ಮಂಗಳವಾರ, ಆಗಸ್ಟ್ 16, 2022
29 °C
ಇಂದು ಮೂವರೂ ನಾಮಪತ್ರ ಸಲ್ಲಿಸುವ ಸಾಧ್ಯತೆ

ರಾಜ್ಯಸಭೆಗೆ ನಿರ್ಮಲಾ, ಜಗ್ಗೇಶ್, ಜೈರಾಂ ರಮೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ನಿರೀಕ್ಷೆಯಂತೆಯೇ ಮೊದಲ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವ ಬಿಜೆಪಿ, ಎರಡನೇ ಅಭ್ಯರ್ಥಿಯನ್ನಾಗಿ ಚಿತ್ರನಟ ಜಗ್ಗೇಶ್‌ ಅವರನ್ನು ಕಣಕ್ಕಿಳಿಸುವ ಅಚ್ಚರಿಯ ತೀರ್ಮಾನವನ್ನು ಭಾನುವಾರ ಪ್ರಕಟಿಸಿದೆ. ಕಾಂಗ್ರೆಸ್‌ ಹಾಲಿ ಸದಸ್ಯ ಜೈರಾಂ ರಮೇಶ್‌ ಅವರನ್ನೇ ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದೆ.

ನಿರ್ಮಲಾ ಸೀತಾರಾಮನ್‌ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ಬಾರಿಯೂ ಅವರನ್ನೇ ಮೊದಲ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವಂತೆ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿಯೂ ಶಿಫಾರಸು ಮಾಡಿತ್ತು. ಮೊದಲ ಸ್ಥಾನಕ್ಕೆ ಅವರೊಬ್ಬರ ಹೆಸರನ್ನು ಮಾತ್ರ ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ಕಳುಹಿಸಲಾಗಿತ್ತು. ತಮಿಳುನಾಡು ಮೂಲದವರಾದ ನಿರ್ಮಲಾ ಎರಡನೇ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಲಿದ್ದಾರೆ.

ಎರಡನೇ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ರಾಜ್ಯ ಘಟಕದ ಪ್ರಮುಖರ ಸಮಿತಿ ರಾಜ್ಯಸಭೆಯ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಲಹರ್‌ ಸಿಂಗ್‌ ಸಿರೋಯ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಮತ್ತು ಉದ್ಯಮಿ ಪ್ರಕಾಶ್‌ ಶೆಟ್ಟಿ ಹೆಸರುಗಳನ್ನು ಶಿಫಾರಸು ಮಾಡಿತ್ತು.

ಜಗ್ಗೇಶ್‌ ಅವರ ಹೆಸರು ಶಿಫಾರಸು ಪಟ್ಟಿಯಲ್ಲಿರಲಿಲ್ಲ. ಆದರೆ, ಕೊನೆಯ ಕ್ಷಣಗಳಲ್ಲಿ ಬಿಜೆಪಿ ವರಿಷ್ಠರು ಜಗ್ಗೇಶ್‌ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದಿಲ್ಲ ಎಂದು ಸುರಾನಾ ಅವರು ಪಕ್ಷದ ನಾಯಕರಿಗೆ ತಿಳಿಸಿದ್ದರು.

ನಿರ್ಮಲಾ ಅವರು ಸೋಮವಾರ ಬೆಂಗಳೂರಿಗೆ ಬರಲಿದ್ದಾರೆ. ಆ ಬಳಿಕ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಒಕ್ಕಲಿಗರಿಗೆ ಪ್ರಾತಿನಿಧ್ಯ: ಒಕ್ಕಲಿಗರಿಗೆರಾಜಕೀಯ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಜಗ್ಗೇಶ್‌ ಅವರನ್ನು ರಾಜ್ಯಸಭೆಗೆ ಕಳುಹಿಸುವ ತೀರ್ಮಾನವನ್ನು ಬಿಜೆಪಿ ವರಿಷ್ಠರು ಕೈಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ರಾಜ್ಯದಿಂದ ರವಾನೆಯಾದ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಅವರಿಗೆ ಟಿಕೆಟ್‌ ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆ, ರಾಜ್ಯಸಭೆ ಚುನಾವಣೆ, ನಾಮನಿರ್ದೇಶನ ಪ್ರಕ್ರಿಯೆಗಳಲ್ಲಿ ಒಕ್ಕಲಿಗ ಸಮುದಾಯದವರಿಗೆ ಅವಕಾಶ ಕಲ್ಪಿಸಿರಲಿಲ್ಲ. ಲಿಂಗಾಯತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಒಕ್ಕಲಿಗರಿಗೆ ಅವಕಾಶ ನೀಡುವ ತೀರ್ಮಾನವನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಜಗ್ಗೇಶ್‌ ಗಂಗಟಕಾರ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಬಿಎಸ್ಸಿ ಪದವೀಧರರಾಗಿರುವ ಅವರು 1980ರಿಂದಲೂ ಚಿತ್ರರಂಗದಲ್ಲಿದ್ದಾರೆ. ಮೊದಲು ಕಾಂಗ್ರೆಸ್‌ ಪಕ್ಷದಲ್ಲಿದ್ದರು. ತುರುವೇಕೆರೆ ವಿಧಾನಸಭಾ ಕ್ಷೇತ್ರದಿಂದ ಒಂದು
ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಬಿಜೆಪಿ ಸೇರಿ ಒಂದು ಅವಧಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಸದ್ಯ
ಬಿಜೆಪಿಯ ರಾಜ್ಯ ವಕ್ತಾರರಾಗಿದ್ದಾರೆ.

ಜೈರಾಂಗೆ ಮತ್ತೊಂದು ಅವಕಾಶ: 2004 ರಿಂದಲೂ ರಾಜ್ಯಸಭೆಯ ಸದಸ್ಯರಾಗಿರುವ ಜೈರಾಂ ರಮೇಶ್‌ ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡುವ ನಿರ್ಧಾರವನ್ನು ಕಾಂಗ್ರೆಸ್‌ ಕೈಗೊಂಡಿದೆ. ಚಿಕ್ಕಮಗಳೂರಿನವರಾದ ಜೈರಾಂ, 2004 ಮತ್ತು 2010 ರಲ್ಲಿ ನೆರೆಯ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2016 ರಲ್ಲಿ ರಾಜ್ಯ ವಿಧಾನಸಭೆಯಿಂದ ಆಯ್ಕೆ ಮಾಡಲಾಗಿತ್ತು. ಜೈರಾಂ ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡುವುದನ್ನು ಕಾಂಗ್ರೆಸ್‌ನ ಕೆಲವು ಮುಖಂಡರು ವಿರೋಧಿಸಿದ್ದರು.

ಕಾಂಗ್ರೆಸ್‌, ಭಾನುವಾರ ರಾತ್ರಿ ಅಧಿಕೃತವಾಗಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿತು. ಮೇ 30ರಂದು (ಸೋಮವಾರ) ಬೆಳಿಗ್ಗೆ 10 ಗಂಟೆಗೆ ಜೈರಾಂ ರಮೇಶ್‌ ರಾಜ್ಯಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಾಲ್ಕನೇ ಅಭ್ಯರ್ಥಿಯಾಗಲು ಕಸರತ್ತು:

ವಿಧಾನಸಭೆಯಲ್ಲಿರುವ ಸದಸ್ಯಬಲದ ಆಧಾರದಲ್ಲಿ ರಾಜ್ಯಸಭೆಗೆ ಬಿಜೆಪಿಯಿಂದ ಇಬ್ಬರು ಮತ್ತು ಕಾಂಗ್ರೆಸ್‌ನಿಂದ ಒಬ್ಬರು ನಿರಾಯಾಸವಾಗಿ ಆಯ್ಕೆಯಾಗಬಹುದು. ಜೆಡಿಎಸ್‌ಗೆ ಮತಗಳ ಕೊರತೆ ಇದೆ. ಹೀಗಾಗಿ ನಾಲ್ಕನೇ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಉದ್ಯಮಿ ಪ್ರಕಾಶ್‌ ಶೆಟ್ಟಿ ಅವರನ್ನು ಕಣಕ್ಕಿಳಿಸಿ ಇತರ ಪಕ್ಷಗಳ ಸದಸ್ಯರ ಬೆಂಬಲದಲ್ಲಿ ಆಯ್ಕೆಮಾಡುವ ಯೋಜನೆ ಬಿಜೆಪಿ ನಾಯಕರಲ್ಲಿದೆ. ಇನ್ನೊಂದೆಡೆ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಯತ್ನಿಸುತ್ತಿದ್ದಾರೆ. ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಲವು ಪ್ರಮುಖರನ್ನು ಭಾನುವಾರ ಭೇಟಿಮಾಡಿ ಅವರು ಚರ್ಚಿಸಿದ್ದಾರೆ.

ನನಗೂ ಅಚ್ಚರಿಯಾಗಿದೆ: ಜಗ್ಗೇಶ್‌

‘ರಾಜ್ಯಸಭೆ ಚುನಾವಣೆಗೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಪಕ್ಷದಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಸ್ಥಾನಮಾನಗಳ ಕನಸು ಕಂಡವನಲ್ಲ’ ಎಂದು ಜಗ್ಗೇಶ್‌ ‘ಪ್ರಜಾವಾಣಿ’ಗೆ  ಪ್ರತಿಕ್ರಿಯಿಸಿದರು.

‘ರಾಷ್ಟ್ರಕ್ಕಾಗಿ ತನ್ನನ್ನೇ ಸಮರ್ಪಿಸಿಕೊಂಡು ಕೆಲಸ ಮಾಡುತ್ತಿರುವ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೆಂದು ಗುರುತಿಸಿಕೊಳ್ಳಲು ನನಗೆ ಹೆಮ್ಮೆ ಇದೆ. ಆದರೆ ಪಕ್ಷ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿದೆ. ಇದು ನನಗೆ ಸಂತಸ ಉಂಟು ಮಾಡಿದೆ. ಮುಂದೆಯೂ ಪಕ್ಷ ಹೇಳುವ ಕೆಲಸಗಳನ್ನು ಮಾಡುತ್ತೇನೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು