ಶನಿವಾರ, ಮೇ 15, 2021
23 °C

ಕೊರೊನಾ ಸಂಕಷ್ಟ | ರಾತ್ರಿ ಕರ್ಫ್ಯೂ, ವಾರಾಂತ್ಯ ಬಂದ್‌: ರಾಜ್ಯ ಸರ್ಕಾರ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಿಯಂತ್ರಣ ಕ್ಕಾಗಿ ರಾಜ್ಯದಾದ್ಯಂತ ರಾತ್ರಿ 9 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಬುಧವಾರದಿಂದ (ಏ.21) ಮೇ 4 ರ ವರೆಗೆ ಜಾರಿಯಲ್ಲಿ ಇರಲಿದೆ.

ಈ ಅವಧಿಯಲ್ಲಿ ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರಗಳಂದು ಇಡೀ ದಿನ ಕರ್ಫ್ಯೂ ಇರುತ್ತದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಪಕ್ಷಗಳ ನಾಯಕರು, ತಾಂತ್ರಿಕ ಸಮಿತಿ ತಜ್ಞರು ಮತ್ತು ಸಚಿವರ ಜತೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ರಾತ್ರಿ ಕರ್ಫ್ಯೂ: ಪ್ರತಿ ದಿನ ರಾತ್ರಿ 9 ರಿಂದ ಮಾರನೆ ದಿನದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಇರುತ್ತದೆ. ಈ ಸಂದರ್ಭದಲ್ಲಿ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ಇರುತ್ತದೆ.

ಏನೆಲ್ಲ ಬಂದ್‌

l ಶಾಲೆಗಳು, ಕಾಲೇಜುಗಳು, ಕೋಚಿಂಗ್ ಕೇಂದ್ರಗಳು. (ಆನ್‌ಲೈನ್‌, ದೂರಶಿಕ್ಷಣ  ಮುಂದುವರೆಸಬಹುದು)

l ಸಿನಿಮಾ ಹಾಲ್‌ಗಳು, ಶಾಪಿಂಗ್‌ ಮಾಲ್‌, ಜಿಮ್ನಾಷಿಯಂ, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಕಾಂಪ್ಲೆಕ್ಸ್‌ಗಳು, ಸ್ಟೇಡಿಯಂ, ಈಜುಕೊಳ, ಮನರಂಜನಾ ಅಮ್ಯೂಸ್‌ಮೆಂಟ್‌ ಪಾರ್ಕ್‌, ಬಾರ್‌, ಆಡಿಟೋರಿಯಂಗಳು ಮತ್ತಿತರ ಸಮಾವೇಶದ ತಾಣಗಳು

l ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾವೇಶಗಳು

l ಆಟದ ಮೈದಾನದಲ್ಲಿ ಯಾವುದೇ ಕ್ರೀಡಾ ಕೂಟಗಳು ಇದ್ದರೆ ಪ್ರೇಕ್ಷಕರಿಗೆ ಅವಕಾಶ ಇಲ್ಲ. ಆದರೆ, ಕ್ರೀಡಾಳುಗಳ ತರಬೇತಿಗೆ ಅವಕಾಶ ಇದೆ

l ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ, ಪ್ರಾರ್ಥನಾ ಮಂದಿರಗಳಿಗೆ ಭಕ್ತರಿಗೆ ಅವಕಾಶ ಇಲ್ಲ. ಆದರೆ, ಪೂಜಾ ಕೈಂಕರ್ಯ ನಡೆಸಲು ಅರ್ಚಕರಿಗೆ ಅವಕಾಶ ಇದೆ. ಆಯಾ ಧರ್ಮಗಳ ಧಾರ್ಮಿಕ ವಿಧಿ–ವಿಧಾನ ನಡೆಸಲು ಅವಕಾಶ ಇದೆ.

lಹೋಟೆಲ್‌ ಮತ್ತು ರೆಸ್ಟೊರೆಂಟ್‌ ಗಳಲ್ಲಿ ಪಾರ್ಸೆಲ್‌ ಮಾತ್ರ ಒಯ್ಯಲು ಅವಕಾಶ ಇದೆ.

lಮದುವೆ ಸಮಾರಂಭಕ್ಕೆ 50ಕ್ಕೆ ಜನರಿಗೆ ಮಿತಿ. ಶವ ಸಂಸ್ಕಾರ, ಅಂತಿಮ ದರ್ಶನಕ್ಕೆ 20 ಜನರಿಗಷ್ಟೇ ಅವಕಾಶ.

