ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಕರ್ನಾಟಕ ಶೃಂಗ| 2ನೇ ಹಂತದ ನಗರದಲ್ಲೂ ಉದ್ದಿಮೆ ಸ್ಥಾಪಿಸಿ: ಪ್ರಶಾಂತ್ ಪ್ರಕಾಶ್

Last Updated 19 ಮಾರ್ಚ್ 2023, 21:29 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ತಂತ್ರಜ್ಞಾನದ ತಾಣವಾಗಿ ಬೆಳೆದಿದೆ. ಬರೀ ಬೆಂಗಳೂರಿಗೆ ಸೀಮಿತವಾಗದೇ‌ ರಾಜ್ಯದ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲೂ ಹೊಸ ಕಂಪನಿಗಳು ಸ್ಥಾಪನೆ ಆಗಬೇಕು. ಆಗ ಸಮಗ್ರ ಅಭಿವೃದ್ಧಿ ಕಾಣಬಹುದಾಗಿದೆ ಎಂದು ಕರ್ನಾಟಕ ಸ್ಟಾರ್ಟ್ ಅಪ್ ವಿಷನ್ ಗ್ರೂಪ್‌ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಹೇಳಿದರು.

ಕರ್ನಾಟಕ ತಂತ್ರಜ್ಞಾನ ಕ್ಷೇತ್ರದ ಭವಿಷ್ಯದಲ್ಲಿ ಕೌಶಲದ ಪಾತ್ರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

1980ರ ವೇಳೆಯಲ್ಲಿ ಬೆಂಗಳೂರಿನಲ್ಲಿ ಉದ್ದಿಮೆಗಳು ಆರಂಭವಾದವು. ಉದ್ದಿಮೆದಾರರನ್ನು ಬೆಂಗಳೂರು ಮೂರು ದಶಕದಿಂದ ಸೆಳೆಯುತ್ತಿದೆ. ಉದ್ಯಮಶೀಲತೆಯಲ್ಲೂ ಕನ್ನಡಿಗರು ಮುಂಚೂಣಿಗೆ ಬರಬೇಕು ಎಂದರು.

ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್‌ನಲ್ಲಿಯೇ ವಿದ್ಯಾರ್ಥಿಗಳಿಗೆ ಆವಿಷ್ಕಾರ ಹಾಗೂ ಪ್ರಯೋಗಕ್ಕೆ ಅವಕಾಶ ನೀಡಬೇಕು. ಅವರಿಗೆ ಬಂಡವಾಳ ಹಾಗೂ ಮೂಲಸೌಕರ್ಯವನ್ನೂ ಕಲ್ಪಿಸಬೇಕು.‌ ವಿಷನ್‌ಗಳು ಬದಲಾವಣೆ ಆಗಬೇಕು ಎಂದು ಕರೆ ನೀಡಿದರು.

ದೇಶದ ಯಾವುದೇ ಭಾಗದಲ್ಲಿ ಇಲ್ಲದ ಒಳ್ಳೆಯ ಎಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿವೆ. ಈ ಕಾಲೇಜುಗಳು ಉದ್ಯೋಗ ಆಕಾಂಕ್ಷಿಗಳ ಬದಲು ಉದ್ಯೋಗ ಸೃಷ್ಟಿಕರ್ತರನ್ನು ಹೊರಗೆ ಕಳುಹಿಸಬೇಕು. ಇದು ಎನ್ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ)ಯಿಂದ ಸಾಧ್ಯ. ಇದೀಗ ವಿದ್ಯುತ್‌ ಚಾಲಿತ ವಾಹನಗಳ ಕಾಲವಾಗಿದ್ದು, ಬಹು ಕೌಶಲ ಪಡೆದುಕೊಳ್ಳಬೇಕಿದೆ. ಅದನ್ನು ಎನ್ಇಪಿ ನೀಡಲಿದೆ ಎಂದು ಪ್ರಶಾಂತ್ ನುಡಿದರು.

ಅತಿ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವನ್ನು ಅರಿಯಬೇಕಾದರೆ ಉದ್ಯಮ ಶಿಕ್ಷಣದ ಅಂಗಳಕ್ಕೆ ಬರಬೇಕು. ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆ, ಅದಕ್ಕೆ ಬೇಕಿರುವ ಕೌಶಲವನ್ನೂ ತಿಳಿಸಬೇಕು. ಶಿಕ್ಷಣ ಹಾಗೂ ಉದ್ಯಮ ಒಟ್ಟಾಗಿ ತಮ್ಮ ಕಾರ್ಯ ನಿರ್ವಹಿಸಬೇಕು ಎಂದರು.

ಒನ್ ಬ್ರಿಡ್ಜ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮದನ್ ಪದಕಿ ಮಾತನಾಡಿ, ‘ಗ್ರಾಮೀಣ ಪ್ರದೇಶಕ್ಕೂ ಇಂದು ತಂತ್ರಜ್ಞಾನ ತಲುಪುತ್ತಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಷ್ಟೇ ಗ್ರಾಮೀಣ ವಿದ್ಯಾರ್ಥಿಗಳೂ ಕೌಶಲಯುತರು‌ ಹಾಗೂ ಬುದ್ಧಿವಂತರು ಇದ್ದಾರೆ. ,ಅವರಲ್ಲಿ ಉದ್ಯಮಶೀಲತೆ ಗುಣ ರೂಪಿಸಿ ಅವಕಾಶ ಕಲ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಕಷ್ಟವಿರುವ ಕಾರಣಕ್ಕೆ ಅವರು ಛಲವಂತರೂ ಹೌದು. ಅವಕಾಶ ಲಭಿಸಿದರೆ ಹೊಸ ಆವಿಷ್ಕಾರಗಳು ಬರಲಿವೆ’ ಎಂದು ಪ್ರತಿಪಾದಿಸಿದರು.

ತಂತ್ರಜ್ಞಾನ ಇದೀಗ ವರ್ಷವಲ್ಲ ವಾರಕ್ಕೇ ಬದಲಾಗುತ್ತಿದೆ. ಈ ಬದಲಾವಣೆಯನ್ನು ಶಿಕ್ಷಣದ ಸಂದರ್ಭದಲ್ಲೇ ಅರಿತು ಕೊಳ್ಳಬೇಕು. ಸೂಕ್ತ ಮಾರ್ಗದರ್ಶನ ಅಗತ್ಯವಾಗಿ ಬೇಕಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ವಿನಯ್ ಬಿದರೆ ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದ ಜ್ಞಾನ- ಕೌಶಲವನ್ನು ಒಂದೇ ಸಮಯದಲ್ಲಿ ನೀಡುವುದಾಗಿದೆ. ಇದರಿಂದ ವ್ಯಕ್ತಿಯು ಆರ್ಥಿಕ ಮತ್ತು ಸಾಮಾಜಿಕವಾಗಿ ಆಮೂಲಾಗ್ರ ಬದಲಾವಣೆ ಸಾಧಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

‘ಪ್ರಜಾವಾಣಿ’ಯ ಹಿರಿಯ ವರದಿಗಾರ ವಿಜಯ್ ಜೋಷಿ ಗೋಷ್ಠಿಯನ್ನು ನಿರ್ವಹಿಸಿದರು.

‘ಪಾರದರ್ಶಕ ಆಡಳಿತ, ಪ್ರಗತಿಯ ಹೆಜ್ಜೆ’

‘ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಯಾವುದೇ ನಿರ್ಣಯಗಳು ಅನುಮಾನ ಮೂಡಿಸಲು ಸಾಧ್ಯವೇ ಇಲ್ಲ. ಪಾರದರ್ಶಕ ಆಡಳಿತ ನೀಡಿರುವ ಮೋದಿ ಅವರು ಎಲ್ಲ ವರ್ಗದ ಜತೆ ನೇರವಾಗಿ ಸಂವಾದ ಕೈಗೊಂಡಿದ್ದಾರೆ. ಇದರಿಂದಾಗಿಯೇ ಜನಪರ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಿದೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

‘ಭಾರತ ಆರ್ಥಿಕತೆಯಲ್ಲಿ 2014ರ ಮುನ್ನ 10ನೇ ಸ್ಥಾನದಲ್ಲಿತ್ತು. ಈಗ 5ನೇ ಸ್ಥಾನದಲ್ಲಿದೆ. ಆಸ್ತಿಗಳು, ಮಾನವ ಸಂಪನ್ಮೂಲ ಮತ್ತು ಹಣಕಾಸಿನ ನಿರ್ವಹಣೆಯಗಳನ್ನು ಯಶಸ್ವಿಯಾಗಿ ಕೈಗೊಂಡರೆ ಮಾತ್ರ ಅಭಿವೃದ್ಧಿ ಸಾಧ್ಯ' ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT