ಸೋಮವಾರ, ಮಾರ್ಚ್ 1, 2021
19 °C
ಕುಲಪತಿಗಳಿಗೆ ಗಡುವು ವಿಧಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ

’ಎಲ್ಲ ವಿವಿಗಳಿಗೆ ಎನ್‌ಐಆರ್‌ಎಫ್‌ ರ‍್ಯಾಂಕ್, ನ್ಯಾಕ್‌ ಮಾನ್ಯತೆ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯದ ಎಲ್ಲ ವಿಶ್ವವಿದ್ಯಾಲಯ-ಕಾಲೇಜುಗಳ ನ್ಯಾಕ್‌ (ಎನ್‌ಎಎಸಿ) ಮಾನ್ಯತೆ, ನ್ಯಾಷನಲ್‌ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್‌) ರ‍್ಯಾಂಕ್‌ ಪಡೆಯಲು 15 ದಿನಗಳ ಒಳಗಾಗಿ ಕ್ರಿಯಾ ಯೋಜನೆ ಸಲ್ಲಿಸಬೇಕು’ ಎಂದು ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಗಡುವು ವಿಧಿಸಿದ್ದಾರೆ.

ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳ ಜೊತೆ ಮಂಗಳವಾರ ಸಭೆ ನಡೆಸಿದ ಅವರು, ‘ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌- ನ್ಯಾಕ್‌ ಮಾನ್ಯತೆಯನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವಂತಿಲ್ಲ. ಜಾಗತಿಕ ಶಿಕ್ಷಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಬೇಕಾದರೆ, ಹೆಚ್ಚು ಅನುದಾನ ಪಡೆಯಬೇಕಾದರೆ ಇವು ಅಗತ್ಯ’ ಎಂದರು.

ಸದ್ಯ, ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯಗಳಲ್ಲಿ ಮೈಸೂರು 27, ಬೆಂಗಳೂರು 68, ಶಿವಮೊಗ್ಗದ ಕುವೆಂಪು 73, ಬೆಳಗಾವಿಯ ವಿಟಿಯು 80ನೇ ಸ್ಥಾನದಲ್ಲಿವೆ. ಮುಂದಿನ ಬಾರಿಯ ರ‍್ಯಾಂಕಿಂಗ್‌ ವೇಳೆಗೆ ಮೈಸೂರು 20, ಬೆಂಗಳೂರು 50ರೊಳಗಿನ ಸ್ಥಾನಕ್ಕೆ ಬರಬೇಕು. ವಿಟಿಯು ಸ್ಥಾನ ಉತ್ತಮ ಪಡಿಸಿಕೊಳ್ಳಬೇಕು’ ಎಂದು ಕುಲಪತಿಗಳಿಗೆ ತಾಕೀತು ಮಾಡಿದರು.

‘ಈ ಪಟ್ಟಿಯಲ್ಲಿ ತುಮಕೂರು ಮತ್ತು ಮಂಗಳೂರು ವಿಶ್ವವಿದ್ಯಾಲಯಗಳು ಮಾತ್ರ 150ರೊಳಗಿನ ಸ್ಥಾನದಲ್ಲಿವೆ. ಉಳಿದ ಯಾವ ವಿಶ್ವವಿದ್ಯಾಲಯಗಳಿಗೆ ಈ ರ‍್ಯಾಂಕ್‌ ಸಿಕ್ಕಿಲ್ಲ. ಕೊನೆಯ ಪಕ್ಷ ಅದರ ಚೌಕಟ್ಟಿನೊಳಕ್ಕೆ ಬಂದಿಲ್ಲ’ ಎಂದರು.

ಅರ್ಹತೆಯೇ ಇಲ್ಲ: ‘19 ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎ- ಅದಕ್ಕಿಂತ ಮೇಲಿನ ಸ್ಥಾನದಲ್ಲಿ 6, ಬಿ-ಎ ಹಂತದಲ್ಲಿ 4, ಮಾನ್ಯತೆ ಪಡೆದ 9 ವಿಶ್ವವಿದ್ಯಾಲಯಗಳಿವೆ. ಉಳಿದಂತೆ ಇನ್ನೆರಡು ವಿಶ್ವವಿದ್ಯಾಲಯಗಳು ಅರ್ಜಿ ಹಾಕಿಕೊಂಡಿದ್ದು, 4 ವಿಶ್ವವಿದ್ಯಾಲಯಗಳು ಅರ್ಜಿಯನ್ನೇ ಹಾಕಿಲ್ಲ. 3 ವಿಶ್ವವಿದ್ಯಾಲಯಗಳು ಎನ್‌ಐಆರ್‌ಎಫ್‌ ರ‍್ಯಾಂಕಿಂಗ್‌ಗೆ ಅರ್ಹತೆಯನ್ನೇ ಪಡೆದಿಲ್ಲ’ ಎಂದೂ ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರನಾಯ್ಕ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಶಿ ಸಭೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು