ಬೆಂಗಳೂರು: ಕೋವಿಡ್ಲಸಿಕೆವಿತರಣೆಯಲ್ಲಿ ರಾಜ್ಯದ 9 ಜಿಲ್ಲೆಗಳು ಹಿಂದೆ ಬಿದ್ದಿದ್ದು, ಲಸಿಕಾ ಅಭಿಯಾನ ಪ್ರಾರಂಭವಾಗಿ ಏಳೂವರೆ ತಿಂಗಳು ಕಳೆದರೂ ಶೇ 50ರಷ್ಟ ಗುರಿ ಸಾಧನೆ ಸಾಕಾರವಾಗಿಲ್ಲ.
ಕಳೆದ ಜ.16ರಿಂದ ರಾಜ್ಯದಲ್ಲಿ ಲಸಿಕಾ ಅಭಿಯಾನ ಪ್ರಾರಂಭವಾಗಿದೆ.ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ಎರಡು ವಾರಗಳಿಂದ ಲಸಿಕೆ ವಿತರಣೆಗೆ ವೇಗ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿ ಬುಧವಾರ 15 ಲಕ್ಷ ಹಾಗೂ ಉಳಿದ ದಿನ 6 ಲಕ್ಷ ಡೋಸ್‌ಗಳನ್ನು ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಕಳೆದ ಒಂದು ತಿಂಗಳಿನಿಂದ ಪ್ರತಿನಿತ್ಯ ಸರಾಸರಿ 3 ಲಕ್ಷ ಡೋಸ್‌ಗಳನ್ನು ವಿತರಿಸಲಾಗಿದೆ. ಇಷ್ಟಾಗಿಯೂ ಕಲಬುರ್ಗಿ, ಹಾವೇರಿ ಸೇರಿದಂತೆ ಕೆಲವೊಂದು ಜಿಲ್ಲೆಗಳು ಲಸಿಕೆ ವಿತರಣೆಯಲ್ಲಿ ಹಿಂದುಳಿದಿವೆ.
ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಈವರೆಗೆ ಶೇ 50.01ರಷ್ಟು ಮಂದಿ ಮಾತ್ರ ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಅವರಲ್ಲಿ ಶೇ 16.2ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪೂರ್ಣಗೊಳಿಸಿದ್ದಾರೆ. ಈವರೆಗೆ4.38 ಕೋಟಿ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.3.30 ಕೋಟಿ ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರೇ,1.07 ಕೋಟಿಮಂದಿ ಎರಡನೆ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
21 ಜಿಲ್ಲೆಗಳಲ್ಲಿ ಶೇ 50ಕ್ಕೂ ಅಧಿಕ:ಕಲಬುರ್ಗಿಯಲ್ಲಿ ಶೇ 36.53, ರಾಯಚೂರಿನಲ್ಲಿ ಶೇ 38.60, ಯಾದಗಿರಿಯಲ್ಲಿ ಶೇ 41.74, ವಿಜಯಪುರದಲ್ಲಿ ಶೇ 43.24, ಬಳ್ಳಾರಿಯಲ್ಲಿ ಶೇ 44.95, ಹಾವೇರಿಯಲ್ಲಿ ಶೇ 46.45, ಕೊಪ್ಪಳದಲ್ಲಿ ಶೇ 47.79, ಬಾಗಲಕೋಟೆಯಲ್ಲಿ ಶೇ 48.47 ಹಾಗೂ ಬೀದರ್‌ನಲ್ಲಿ ಶೇ 48.62ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಉಳಿದ 21 ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಅಧಿಕ ಸಾಧನೆಯಾಗಿದೆ.
‘ವರ್ಷಾಂತ್ಯದೊಳಗೆ ಎಲ್ಲರಿಗೂ ಲಸಿಕೆ ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದ್ದು, ಲಸಿಕಾ ಮೇಳವನ್ನು ನಡೆಸಲಾಗುತ್ತಿದೆ. 5 ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಪ್ರತಿನಿತ್ಯ ಲಸಿಕೆಯನ್ನು ನೀಡಲಾಗುತ್ತಿದೆ. ಜನಸಂಖ್ಯೆಯ ಆಧಾರದಲ್ಲಿ ಜಿಲ್ಲೆಗಳಿಗೆ ಲಸಿಕೆಯನ್ನು ಹಂಚಿಕೆ ಮಾಡಲಾಗುತ್ತಿದೆ. ಎರಡನೇ ಡೋಸ್‌ಗೆ ಆದ್ಯತೆ ನೀಡಲಾಗಿದ್ದು, ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಬಗ್ಗೆ ಜಾಗೃತಿ ಕೊರತೆಯಿದೆ’ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
4 ಜಿಲ್ಲೆಗಳಲ್ಲಿ ಉತ್ತಮ ಸಾಧನೆ
ಈವರೆಗೆಲಸಿಕೆವಿತರಣೆಯನ್ನು ಆಧರಿಸಿಕೋವಿಡ್ವಾರ್ ರೂಮ್ ವಿಶ್ಲೇಷಣೆ ಮಾಡಿದ್ದು, ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ಶೇ 70ಕ್ಕೂ ಅಧಿಕ ಸಾಧನೆಯಾಗಿದೆ. ಉಡುಪಿಯಲ್ಲಿ ಶೇ 78.72, ಕೊಡಗಿನಲ್ಲಿ ಶೇ 77.38, ಬೆಂಗಳೂರಿನಲ್ಲಿ ಶೇ 75.92 ಹಾಗೂ ರಾಮನಗರದಲ್ಲಿ ಶೇ 72.99ರಷ್ಟು ಮಂದಿ ಲಸಿಕೆಪಡೆದುಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.