ನಿರ್ಮಾಣ ಚಟುವಟಿಕೆಗಳು

lಎಲ್ಲ ರೀತಿಯ ನಿರ್ಮಾಣ ಚಟುವ
ಟಿಕೆಗಳು, ರಿಪೇರಿ ಚಟುವಟಿಕೆಗಳಿಗೆ ಅವಕಾಶ ಇದೆ. ಮುಂಗಾರು ಪೂರ್ವ ಕಾಮಗಾರಿಗಳನ್ನು ನಡೆಸಬಹುದು. ಆದರೆ, ಇವುಗಳಿಗೆ ಅನುಮತಿ ಪಡೆದು ಕೋವಿಡ್‌ ನಿಯಮ ಪಾಲಿಸಿ ಚಟುವಟಿಕೆ ನಡೆಸಬಹುದು.

ಕೈಗಾರಿಕೆಗಳಿಗೆ ಅವಕಾಶ

lಎಲ್ಲ ಕೈಗಾರಿಕೆಗಳು, ಉತ್ಪಾದನಾ ಘಟಕಗಳನ್ನು ಕೋವಿಡ್‌ ನಿಯಮ ಪಾಲಿಸಿ ನಡೆಸಬಹುದು. ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಸಾಗಣೆ ಮಾಡಲು ಕೆಲಸದ ಸ್ಥಳದ ಗುರುತಿನ ಚೀಟಿ ಇರುವುದು ಅಗತ್ಯ.

ವಾಣಿಜ್ಯ ಚಟುವಟಿಕೆಗಳು

lಕಿರಾಣಿ ಅಂಗಡಿ, ನ್ಯಾಯ ಬೆಲೆ ಅಂಗಡಿ, ಆಹಾರ ಪದಾರ್ಥಗಳು, ಹಣ್ಣು, ತರಕಾರಿ, ಡೇರಿ, ಹಾಲು ಮತ್ತು ಇತರ ಉತ್ಪನ್ನಗಳು, ಮೀನು– ಮಾಂಸ, ಪ್ರಾಣಿಗಳ ಆಹಾರಗಳ ಮಾರಾಟಕ್ಕೆ ಅವಕಾಶ ಇದೆ.

lಹೂವು, ಹಣ್ಣು, ತರಕಾರಿ ಸಗಟು ಮಾರುಕಟ್ಟೆಗಳನ್ನು ಏ.23 ರ ಬಳಿಕ ಮುಕ್ತ ಪ್ರದೇಶ ಅಥವಾ ಮೈದಾನಗಳಿಗೆ ಸ್ಥಳಾಂತರ.

lಲಾಡ್ಜ್‌ ಮತ್ತು ಹೋಟೆಲ್‌ಗಳಲ್ಲಿ ಉಳಿದುಕೊಂಡ ಅತಿಥಿಗಳಿಗೆ ಆಹಾರ ಪೂರೈಕೆ ಮಾಡಬಹುದು

lಸಲೂನು, ಬ್ಯೂಟಿ ಪಾರ್ಲರ್‌ಗಳು ಕೋವಿಡ್ ನಿಯಮ ಪಾಲಿಸಿ ಕಾರ್ಯಾಚರಣೆ ನಡೆಸಬಹುದು.

lಬಸ್‌ ಮತ್ತು ರೈಲು ಓಡಾಟಕ್ಕೆ ಅವಕಾಶ. ಖಾಸಗಿ ವಾಹನಗಳಲ್ಲಿ ಅನಗತ್ಯ ಓಡಾಡುವುದಕ್ಕೆ ನಿರ್ಬಂಧ.

lಪೆಟ್ರೋಲ್‌ ಬಂಕ್‌, ಗ್ಯಾಸ್‌ ಸೇವೆಗಳಿಗೆ ಅವಕಾಶ.

lಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದಎಲ್ಲ ಚಟುವಟಿಕೆ ನಡೆಬಹುದು. ಆಸ್ಪತ್ರೆ, ಪ್ರಯೋಗಾಲಯ ಇತ್ಯಾದಿ ತೆರೆಯಬಹುದು.

ಸರ್ಕಾರಿ ಮತ್ತು ಇತರ ಸಿಬ್ಬಂದಿಗಳು

lಐಟಿ–ಬಿಟಿ ಮತ್ತು ಖಾಸಗಿ ಕಂಪನಿಗಳ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಲು ಅವಕಾಶ

lಸರ್ಕಾರಿ ಕಚೇರಿಗಳಲ್ಲಿ ಶೇ 50ರಷ್ಟು ಕಚೇರಿಯಿಂದ ಉಳಿದ ಶೇ 50 ರಷ್ಟು ಸಿಬ್ಬಂದಿಯನ್ನು ಕೋವಿಡ್‌ ಕಾರ್ಯದಲ್ಲಿ ತೊಡಗಿಸಿಕೊಳ್ಳ ಲಾಗುವುದು.

 

ರಾಜ್ಯಪಾಲರ ಸಭೆಗೆ ಈಶ್ವರಪ್ಪ ಅಚ್ಚರಿ

ರಾಜ್ಯದಲ್ಲಿ ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿ ಇರುವಾಗ ರಾಜ್ಯಪಾಲರು ಕೋವಿಡ್‌ ವಿಚಾರ ಚರ್ಚಿಸಲು ಏಕೆ ಸಭೆ ಕರೆದಿದ್ದಾರೆ ಗೊತ್ತಿಲ್ಲ. ಆದರೆ, ಅವರ ನಡೆ ಹೊಸ ವ್ಯವಸ್ಥೆಗೆ ನಾಂದಿ ಹಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಹೇಳಿದರು.

‘ರಾಜ್ಯಪಾಲರು ಸಭೆ ಕರೆಯಬಾರದು ಎಂಬ ನಿಯಮ ಇಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಹೆಚ್ಚಾಗುತ್ತಿರುವ ಕಾರಣ ಜನರ ಸುರಕ್ಷತೆ ದೃಷ್ಟಿಯಿಂದ ರಾಜ್ಯಪಾಲರು ಸಭೆ ಕರೆದಿರಬಹುದು. ಅವರು ತೆಗೆದುಕೊಳ್ಳುವ ನಿರ್ಧಾರ ರಾಜ್ಯಕ್ಕೆ ಒಳಿತು ಮಾಡುತ್ತದೆ ಎಂಬ ನಂಬಿಕೆ ಇದೆ’ ಎಂದರು.

ಅತಿ ಕಠಿಣ ಕ್ರಮ ತೆಗೆದುಕೊಳ್ಳಿ:ರಾಜ್ಯಪಾಲ

‘ನಮಗೆ ಬೇಕಿರುವುದು ಆರೋಗ್ಯಪೂರ್ಣ ಕರ್ನಾಟಕ. ಆದ್ದರಿಂದ ಜನರ ಜೀವ ಮತ್ತು ಆರೋಗ್ಯ ಉಳಿಸಲು ಕಠಿಣ ಕ್ರಮ ತೆಗೆದುಕೊಳ್ಳಿ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸಲಹೆ ನೀಡಿದರು.

‘ಇದಕ್ಕಾಗಿ ಅಗತ್ಯವಿದ್ದರೆ ಲಾಕ್‌ಡೌನ್‌ ಸೇರಿದಂತೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಿ. ಜನ ಹಸಿವಿನಿಂದ ಸಾಯುವುದಿಲ್ಲ ಎಂಬ ವಿಶ್ವಾಸವಿದೆ. ಕಾರ್ಮಿಕರು, ಬಡವರ ಬಗ್ಗೆ ಕಾಳಜಿ ವಹಿಸಿ. ಲಾಕ್‌ಡೌನ್‌ ಆದರೆ ಜನ ಭಯ ಪಡಬಾರದು. ಜನ ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಸೂಕ್ತ ನಿರ್ಣಯ ಕೈಗೊಳ್ಳಬೇಕು’ ಎಂದರು.

***

ಲೋಪಗಳ ಬಗ್ಗೆಯೇ ಚರ್ಚೆ ಮಾಡುವುದಕ್ಕಿಂತ ಜನರ ಜೀವ ಉಳಿಸುವುದು ಮುಖ್ಯ. ಯಾರ ಮರ್ಜಿಗೂ ಒಳಗಾಗದೇ ಲಾಕ್‌ಡೌನ್‌ ಮಾಡಿ

- ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ರಾಜ್ಯಪಾಲರು ಸಭೆ ಕರೆದಿರುವುದು ಸಂವಿಧಾನ ಬಾಹಿರ, ತಾಂತ್ರಿಕ ಸಲಹಾ ಸಮಿತಿ ವರದಿಯನ್ನು ಚಾಚೂ ತಪ್ಪದೆ ಜಾರಿ ಮಾಡಿ

- ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ, ವಿಧಾನಸಭೆ

ಸರ್ಕಾರ ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ಕಷ್ಟ ಎನಿಸಿದರೂ ಅನುಸರಿಸಿಕೊಂಡು ಹೋಗಬೇಕು. ಎಲ್ಲರೂ ಸಹಕರಿಸಬೇಕು 

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು