ಬುಧವಾರ, ಮಾರ್ಚ್ 22, 2023
24 °C

ನಾಗರಹೊಳೆ | ಉರುಳಿಗೆ ಸಿಲುಕಿ ತಾಯಿ ಹುಲಿ ಸಾವು; ಮರಿಗಳ ರಕ್ಷಣೆಗೆ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್‌.ಡಿ.ಕೋಟೆ (ಮೈಸೂರು ಜಿಲ್ಲೆ): ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನಲ್ಲಿ ಉರುಳಿಗೆ ಸಿಲುಕಿ ತಾಯಿ ಹುಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಅದರ ಮೂರು ಮರಿಗಳನ್ನು ರಕ್ಷಿಸಲು ಅರಣ್ಯ ಇಲಾಖೆ ಕ್ರಮ ವಹಿಸಿದೆ. ನಾಲ್ಕು ಆನೆಗಳನ್ನು ಬಳಸಿಕೊಂಡು ಭಾನುವಾರ ಪತ್ತೆ ಕಾರ್ಯಾಚರಣೆ ಆರಂಭಿಸಿದೆ.

ದಮ್ಮನಕಟ್ಟೆ ಸಫಾರಿ ಕೇಂದ್ರದ ಆಕರ್ಷಣೆಯಾಗಿದ್ದ, 9 ಮರಿಗಳಿಗೆ ಜನ್ಮ ನೀಡಿ ಪ್ರಖ್ಯಾತಿ ಪಡೆದಿದ್ದ ‘ನಾಯಂಜಿಕಟ್ಟೆ ಫೀಮೆಲ್‌’ (12) ಹುಲಿಯ ಕಳೇಬರ ಶನಿವಾರ ಪತ್ತೆಯಾಗಿತ್ತು.

‘ತಾಯಿ ಇಲ್ಲದೆ ಅನಾಥವಾಗಿರುವ 1 ವರ್ಷದ 3 ಹುಲಿ ಮರಿಗಳು ಬೇಟೆಯಾಡಿ ಜೀವಿಸಲು ಸಾಧ್ಯವಿಲ್ಲ. ಅವುಗಳನ್ನು ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲು ಇಲಾಖೆಯಿಂದ ಅನುಮತಿ ದೊರೆತಿದೆ. ಚಲನವಲನವಿದ್ದ ಜಾಗಗಳಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಸಿದ್ದರಾಜು ತಿಳಿಸಿದರು.

‘ಮರಿಗಳ ಹೆಜ್ಜೆ ಗುರುತುಗಳು ಇದ್ದ ಕಡೆ ಮೂರು ಬೋನುಗಳನ್ನು ಇಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಕಾರ್ಯಾಚರಣೆಯಲ್ಲಿ ‘ಅಭಿಮನ್ಯು’, ‘ಭೀಮ’ ಸೇರಿದಂತೆ ನಾಲ್ಕು ಆನೆಗಳ ಸಹಕಾರದಿಂದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ’ ಎಂದು ಇಲಾಖೆಯ ಪಶುವೈದ್ಯ ಡಾ.ರಮೇಶ್ ತಿಳಿಸಿದರು.

ಪ್ರತಿ ಬಾರಿಯೂ ಮೂರು ಮರಿಗಳಂತೆ ಒಟ್ಟು 9 ಮರಿಗಳಿಗೆ ಜನ್ಮ ನೀಡಿದ್ದ ‘ತಾರಕ ಹಿನ್ನೀರು ಹುಲಿ’ ಎಂದೇ ತಾಯಿ ಹುಲಿ ಹೆಸರಾಗಿತ್ತು. ಅದು 2020ರ ಜನವರಿಯಲ್ಲಿ 3 ಮರಿಗಳೊಂದಿಗೆ ನಾಯಂಜಿಕಟ್ಟೆ ಕೆರೆಯಲ್ಲಿ ನೀರಿನಲ್ಲಿ ಚೆಲ್ಲಾಟವಾಡುತ್ತಿದ್ದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಂಚಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು