ಗುರುವಾರ , ಜುಲೈ 7, 2022
23 °C
ಅಡುಗೆ ಅನಿಲ ಸಿಲಿಂಡರ್‌ಗೆ ಹೂವಿನ ಹಾರ

ಕಾಂಗ್ರೆಸ್‌ನಿಂದ 'ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ'; ಜಾಗಟೆ ಬಾರಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ದೇಶಾದಾದ್ಯಂತ 'ಬೆಲೆಯೇರಿಕೆ ಮುಕ್ತ ಭಾರತ ಅಭಿಯಾನ' ಹಮ್ಮಿಕೊಂಡಿದೆ. ಇದರ ಅಂಗವಾಗಿ ನಗರದಲ್ಲಿಯೂ ಗುರುವಾರ ಪ್ರತಿಭಟನೆ ನಡೆಯಿತು. 

ಕೆಪಿಸಿಸಿ ಕಚೇರಿ ಮುಂದೆ ಅಡುಗೆ ಅನಿಲ ಸಿಲಿಂಡರ್‌ಗೆ ಹೂವಿನ ಹಾರ ಹಾಕಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. 

ಸಿಲಿಂಡರ್ ಮತ್ತು ದ್ವಿಚಕ್ರ ವಾಹನಗಳಿಗೆ ಡಿ. ಕೆ. ಶಿವಕುಮಾರ್ ಪೂಜೆ ಸಲ್ಲಿಸಿದರೆ, ಸಿದ್ದರಾಮಯ್ಯ ಜಾಗಟೆ ಬಾರಿಸಿದರು. 

ಇದನ್ನೂ ಓದಿ: 

ಈ ವೇಳೆ ಮಾತನಾಡಿದ ಡಿ.ಕೆ‌. ಶಿವಕುಮಾರ್, 'ಬೆಲೆ ಏರಿಕೆ ಗಗನಕ್ಕೆ ಹೋಗಿದೆ.‌ ಆದಾಯ ಪಾತಾಳ ತಲುಪಿದೆ. ಇವತ್ತಿಗೆ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದೆ. ಹೀಗಾಗಿ ಇವತ್ತೇ ಈ ಪ್ರತಿಭಟನೆ ಮಾಡಿದ್ದೇವೆ. ಬೆಲೆ ಏರಿಕೆ ಮೂಲಕ ಪ್ರತಿದಿನ ಜನ ಸಾಮಾನ್ಯರ ಪಿಕ್ ಪಾಕೆಟ್ ಆಗುತ್ತಿದೆ.‌ ಹೀಗಾಗಿ ಗ್ಯಾಸ್ ಸಿಲಿಂಡರ್, ಬೈಕ್, ಕಾರಿಗೆ ಹಾರ ಹಾಕಿ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದೇವೆ' ಎಂದರು. 

'ಜನರ ನೋವನ್ನು ಬಿಜೆಪಿ ವಿರುದ್ಧ ಮತ ಹಾಕಿ, ಬಿಜೆಪಿ ಸರ್ಕಾರ ಕಿತ್ತೆಸೆಯುವ ಮೂಲಕ ಕಳೆಯಬೇಕು' ಎಂದ ಶಿವಕುಮಾರ್, 'ನೂರು ಬಾರಿ ಚಪ್ಪಲಿಯಲ್ಲಿ ಪಟ ಪಟ ಪಟ ಅಂತ ಹೊಡೆದರೂ ಸಹಿಸಬಹುದು. ಆದರೆ ದುಡ್ಡಿನ ಏಟು ತಿನ್ನಲು ಆಗಲ್ಲ' ಎಂದರು. 

ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಧ್ರುವನಾರಾಯಣ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಭಾಗವಹಿಸಿದ್ದರು. 

ಮನೆ ಮುಂದೆ ಪ್ರತಿಭಟನೆ: ಡಿ.ಕೆ. ಶಿವಕುಮಾರ್ ಅವರು ಸದಾಶಿವನಗರದ ತಮ್ಮ ನಿವಾಸದ ಎದುರು ಅಡುಗೆ ಅನಿಲ ಸಿಲಿಂಡರ್ ಇಟ್ಟು ಹೂವಿನ ಹಾರ ಹಾಕಿ ಸಾಂಕೇತಿಕವಾಗಿ ಪ್ರತಿಭಟಿಸಿದರು. 

ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಎಲ್ಲೆಡೆ ಪ್ರತಿಭಟನೆ  ನಡೆಸುವಂತೆ ಎಐಸಿಸಿ ಸೂಚನೆ ನೀಡಿತ್ತು. ಹೀಗಾಗಿ, ಶಿವಕುಮಾರ್ ಕೂಡಾ ತಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು