ಶಂಕಿತ ಉಗ್ರನ ವಶಕ್ಕೆ ಪಡೆಯಲು ಎನ್‌ಐಎ ಸಿದ್ಧತೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತ ಶಂಕಿತ ಉಗ್ರ ಶಾರೀಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಸಿದ್ಧತೆ ನಡೆಸಿದೆ.
ಕಳೆದ ನವೆಂಬರ್‌ನಲ್ಲಿ ಈ ಸ್ಫೋಟ ಪ್ರಕರಣ ನಡೆದಿತ್ತು. ಆಟೊದಲ್ಲಿ ಶಂಕಿತ ಉಗ್ರ ತೆರಳುತ್ತಿದ್ದಾಗ ಬಾಂಬ್ ಸ್ಫೋಟಗೊಂಡು ಆತ ಹಾಗೂ ಆಟೊ ಚಾಲಕ ಗಾಯಗೊಂಡಿದ್ದರು.
ಪ್ರಕರಣವು ಎನ್‌ಐಎಗೆ ಹಸ್ತಾಂತರಗೊಂಡ ಬಳಿಕ ಮಂಗಳೂರಿಗೆ ತೆರಳಿದ್ದ ಅಧಿಕಾರಿಗಳು ಘಟನೆ ನಡೆದ ಸ್ಥಳ ಪರಿಶೀಲನೆ ಹಾಗೂ ಅಲ್ಲಿನ ಪೊಲೀಸರಿಂದ ಮಾಹಿತಿ ಕಲೆ ಹಾಕಿದ್ದರು. ಆದರೆ, ಶಂಕಿತನ ವಿಚಾರಣೆ ಸಾಧ್ಯವಾಗಿರಲಿಲ್ಲ.
ಶೇ 40ರಷ್ಟು ಸುಟ್ಟ ಗಾಯಗೊಂಡಿದ್ದ ಶಾರೀಕ್‌ಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿತ್ತು. ಅಲ್ಲಿಂದ ಎನ್‌ಐಎ ಅಧಿಕಾರಿಗಳು ಶಂಕಿತನನ್ನು ವಶಕ್ಕೆ ಪಡೆದು, ಬೆಂಗಳೂರಿಗೆ ಕರೆ ತಂದಿದ್ದರು. ಆತ ಸಂಪೂರ್ಣ ಚೇತರಿಕೆ ಕಾಣದಿರುವ ಪರಿಣಾಮ ನಗರದ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯ ವಿಭಾಗಕ್ಕೆ ಶಂಕಿತನನ್ನು ದಾಖಲಿಸಲಾಗಿತ್ತು.
‘ಶಂಕಿತ ಉಗ್ರ ಚೇತರಿಸಿಕೊಂಡಿದ್ದಾನೆ. ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಶಾರೀಕ್ ಅಜ್ಜಿ ಮನೆಯಿದ್ದು, ಜಾರಿ ನಿರ್ದೇಶನಾಲಯದ (ಇ.ಡಿ)ದ ಅಧಿಕಾರಿಗಳು ಅಲ್ಲಿ ಶೋಧ ನಡೆಸಿದ್ದರು. ಆಸ್ತಿ, ಆರ್ಥಿಕ ವಹಿವಾಟಿನ ದಾಖಲೆಗಳನ್ನೂ ಪರಿಶೀಲಿಸಿದ್ದರು. ಆ ಎಲ್ಲ ಮಾಹಿತಿಯನ್ನು ಎನ್‌ಐಎ ಪಡೆದುಕೊಂಡಿದೆ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.