ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿ ಕೇಂದ್ರಿತ: ಸಚಿವ ಅಶ್ವತ್ಥನಾರಾಯಣ

Last Updated 7 ಅಕ್ಟೋಬರ್ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿದ್ಯಾರ್ಥಿ ಕೇಂದ್ರಿತ. ತಮಗಿಷ್ಟವಾದ ಕೋರ್ಸ್‌ಗಳನ್ನು ಮುಕ್ತವಾಗಿ ಆಯ್ಕೆ ಮಾಡಿಕೊಳ್ಳುವ ಬಹುಆಯ್ಕೆಯ ಮತ್ತು ಬಹುಶಿಸ್ತೀಯ ವ್ಯವಸ್ಥೆ. ಈ ಬಗ್ಗೆ ಗೊಂದಲ ಬೇಡ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ನಡೆದ ‘ಫೋನ್‌ ಇನ್‌’ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‌‘ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ಜತೆಗೆ, ಜ್ಞಾನ ಮತ್ತು ಕೌಶಲ ಆಧಾರಿತ ಶಿಕ್ಷಣ ನೀತಿ ಜಾರಿ ಸದ್ಯದ ಅಗತ್ಯ‘ ಎಂದು ಪ್ರತಿಪಾದಿಸಿದರು. ಆಯ್ದ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು ಇಲ್ಲಿವೆ.

*ಮೇಲ್ನೋಟಕ್ಕೆ ಈ ನೀತಿ ತಳಹದಿ ಇಲ್ಲದೆ ಕಟ್ಟಿದ ಕಟ್ಟಡದಂತಿದೆ. ಏನೆನ್ನುತ್ತೀರಿ

ಶಿವಾನಂದಪ್ಪ, ಶಿವಮೊಗ್ಗ

2015ರಿಂದ ಈ ನೀತಿಯ ಬಗ್ಗೆ ಸಮಾಲೋಚನೆ ನಡೆದಿದೆ. ವಿಷಯವಾರು ತಜ್ಞರು, ವಿಜ್ಞಾನಿಗಳು, ತಂತ್ರಜ್ಞರು, ಭಾಷಾತಜ್ಞರು, ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವವರಿಂದ ಅಭಿಪ್ರಾಯ ಪಡೆಯಲಾಗಿದೆ. ಪ್ರಸಕ್ತ ವರ್ಷ ಪದವಿ ತರಗತಿಗೆ ನೀತಿ ಅನುಷ್ಠಾನಗೊಳ್ಳುತ್ತಿದೆ. ಮುಂದೆ ಪ್ರಾಥಮಿಕ ಹಂತದಿಂದಲೇ ಜಾರಿಗೆ ಬರಲಿದೆ. ಒಂದರ್ಥದಲ್ಲಿ ಈ ನೀತಿ, ಹಳೆಬೇರು ಹೊಸ ಚಿಗುರು.

* ತರಾತುರಿಯಲ್ಲಿ ನೀತಿ ಅನುಷ್ಠಾನದ ಅಗತ್ಯವೇನು?–

ಪ್ರಭಾಕರ ದೊಡ್ಡಮನಿ, ಕಲಬುರಗಿ

ಆತುರದಲ್ಲಿ ಜಾರಿ ಮಾಡಲಾಗಿದೆ ಎಂಬ ಮಾತಿನಲ್ಲಿ ಸತ್ಯಾಂಶವಿಲ್ಲ. ಅಧ್ಯಯನ, ಮಾಹಿತಿ ಸಂಗ್ರಹ, ಚರ್ಚೆ, ಸಂವಾದ, ಟೀಕೆ-ಟಿಪ್ಪಣಿ ಸಹಿತ ಐದೂವರೆ ಲಕ್ಷಕ್ಕೂ ಹೆಚ್ಚು ಸಲಹೆಗಳನ್ನು ಪಡೆದು ನೀತಿ ರೂಪಿಸಲಾಗಿದೆ. ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಬೇಕು ಎನ್ನುವ ಉದ್ದೇಶದಿಂದ ಈ ನೀತಿ ರೂಪಿಸಲಾಗಿದೆ.

* ಪದವಿಯಲ್ಲಿ ವಿಷಯ ಆಯ್ಕೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಇನ್ನೂ ಗೊಂದಲವಿದೆಯಲ್ಲ

ಪ್ರದೀಪ್‌, ಮೈಸೂರು

ಪ್ರಸಕ್ತ ವರ್ಷ ಬಿಎ, ಬಿಎಸ್ಸಿ ಪದವಿ ಅಧ್ಯಯನಕ್ಕೆ ಆಯಾ ಕಾಲೇಜುಗಳಲ್ಲಿ ಲಭ್ಯ ಎರಡು ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಮೂರನೇ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್‌, ಇನ್ನೊಂದು ವಿಷಯ ಮೈನರ್‌ ಅಥವಾ ಎರಡೂ ವಿಷಯಗಳನ್ನು ಮೇಜರ್‌ ಆಗಿ ಆಯ್ಕೆ ಮಾಡಿಕೊಳ್ಳಬಹುದು. ಜೊತೆಗೆ, ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯವನ್ನು, ಪ್ರೋಗ್ರಾಮ್‌ ವಿನ್ಯಾಸಕ್ಕೆ ಅನುಗುಣವಾಗಿ ಮುಕ್ತ ಆಯ್ಕೆಗಳು ಮತ್ತು ಬಹುಶಿಸ್ತೀಯ ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃ ಭಾಷೆಯಲ್ಲದವರಿಗೆ ಕನ್ನಡದ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶವಿದೆ.

* ನೀತಿಯಡಿ ಕಲಿಕೆ ಮತ್ತು ವಿಷಯ ಆಯ್ಕೆ ಹೇಗೆ?

ನೇಸರ, ಶಿವಮೊಗ್ಗ

ಕಲಿಕೆ ಮತ್ತು ವಿಷಯ ಆಯ್ಕೆಯಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ಈ ಹಿಂದಿನಂತೆ, ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ಓದಿದವರು ಪದವಿಯಲ್ಲಿ ಕಲೆ ವಿಷಯ ಆಯ್ಕೆ ಮಾಡಬಹುದು. ಮೊದಲ ಎರಡು ವರ್ಷಗಳ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡದ ಜೊತೆಗೆ ಆಯ್ಕೆಯ ಮತ್ತೊಂದು ಭಾಷೆ ಕಲಿಯಬಹುದು. ಹೊರರಾಜ್ಯದ ಮತ್ತು ಕನ್ನಡವನ್ನೇ ಕಲಿಯದವರು ಮೊದಲ ಎರಡು ವರ್ಷಗಳ ನಾಲ್ಕು ಸೆಮಿಸ್ಟರ್‌ಗಳ ಪೈಕಿ ಒಂದು ಸೆಮಿಸ್ಟರ್‌ನಲ್ಲಿ ವ್ಯಾವಹಾರಿಕ ಕನ್ನಡ ಮತ್ತು ತಮ್ಮ ಇಚ್ಛೆಯ ಮತ್ತೊಂದು ಭಾಷೆ ಕಲಿಯಬಹುದು. ಉಳಿದ ಮೂರು ಸೆಮಿಸ್ಟರ್‌ಗಳಲ್ಲಿ ಯಾವುದೇ ಎರಡು ಭಾಷೆಗಳನ್ನು ಕಲಿಯಬಹುದು.

* ಬಹುಶಿಸ್ತೀಯ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗೆ ಯಾವ ಕೋರ್ಸ್‌ನಲ್ಲಿ ಪದವಿ ಸಿಗುತ್ತದೆ?

ಧನ್ಯಪ್ರಸಾದ್‌, ಮೈಸೂರು

ವಿದ್ಯಾರ್ಥಿ ಆಯ್ಕೆ ಮಾಡಿಕೊಂಡ ಕೋರ್ಸ್‌ನಲ್ಲಿಯೇ ಪದವಿ ಸಿಗುತ್ತದೆ. ಕಲೆ ಆಯ್ಕೆ ಮಾಡಿಕೊಂಡರೆ ಬಿಎ, ವಿಜ್ಞಾನವಾದರೆ ಬಿಎಸ್ಸಿ, ವಾಣಿಜ್ಯ ಆಯ್ಕೆ ಮಾಡಿಕೊಂಡರೆ ಬಿ.ಕಾಂ. ಆಯ್ಕೆ ಮಾಡಿಕೊಂಡ ಕೋರ್ಸ್‌ ವಿಷಯ ಕಲಿಯುವ ಜೊತೆಗೆ, ಇತರ ವಿಷಯಗಳನ್ನು ಆಸಕ್ತಿಗೆ ಅನುಗುಣವಾಗಿ, ಉದ್ಯೋಗಾವಕಾಶದ ಅವಶ್ಯಕತೆಗನುಗುಣವಾಗಿ ಅಭ್ಯಾಸ ಮಾಡುವ ವ್ಯವಸ್ಥೆಯಿದೆ.

* ಬಹು ಶಿಸ್ತೀಯ ಶಿಕ್ಷಣದಲ್ಲಿ ಆಯ್ಕೆ ಮಾಡಿಕೊಳ್ಳುವ ಕೋರ್ಸ್‌ನಲ್ಲಿ ವಿಸ್ತಾರವಾದ ಅಧ್ಯಯನಕ್ಕೆ ಅವಕಾಶ ಇಲ್ಲವಂತೆ ಹೌದೇ?

ರತ್ನಮ್ಮ, ಕೊಪ್ಪಳ

ಇದು ನಿಜವಲ್ಲ. ಆಯ್ಕೆ ಮಾಡಿಕೊಂಡ ಕೋರ್ಸ್‌ನಲ್ಲಿನ ವಿಷಯಗಳನ್ನೇ ಪ್ರಮುಖವಾಗಿ ಅಭ್ಯಾಸ ಮಾಡುವ ಜೊತೆಗೆ ಪ್ರತಿ ಸೆಮಿಸ್ಟರ್‌ನಲ್ಲಿ ಒಂದು ವಿಷಯವನ್ನು ಮಾತ್ರ ತನ್ನದೇ ಕೋರ್ಸ್‌ನಿಂದ ಅಥವಾ ಇನ್ನಾವುದೇ ಕೋರ್ಸ್‌ನಿಂದ ಒಂದು ವಿಷಯ ಆಯ್ಕೆ ಮಾಡಿಕೊಳ್ಳಬಹುದು. ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಂಥ, ಉದ್ಯೋಗಾವಕಾಶ ಹೆಚ್ಚಿಸುವ ಕೌಶಲ ಮತ್ತು ಸಾಮರ್ಥ್ಯ ವೃದ್ಧಿಯ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ.

* ‘ಅಂಗವಿಕಲರ ಹಕ್ಕುಗಳ ಕಾಯ್ದೆ 2016’ರಲ್ಲಿರುವ ಅಂಶಗಳನ್ನೂ ಅಳವಡಿಸಿಕೊಳ್ಳಲಾಗಿದೆಯೇ?

ರಾಮಚಂದ್ರ ಕಾಂಬ್ಳೆ, ಧಾರವಾಡ

ಈ ಕಾಯ್ದೆಯಲ್ಲಿರುವ ಅಂಶಗಳೂ ನೀತಿಯಲ್ಲಿದೆ. ಸಮಾನ ಶಿಕ್ಷಣ ನೀತಿಯಡಿ ಅಂಗವಿಕಲರ ಹಿತವನ್ನೂ ಗಮನಿಸಿ ನೀತಿ ರೂಪಿಸಲಾಗಿದೆ. ಸಾಮಾಜಿಕ ಭದ್ರತೆಯ ಕೌಶಲ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.

* ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲು ಬ್ಯಾಂಕುಗಳು ಹಿಂದೇಟು ಹಾಕುತ್ತಿವೆಯಲ್ಲ

ನವೀನ್‌, ಬೆಂಗಳೂರು

ಶೈಕ್ಷಣಿಕ ಸಾಲ ನೀಡಲು ಬ್ಯಾಂಕುಗಳ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಸ್ಪಷ್ಟ ಸೂಚನೆ ನೀಡುತ್ತೇನೆ.

* ಐಟಿಐ ಕೋರ್ಸ್‌ನ್ನು ಪಿಯುಸಿಗೆ ಸಮಾನವಾಗಿ ಪರಿಗಣಿಸಬಾರದೇಕೆ?

ಶಿವಲಿಂಗಯ್ಯ ಕೊಡಲಿ, ರಾಯಚೂರು

ಐಟಿಐ ಕಲಿತವರು ಡಿಪ್ಲೊಮಾ ಓದಬಹುದು. ಆ ಮೂಲಕ, ಎಂಜಿನಿಯರಿಂಗ್‌ ಕೋರ್ಸ್‌ಗೆ ಸೇರಲು ಅವಕಾಶವಿದೆ. ಐಟಿಐ ಕೋರ್ಸ್‌ನ್ನು ಪಿಯುಸಿಗೆ ಸಮಾನವಾಗಿ ಪರಿಗಣಿಸಲು ಬ್ರಿಡ್ಜ್‌ ಕೋರ್ಸ್‌ ನಡೆಸಲು ಪ್ರಯತ್ನಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT