ ಬಿದ್ದೇ ಹೋಯಿತು. 1999ರಲ್ಲಿ ವಾಜಪೇಯಿ ಪುನಃ ಸರ್ಕಾರ ರಚಿಸಿದರು. ಈ ಸಲ ಕರುಣಾನಿಧಿ ಅವರ ಡಿಎಂಕೆ ವಾಜಪೇಯಿ ಕೈ ಹಿಡಿದಿತ್ತು. ಹೀಗೆ ಕೇಂದ್ರ ಸರ್ಕಾರಗಳನ್ನು ಉರುಳಿಸುವ ಮತ್ತು ಉಳಿಸುವ ಎರಡೂ ಸಾಮರ್ಥ್ಯಗಳನ್ನು ತಮಿಳುನಾಡು ಕಾಲ ಕಾಲಕ್ಕೆ ರುಜುವಾತು ಮಾಡುತ್ತ ಬಂದಿದೆ.

ಈ ಒತ್ತಡತಂತ್ರಗಳಿಗೆ ಮಿತಿಗಳಿವೆ ಎಂಬು ದನ್ನೂ ಗಮನಿಸಬೇಕಿದೆ. ನ್ಯಾಯಮಂಡಳಿಯ ಮಧ್ಯಂತರ ಆದೇಶವನ್ನು ಜಾರಿಗೆ ತರಲು ಕಾವೇರಿ ನದಿ ಪ್ರಾಧಿಕಾರ ರಚನೆಯ ಕರಡನ್ನು ಐ.ಕೆ. ಗುಜ್ರಾಲ್ ಸರ್ಕಾರ ರೂಪಿಸಿತ್ತು. ಕಾವೇರಿ ಜಲಾಶಯಗಳನ್ನು ವಶಪಡಿಸಿಕೊಳ್ಳುವ ಕರಾಳ ಅಧಿಕಾರಗಳನ್ನು ಈ ಪ್ರಾಧಿಕಾರ ಹೊಂದಿತ್ತು. ತಮಿಳುನಾಡು ಈ ಪ್ರಾಧಿಕಾರ ರಚನೆಯನ್ನು ಸಂತೋಷದಿಂದ ಸ್ವಾಗತಿಸಿತು. 1999ರಲ್ಲಿ ಅಧಿಕಾರಕ್ಕೆ ಬಂದ ವಾಜಪೇಯಿ ಸರ್ಕಾರದಲ್ಲಿ ಡಿಎಂಕೆ ಪ್ರಾಬಲ್ಯವಿತ್ತು. ಆದರೂ ಪ್ರಾಧಿಕಾರದ ಕರಾಳ ಅಧಿಕಾರಗಳನ್ನು ಕಿತ್ತು ಹಾಕುವಲ್ಲಿ ಈ ಸರ್ಕಾರ ಸಫಲವಾಯಿತು. ಅಂದಿನ ಸರ್ಕಾರದಲ್ಲಿ ಪ್ರಭಾವಿ ಮಂತ್ರಿಯಾಗಿದ್ದರು ಅನಂತಕುಮಾರ್. ಕರ್ನಾಟಕದ ಹಿತಾಸಕ್ತಿಗಳನ್ನು ಅವರು ಶಕ್ತಿ ಮೀರಿ ಕಾಪಾಡಿದ್ದು ಹೌದು. ಈ ಸಾಫಲ್ಯದ ಹಿಂದೆ ಅನಂತಕುಮಾರ್- ಎಚ್.ಡಿ.ದೇವೇಗೌಡ, ಎಚ್.ಎನ್. ನಂಜೇಗೌಡ- ನ್ಯಾಯವಾದಿ ಮೋಹನ್ ಕಾತರಕಿ ಅವರ ಶ್ರಮವಿತ್ತು. 40 ಪುಟಗಳ ಪ್ರಾಧಿಕಾರದ ಕರಡು ನಾಲ್ಕು ಪುಟಗಳಿಗೆ ಇಳಿದಿತ್ತು.

ತನ್ನ ಕಾವೇರಿ ಹಿತಾಸಕ್ತಿಯನ್ನು ಕಾಪಾಡಿ ಕೊಳ್ಳಲು ಕೇಂದ್ರದ ತೋಳು ತಿರುಚುವ ರಾಜಕಾರಣ ಅನುಸರಿಸಿರುವುದು ಹೌದು. ಆದರೆ ಈ ಮೊದಲೇ ಹೇಳಿದಂತೆ ಅಂಶವನ್ನು ಮೀರಿದ ಹಲವು ಸಂಗತಿಗಳು ತಮಿಳುನಾಡು ಮೇಲುಗೈ ಹೊಂದಲು ಕಾರಣವಾಗಿವೆ. ಬ್ರಿಟಿಷರ ನೇರ ಆಡಳಿತದ ಫಲವಾಗಿ ಶಿಕ್ಷಣ, ನಾಗರಿಕ ಸೇವೆ, ನ್ಯಾಯಾಂಗದಲ್ಲಿ ತಮಿಳುನಾಡಿಗೆ ಪ್ರಭಾವೀ ಅಸ್ತಿತ್ವ ಇದೆ. ಪರೋಕ್ಷವಾಗಿ ಸದ್ದಿಲ್ಲದೆ ತಮಿಳುನಾಡಿನ ಪಾರಮ್ಯವನ್ನು ಹಿತಾಸಕ್ತಿಯನ್ನು ಎತ್ತಿ ಹಿಡಿಯುವ ಅಸ್ತಿತ್ವವಿದು. ಈ ಅಸ್ತಿತ್ವಕ್ಕೆ ಈಗಲೂ ಕುಂದು ಬಂದಿಲ್ಲ. ಸದ್ಯ ಭವಿಷ್ಯದಲ್ಲಿ ಅಂತಹ ಸಾಧ್ಯತೆಯೂ ಇಲ್ಲ.

ಲೇಖಕ: ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT