ಶನಿವಾರ, ನವೆಂಬರ್ 28, 2020
24 °C
ಸರ್ಕಾರೇತರ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೃಢ

ಸೋಂಕಿತರಿಗೂ ನೆಗೆಟಿವ್ ವರದಿ: ಸರ್ಕಾರೇತರ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೃಢ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವ ಜತೆಗೆ ಶೀಘ್ರವಾಗಿ ಫಲಿತಾಂಶ ಒದಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆ್ಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ, ಈ ಮಾದರಿಯ ಪರೀಕ್ಷೆಯಲ್ಲಿ ಸೋಂಕಿತರಿಗೂ ಉದ್ದೇಶಪೂರ್ವಕವಾಗಿ ನೆಗೆಟಿವ್ ಫಲಿತಾಂಶದ ವರದಿ ನೀಡಲಾಗುತ್ತಿದೆ ಎನ್ನುವುದು ತಜ್ಞರು ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಸರ್ಕಾರೇತರ ಸಂಸ್ಥೆಯಾದ ಪ್ರಾಕ್ಸಿಮಾ ‘ಜೀವನ್ ರಕ್ಷಾ’ ಯೋಜನೆ ಯಡಿ ಕೋವಿಡ್ ಪರೀಕ್ಷೆಗಳ ಬಗ್ಗೆ ಅಧ್ಯಯನ ನಡೆಸಿ, ತಜ್ಞರ ನೆರವಿನಿಂದ ವಿಶ್ಲೇಷಿಸಿದೆ. ಅದರ ಅನುಸಾರ ಆ್ಯಂಟಿ ಜೆನ್‌ ಪರೀಕ್ಷೆಯಲ್ಲಿ ನೆಗೆಟಿನ್ ಫಲಿತಾಂಶ ಪಡೆದ ಹಲವರಿಗೆ ಸೋಂಕು ಲಕ್ಷಣಗಳು ಇಲ್ಲದಿದ್ದರೂ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಶೇ 40 ರಷ್ಟು ಪ್ರಕರಣಗಳಲ್ಲಿ ಆ್ಯಂಟಿಜೆನ್ ಪರೀಕ್ಷೆಗಳು ತಪ್ಪು ಫಲಿತಾಂಶ ನೀಡಲಿವೆ ಎಂಬುದನ್ನು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಅಧ್ಯಯನಕ್ಕೆ ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನವು ತಾಂತ್ರಿಕ ಸಹಕಾರ ನೀಡಿದೆ.

ಆರ್‌ಟಿ–ಪಿಸಿಆರ್ ಪರೀಕ್ಷೆ ಶಿಫಾರಸು: ರಾಜ್ಯದ 30 ಜಿಲ್ಲೆಗಳಿಂದ 62,188 ಆ್ಯಂಟಿಜೆನ್ ಪರೀಕ್ಷೆಗಳನ್ನು ವಿಶ್ಲೇಷಿಸಿದ್ದು, ಇದರಲ್ಲಿ 9,813 ಮಂದಿ ಸೋಂಕಿತರಾಗಿರುವುದು ಖಚಿತಪಟ್ಟಿದೆ. 822 ಮಾದರಿಗಳನ್ನು ಆರ್‌ಟಿ–ಪಿಸಿಆರ್ ಪರೀಕ್ಷೆಗಳಿಗೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ 312 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಹೀಗಾಗಿ ಶೇ 100ರಷ್ಟು ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸುವಂತೆ ಅಥವಾ ಆ್ಯಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರಿಗೆ ಎರಡನೇ ಬಾರಿ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. 

‘ಸೋಂಕಿನ ಲಕ್ಷಣಗಳು ಹೊಂದಿರುವವರಿಗೆ ನೆಗೆಟಿವ್ ವರದಿ ಬಂದಾಗ ಮಾತ್ರ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆದರೆ, ಹಲವು ಪ್ರಕರಣಗಳಲ್ಲಿ ಸೋಂಕು ಲಕ್ಷಣಗಳು ಇರದವರಿಗೆ ಎರಡನೇ ಬಾರಿ ನಡೆಸಲಾದ ಪರೀಕ್ಷೆಯಲ್ಲಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಆಸ್ಪತ್ರೆಯಿಂದ ಮನೆಗೆ ಕಳುಹಿಸುವಾಗ ಕೂಡ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು’ ಎಂದು ಜೀವನ್ ರಕ್ಷಾ ಯೋಜನೆಯ ಸಂಚಾಲಕ ಮೈಸೂರು ಸಂಜೀವ್ ತಿಳಿಸಿದರು.

ಮರು ಪರೀಕ್ಷೆಗಳಿಂದ ಸಂಖ್ಯೆ ಹೆಚ್ಚಳ 

ರಾಜ್ಯದಲ್ಲಿ ಜುಲೈ ತಿಂಗಳ ಅಂತ್ಯಕ್ಕೆ 30 ಸಾವಿರದ ಆಸು‍ಪಾಸಿನಲ್ಲಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆ ಈಗ ಲಕ್ಷದ ಗಡಿ ದಾಟಿದೆ. ಇದರಿಂದಾಗಿ ಕೆಲ ದಿನಗಳಿಂದ ಸೋಂಕು ದೃಢಪ್ರಮಾಣ ಶೇ 5ಕ್ಕಿಂತ ಕಡಿಮೆ ಆಗಿದೆ. ಆದರೆ, ಮರು ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಪರಿಣಾಮ ಒಟ್ಟು ಕೋವಿಡ್ ಪರೀಕ್ಷೆಗಳ ಸಂಖ್ಯೆ ಏರಿಕೆ ಕಂಡಿದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

‘ಅಕ್ಟೋಬರ್ ತಿಂಗಳಲ್ಲಿ ಒಂದು ಲಕ್ಷ ಪರೀಕ್ಷೆಗಳಲ್ಲಿ ಪ್ರತಿನಿತ್ಯ ಸರಾಸರಿ 8 ಸಾವಿರ ಪ್ರಕರಣಗಳು ದೃಢಪಟ್ಟಿವೆ. 50 ಸಾವಿರ ಆ್ಯಂಟಿಜೆನ್ ಹಾಗೂ 50 ಸಾವಿರ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಿದಲ್ಲಿ ತಪ್ಪು ವರದಿ, ಮರು ಪರೀಕ್ಷೆಗಳ ಕಾರಣ 24 ಸಾವಿರ ಮಾದರಿಗಳನ್ನು ಮರು ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಇದರಿಂದಾಗಿ ಒಟ್ಟು ಪರೀಕ್ಷೆಗಳ ಸಂಖ್ಯೆ 1.24 ಲಕ್ಷಕ್ಕೆ ಏರಿಕೆಯಾಗಲಿದೆ’ ಎಂದು ಮೈಸೂರು ಸಂಜೀವ್ ವಿವರಿಸಿದರು.

 

ಅಂಕಿ–ಅಂಶಗಳು

160: ಕೋವಿಡ್ ಪರೀಕ್ಷಾ ಪ್ರಯೋಗಾಲಯಗಳು

54.89 ಲಕ್ಷ: ಆರ್‌ಟಿ–ಪಿಸಿಆರ್ ಪರೀಕ್ಷೆಗಳು

27.99 ಲಕ್ಷ: ಆ್ಯಂಟಿಜೆನ್ ಪರೀಕ್ಷೆಗಳು

***

ಸೋಂಕಿನ ಲಕ್ಷಣಗಳು ಇರುವವರು ಹಾಗೂ ಸೋಂಕಿತರ ಸಂಪರ್ಕಿತರಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನೇ ನಡೆಸಬೇಕಾಗುತ್ತದೆ

ಡಾ.ಸಿ.ಎನ್. ಮಂಜುನಾಥ್ಕೋ, ವಿಡ್ ಪರೀಕ್ಷೆಗಳ ನೋಡಲ್ ಅಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು