ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಿಂದ ಬರುವ ರೋಗ ಲಕ್ಷಣ ಇದ್ದವರಿಗೆ ಪ್ರವೇಶವಿಲ್ಲ

ಚಾಮರಾಜನಗರ: ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ಕ್ರಮ, ಸಾರ್ವಜನಿಕರಿಗೆ ಸಲಹೆ
Last Updated 9 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಪ್ರಕರಣ ವರದಿಯಾಗಿರುವುದರಿಂದ, ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳದಿಂದ ಜಿಲ್ಲೆಗೆ ಬರುವವರಲ್ಲಿ ನಿಫಾ ರೋಗ ಲಕ್ಷಣ ಕಂಡು ಬಂದರೆ, ಅಂಥವರ ಪ್ರವೇಶವನ್ನು ನಿರ್ಬಂಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೇರಳದಿಂದ ಬಂದವರ ಬಗ್ಗೆ 21 ದಿನ ನಿಗಾ ವಹಿಸಲಾಗುತ್ತದೆ. ಈ ಅವಧಿಯಲ್ಲಿ ರೋಗ ಲಕ್ಷಣ ಕಂಡು ಬಂದರೆ ಶಂಕಿತರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕಿಸಿ ಚಿಕಿತ್ಸೆ ಕೊಡಿಲಾಗುವುದು.ಸಾರ್ವಜನಿಕರಲ್ಲಿ ನಿಫಾ ಕುರಿತು ಅರಿವು ಮೂಡಿಸಿ ಹೋಟೆಲ್ ಮತ್ತು ರೆಸಾರ್ಟ್‌ಗಳಿಗೆ ಭೇಟಿ ನೀಡುವ ಕೇರಳ ಪ್ರವಾಸಿಗರ ಮೇಲೆ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂದಿ, ಕುದುರೆ, ನಾಯಿ, ಬೆಕ್ಕುಗಳಂತಹ ಸೋಂಕಿತ ಜಾನುವಾರುಗಳ ಮೂಲಕ ಈ ಸೋಂಕು ಹರಡುವುದರಿಂದ ಇವುಗಳನ್ನು ಪ್ರತ್ಯೇಕವಾಗಿ ಇರಿಸಬೇಕಾಗುತ್ತದೆ. ಶಂಕಿತ ವ್ಯಕ್ತಿಯು ಬಳಸುವ ಬಟ್ಟೆ, ಪಾತ್ರೆಗಳು ಹಾಗೂ ಮುಖ್ಯವಾಗಿ ಸ್ನಾನ ಮತ್ತು ಶೌಚಾಲಯದಲ್ಲಿ ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿಟ್ಟು ಶುಚಿಗೊಳಿಸಬೇಕು. ಹಸ್ತಲಾಘವ ಮಾಡಬಾರದು. ಸೋಂಕಿತರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವಂತೆ ಸೂಚಿಸಲಾಗಿದೆ.

ಎಲ್ಲ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸುಲಿದು ಅಥವಾ ಬೇಯಿಸಿ ತಿನ್ನಬೇಕು. ಫ್ಲೂ ರೀತಿಯ ಲಕ್ಷಣ ಕಂಡು ಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು. ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳ ಪ್ರವೇಶ ತಪ್ಪಿಸಲು, ತೆರೆದ ಬಾವಿಗಳಿಗೆ ಜಾಲರಿಯನ್ನು ಅಳವಡಿಸಬೇಕು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು.

ಹಂದಿ ಸಾಕಣೆ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಅಲ್ಲಿನ ಸಿಬ್ಬಂದಿ ವೈಯಕ್ತಿಕ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಹಂದಿ ಸಾಕಣೆ ವ್ಯಾಪ್ತಿಯಲ್ಲಿ ಬಾವಲಿಗಳು ಹಂದಿಗಳ ಸಂಪರ್ಕಕ್ಕೆ ಬಾರದಂತೆ ಮುಂಜಾಗ್ರತೆ ವಹಿಸಬೇಕು. ಸೋಂಕಿತ ಪ್ರದೇಶಗಳಿಗೆ ಪ್ರಯಾಣ ಮಾಡುವುದನ್ನು ಮುಂದೂಡಬೇಕು. ನೆರವಿಗಾಗಿ 104 ಕ್ಕೆ ಕರೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಟ್ಟೆಚ್ಚರಕ್ಕೆ ಉಸ್ತುವಾರಿ ಸಚಿವ ಸೂಚನೆ

ಈ ಮಧ್ಯೆ, ಕೇರಳದಲ್ಲಿ ನಿಫಾ ವೈರಸ್ ಸೋಂಕು ಕಾಣಿಸಿಕೊಂಡಿರುವುದು ಹಾಗೂ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ, ಜಿಲ್ಲೆಯ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

‘ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿಸಲಾಗಿರುವ ಮೂಲೆಹೊಳೆ, ಕೆಕ್ಕನಹಳ್ಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ಕಾರ್ಯವನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಮುಂದುವರಿಸಬೇಕು. ಗಡಿ ಪ್ರದೇಶಗಳ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿಯೊಬ್ಬರ ತಪಾಸಣೆ ನಡೆಸಿ, ಕಟ್ಟೆಚ್ಚರ ವಹಿಸಬೇಕು. ನಿಫಾ ಸೋಂಕಿನ ಲಕ್ಷಣ ಇರುವ ಪ್ರವಾಸಿಗರು, ಪ್ರಯಾಣಿಕರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಬಾರದು’ ಎಂದು ಅವರು ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT