ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀಟ್ ವಿರುದ್ಧ ನಿರ್ಣಯ: ಕುಮಾರಸ್ವಾಮಿ 

Last Updated 3 ಮಾರ್ಚ್ 2022, 11:17 IST
ಅಕ್ಷರ ಗಾತ್ರ

ಬೆಂಗಳೂರು: ‘2023ಕ್ಕೆ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಅಧಿವೇಶನದಲ್ಲಿ ನೀಟ್ ವಿರುದ್ಧ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ನೀಟ್ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ‘ನಾವು ನೀಟ್ ವಿರೋಧಿಸುತ್ತೇವೆ. ಮಕ್ಕಳ ಜೀವಕ್ಕೆ ಕುಣಿಕೆ ಬಿಗಿದು ಕಂಡವರ ಜೇಬು ಭರ್ತಿ ಮಾಡುವ ಈ ದಂಧೆ ಬೇಕಿಲ್ಲ. ಅದಕ್ಕೆ ಚರಮಗೀತೆ ಹಾಡುತ್ತೇವೆ’ ಎಂದಿದ್ದಾರೆ.

‘ಪ್ರಶ್ನೆ ಮಾಡಿದರೆ ದ್ರೋಹವೇ? ಧನದಾಹವೇ? ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ಕೊಟ್ಟಿರುವ ಈ ಹಣೆಪಟ್ಟಿಯ ಬಗ್ಗೆ ಏನೂ ಹೇಳಬೇಕೋ ತಿಳಿಯುತ್ತಿಲ್ಲ. ನೀಟ್ ವಿರೋಧಿಸುವವರು ಧನಧಾಹಿಗಳು, ದ್ರೋಹಿಗಳು ಎಂದು ಅವರು ಯಾರನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದನ್ನು ಅವರೇ ತಿಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ನಾನು ಮೆಡಿಕಲ್ ಕಾಲೇಜು ನಡೆಸುತ್ತಿಲ್ಲ. ಎಂಜಿನಿಯರಿಂಗ್ ಕಾಲೇಜನ್ನೂ ನಡೆಸುತ್ತಿಲ್ಲ. ಕೊನೆಪಕ್ಷ ಒಂದು ಸಣ್ಣ ಕೈಗಾರಿಕೆಯೂ ಇಲ್ಲ. ಬಿಡದಿಯ ತೋಟ ಬಿಟ್ಟರೆ ನನ್ನದೂ ಎನ್ನುವಂಥದ್ದು ಏನೂ ಇಲ್ಲ. ಆದರೂ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ದ್ರೋಹಿಗಳು, ಧನಧಾಹಿಗಳು ಎಂದು ನಾಲಿಗೆ ಜಾರಿ, ತಮ್ಮ ಉನ್ನತ ಗುಣವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

‘ಕೇಂದ್ರ ಸಚಿವರೊಬ್ಬರು ನೀಟ್ ಪರೀಕ್ಷೆ ಪಾಸ್ ಮಾಡಲಾಗದ ವಿಧ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಾರೆ ಎಂದು ಆ ಮಕ್ಕಳ ಸ್ವಾಭಿಮಾನವನ್ನು ಅಪಮಾನಿಸಿದ್ದರೆ, ಉನ್ನತ ಶಿಕ್ಷಣ ಸಚಿವ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದ್ರೋಹದ ಹಣೆಪಟ್ಟಿ ಕಟ್ಟಿ ದೊಡ್ಡತನ ಮೆರೆದಿದ್ದಾರೆ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿಲ್ಲವೇ? ಲಕ್ಷ ಲಕ್ಷ ಕಿತ್ತು ಪೋಷಕರ ರಕ್ತ ಹೀರುವ ಟ್ಯೂಷನ್ ಸಂಸ್ಥೆಗಳು ಸರ್ಕಾರ ಕಣ್ಣಿಗೆ ಕಾಣುತ್ತಿಲ್ಲವೇ? ನೀಟ್ ಸುಳಿಗೆ ಸಿಕ್ಕಿ ಜೀವ ಕಳೆದುಕೊಂಡ ಮಕ್ಕಳ ಅತ್ಮರೋಧನೆ ಕೇಳುತ್ತಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಇದೆಲ್ಲವೂ ಸರ್ಕಾರಗಳ ಕಣ್ಣಿಗೆ ಕಾಣುತ್ತಿಲ್ಲ. ವಿದ್ಯಾರ್ಥಿಗಳ ಆರ್ತನಾದ ಕೇಳುತ್ತಿಲ್ಲ ಎಂದರೆ ಸಚಿವರು ಮತ್ತು ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಭಾವಿಸಬೇಕಾಗುತ್ತದೆ. #ನೀಟ್_ನಿಲ್ಲಲಿ #StopNEET #SaveKAStudents ಎಂಬ ಹ್ಯಾಷ್‌ಟ್ಯಾಗ್ಸ್‌ ಉಲ್ಲೇಖಿಸಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT