ಭಾನುವಾರ, ಜನವರಿ 17, 2021
20 °C

ರಾಜ್ಯದಲ್ಲಿ ಬ್ರಿಟನ್ ವೈರಾಣು: ಮತ್ತೆ ಮೂವರಲ್ಲಿ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪರೀಕ್ಷೆಗೆ ಗಂಟಲು ದ್ರವ ಮಾದರಿ ಸಂಗ್ರಹ–ಸಾಂದರ್ಭಿಕ ಚಿತ್ರ

ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರಲ್ಲಿ ಮತ್ತೆ ಮೂವರಿಗೆ ರೂಪಾಂತರಗೊಂಡ ಕೊರೊನಾ ವೈರಾಣು ಇರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಹೊಸ ಮಾದರಿಯ ಕೋವಿಡ್ ಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನ ವಸಂತಪುರದಲ್ಲಿ ಇಬ್ಬರು ಹಾಗೂ ಜೆ.ಪಿ. ನಗರದಲ್ಲಿ ಒಬ್ಬರಲ್ಲಿ ಹೊಸ ಮಾದರಿಯ ವೈರಾಣು ಕಾಣಿಸಿಕೊಂಡಿದೆ. ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದ ಇವರು, ಕೋವಿಡ್ ಪೀಡಿತರಾಗಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಮಾದರಿಗಳನ್ನು ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಪರೀಕ್ಷೆಯ ವರದಿಯಲ್ಲಿ ರೂಪಾಂತರ ವೈರಾಣು ಇರುವುದು ದೃಢಪಟ್ಟಿದೆ. ಅವರೊಂದಿಗೆ ಸಂಪರ್ಕ ಹೊಂದಿರುವವರನ್ನು ಬಿಬಿಎಂಪಿ ಸಿಬ್ಬಂದಿ ಪತ್ತೆ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ರೂಪಾಂತರಗೊಂಡ ವೈರಾಣು ಹೊಂದಿರುವವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಕಳೆದ ಮಂಗಳವಾರ ರಾಜಾಜಿನಗರದಲ್ಲಿ ಎರಡು ಹಾಗೂ ಆರ್‌.ಆರ್. ನಗರದಲ್ಲಿ ಒಂದು ಪ್ರಕರಣ ವರದಿಯಾಗಿತ್ತು. ಶಿವಮೊಗ್ಗದಲ್ಲಿ ಒಂದೇ ಕುಟಂಬದ ನಾಲ್ವರಲ್ಲಿ ಹೊಸ ಮಾದರಿಯ ವೈರಾಣು ಕಾಣಿಸಿಕೊಂಡಿದೆ. ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ರೂಪಾಂತರಗೊಂಡ ಕೊರೊನಾ ವೈರಾಣು ಹೊಂದಿರುವವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ ಕೂಡ 10 ಮಂದಿ ಹೊಸ ಮಾದರಿಯ ವೈರಾಣು ಹೊಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು