ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನುಗನಹಳ್ಳಿ: ‘ಮಕ್ಕಳ ಸ್ನೇಹಿ’ ಗ್ರಾಮ ಪಂಚಾಯಿತಿ

ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಪಂಚಾಯಿತಿ
Last Updated 4 ಏಪ್ರಿಲ್ 2021, 20:23 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಮುನುಗನಹಳ್ಳಿ ಗ್ರಾಮ ಪಂಚಾಯಿತಿ 2020-21 ನೇ ಸಾಲಿನ ‘ರಾಷ್ಟ್ರೀಯ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ’ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿದೆ.

ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ರಾಜ್ಯದ ಏಕೈಕ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಮುನುಗನಹಳ್ಳಿ ಪಾತ್ರವಾಗಿದೆ.

ಪ್ರಶಸ್ತಿ ಪತ್ರ ಮತ್ತು ₹ 5 ಲಕ್ಷ ನಗದು ಬಹುಮಾನ ಒಳಗೊಂಡಿರುವ ಪುರಸ್ಕಾರವನ್ನು ಏ.‌24ರಂದು ನಡೆಯುವ ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೇತುಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಾನುಕುಂಟೆ ಮತ್ತು ಚಿಂತಾಮಣಿಯ ಮುನುಗನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಪ್ರಶಸ್ತಿಗಾಗಿ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಕೇಂದ್ರ ಅಧಿಕಾರಿಗಳ ತಂಡ ಮೂರೂ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮುನುಗನಹಳ್ಳಿ ಪಂಚಾಯಿತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

‘ಸ್ಥಳೀಯ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಮೂಲಸೌಲಭ್ಯ ಒದಗಿಸಿರುವುದನ್ನು ಪ್ರಶಸ್ತಿಗೆ ಪ್ರಮುಖವಾಗಿ ಪರಿಗಣಿಸಲಾಗಿದೆ. ನರೇಗಾ ಯೋಜನೆ ಅಡಿ ಶಾಲೆಗಳಿಗೆ ಸುಣ್ಣ-ಬಣ್ಣ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳಿಗಾಗಿ ₹ 52 ಲಕ್ಷ ವ್ಯಯ ಮಾಡಲಾಗಿದೆ. ಎಲ್ಲ ಶಾಲಾ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಯಾವ ಮಕ್ಕಳೂ ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗಿದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವಿತಾ.

ಪ್ರಶಸ್ತಿಗೆ ಆಯ್ಕೆ ಹೇಗೆ?
ಕೇಂದ್ರ ಪಂಚಾಯತ್ ರಾಜ್ ಇಲಾಖೆಯು ನಾನಾಜಿ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ, ದೀನ್‌ ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅವಾರ್ಡ್ (ಜಿಪಿಡಿಪಿಎ) ಹಾಗೂ ರಾಷ್ಟ್ರೀಯ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಎಂಬ ನಾಲ್ಕು ಪ್ರಶಸ್ತಿಗಳಿಗೆ ರಾಜ್ಯದ ತಲಾ ಒಂದು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡುತ್ತದೆ.

ಪ್ರತಿ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿಯನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಅಲ್ಲಿ ಎಲ್ಲ ಮಾನದಂಡ ಪರಿಶೀಲಿಸಿದ
ನಂತರ ಒಂದು ಪಂಚಾಯಿತಿಯನ್ನು ರಾಜ್ಯ ಮಟ್ಟಕ್ಕೆ ಶಿಫಾರಸು ಮಾಡಲಾಗುತ್ತದೆ.

ಮಾದರಿಯಾದದ್ದು ಹೇಗೆ?
ಮುನುಗನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 12 ಶಾಲೆ ಹಾಗೂ 11 ಅಂಗನವಾಡಿ ಕೇಂದ್ರಗಳಿದ್ದು, ಮೂರು ಮಾದರಿ ಅಂಗನವಾಡಿಗಳಿವೆ. ಐದು ಶಾಲೆಗಳಿಗೆ ಶಾಲಾವರಣ ನಿರ್ಮಾಣ ಮಾಡಲಾಗಿದೆ. ಆರು ಶಾಲೆಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಎರಡು ಶಾಲೆಗಳಲ್ಲಿ ಕೈ ತೋಟಗಳಿವೆ.

ಹಳೆ ಶಾಲಾ ಕಟ್ಟಡಗಳ ದುರಸ್ತಿ, ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ಗ್ರಂಥಾಲಯ, ಮಾಹಿತಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಯಲ್ಲಿದ್ದ ಬ್ರಾಹ್ಮಣರದಿನ್ನೆ ಗ್ರಾಮದ ಶಾಲೆಯಲ್ಲಿ 25 ಮಕ್ಕಳು ದಾಖಲಾಗಿದ್ದಾರೆ. ಖಾಸಗಿ ಶಾಲೆಗಳ ಮಕ್ಕಳೂ ಈ ಶಾಲೆಗೆ ದಾಖಲಾಗಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT