ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು

Last Updated 7 ಏಪ್ರಿಲ್ 2021, 3:32 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಜಾರಿ ಆಗಲೇಬೇಕು. ಎಸ್ಮಾ ಜಾರಿಗೂ ಬಗ್ಗುವುದಿಲ್ಲ ಎಂದು ಪಟ್ಟು ಹಿಡಿದಿರುವ ಸಾರಿಗೆ ನೌಕರರ ಒಕ್ಕೂಟ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಹೀಗಾಗಿ, ರಾಜ್ಯದಲ್ಲಿ ಇಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ರಸ್ತೆಗಿಳಿದಿಲ್ಲ. ಹಲವೆಡೆ ಪ್ರಯಾಣಿಕರು ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ.

ಬೆಂಗಳೂರಿನಲ್ಲಿ 30 ಲಕ್ಷ ಪ್ರಯಾಣಿಕರು ಬಿಎಂಟಿಸಿ ನೆಚ್ಚಿಕೊಂಡಿದ್ದರೆ, ಕೆಎಸ್‌ಆರ್‌ಟಿಸಿ, ಈಶಾನ್ಯ, ನೈರುತ್ಯ ಸಾರಿಗೆಯ ಬಸ್‌ಗಳು ಸೇರಿ 70 ಲಕ್ಷದಿಂದ 80 ಲಕ್ಷ ಪ್ರಯಾಣಿಕರು ಇಂದು ತೊಂದರೆ ಅನುಭವಿಸಬೇಕಾಗಿದೆ.

ನಿತ್ಯ, ಗಿಜಿಗುಡುತ್ತಿದ್ದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಂತಲ್ಲೇ ನಿಂತಿದ್ದು, ಕೆಲ ಪ್ರಯಾಣಿಕರು ಬಸ್ ಹೊರಡುವುದನ್ನೇ ನಿರೀಕ್ಷಿಸುತ್ತಿರುವ ದೃಶ್ಯ ಕಂಡುಬಂದಿದೆ. ಕೆಲ ಕಾರ್ಮಿಕರು ಊರಿಗೆ ತೆರಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಶಾಂತಿನಗರದ ಬಸ್ ನಿಲ್ದಾಣದಲ್ಲಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳಿಗೆ ಜನರು ಮುಗಿಬಿದ್ದಿದ್ದಾರೆ. ಊರಿಗೆ ಹೋದರೆ ಸಾಕಪ್ಪಾ ಎಂಬ ಧಾವಂತದಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿತು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಬಂದು ನಿಂತಿವೆ.

ಬಸ್ ನಿಲ್ದಾಣಗಳಿಗೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಊರಿಗೆ ತೆರಳಲು ಖಾಸಗಿ ವಾಹನಗಳನ್ನೇ‌ ಅವಲಂಬಿಸಬೇಕಿದೆ. ಬೆಂಗಳೂರು, ಕೋಲಾರ, ಮಂಡ್ಯ, ಹುಬ್ಬಳ್ಳಿ ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರಯಾಣಿಕರು ಖಾಸಗಿ ಬಸ್‌, ಆಟೋ, ಕ್ಯಾಬ್‌ಗಳ ಮೊರೆ ಹೋಗಿದ್ದಾರೆ.

ಗೋವಾದಪಣಜಿಯಿಂದ ಮುಂಜಾನೆ ಬಂದಿಳಿದ ಇಳಕಲ್ ಗೆ ಹೋಗಬೇಕಿದ್ದ ಕುಟುಂಬವೊಂದು ಬಾಗಲಕೋಟೆ ಬಸ್ ನಿಲ್ದಾಣದಲ್ಲಿಯೇ ಉಳಿದಿದೆ. ಟಂ ಟಂ ಸೇರಿದಂತೆ ಖಾಸಗಿ ವಾಹನಗಳ ಚಾಲಕರು ಊರಿಗೆ ಕರೆದೊಯ್ಯಲು ಹೆಚ್ಚಿನ ಹಣ ಕೇಳುತ್ತಿದ್ದಾರೆ. ಮಕ್ಕಳು-ಮರಿ ಕಟ್ಟಿಕೊಂಡು ಬಂದಿದ್ದೇವೆ. ಏನು ಮಾಡುವುದು ಎಂದು ಕುಟುಂಬದ ಸದಸ್ಯೆ ರೇಖಾ ಅಳಲು ತೋಡಿಕೊಂಡರು.

ಕಲಬುರ್ಗಿ: ವೇತನ ಹೆಚ್ಚಳ ಮಾಡಬೇಕು‌ ಎಂದು ಒತ್ತಾಯಿಸಿ ಸಾರಿಗೆ ‌ಸಂಸ್ಥೆಗಳ ನೌಕರರು ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಮುಷ್ಕರದ‌ ನಿಮಿತ್ತ ಯಾವೊಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಲಿಲ್ಲ.

ಇದರಿಂದಾಗಿ ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರ ಸಂಪೂರ್ಣ ಸ್ತಬ್ದವಾಗಿದೆ. ಆಯ್ದ ಮಾರ್ಗಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ. ಮುಷ್ಕರದ ಮಾಹಿತಿ ಇದ್ದುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ.

ಹುಬ್ಬಳ್ಳಿನಗರದ ಹಳೇ ಬಸ್ ನಿಲ್ದಾಣದಿಂದ ಖಾಸಗಿ ಬಸ್'ಗಳ ಸಂಚಾರ ಆರಂಭವಾಗಿದೆ.

ಜಿಲ್ಲಾಡಳಿತ,ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಬೆಳಗಾವಿ, ವಿಜಯಪುರ, ಗದಗ ಹಾಗೂ ವಿವಿಧ ಭಾಗಗಳಿಗೆ ಖಾಸಗಿ ಬಸ್'ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆಯೂ ಖಾಸಗಿ ಬಸ್ ಸಂಚಾರ ನಡೆಸಿವೆ. ಮುಂಜಾಗ್ರತ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT