ಸೋಮವಾರ, ಸೆಪ್ಟೆಂಬರ್ 26, 2022
22 °C
ರಸ್ತೆ ಅಭಿವೃದ್ಧಿಗೆ ಮಾತ್ರ ಬಿಬಿಎಂಪಿಗೆ ಮನವಿ: ಸಾಹಿತ್ಯ ಪರಿಷತ್‌ ಸ್ಪಷ್ಟನೆ

ಪಂಪ ಮಹಾಕವಿ ರಸ್ತೆ: ಹೆಸರು ಬದಲಾಯಿಸಲು ಮುಂದಾಗಿಲ್ಲ- ಕನ್ನಡ ಸಾಹಿತ್ಯ ಪರಿಷತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಾಮರಾಜಪೇಟೆಯಲ್ಲಿನ ಪಂಪ ಮಹಾಕವಿ ರಸ್ತೆಯ ಹೆಸರು ಬದಲಾಯಿಸಲು ಮುಂದಾಗಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್‌ ಸ್ಪಷ್ಟಪಡಿಸಿದೆ.

‘ಕನ್ನಡ ಸಾಹಿತ್ಯ ಪರಿಷತ್ತಿನ ಎದುರಿನ ಪಂಪ ಮಹಾಕವಿ ಮಾರ್ಗವನ್ನು ಕನ್ನಡಮಯ ಮಾಡಬೇಕು ಹಾಗೂ ಆಕರ್ಷಣೀಯವನ್ನಾಗಿಸಲು, ಈ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಮನವಿಯನ್ನು ಮಾತ್ರ ಬಿಬಿಎಂಪಿಗೆ ಸಲ್ಲಿಸಲಾಗಿದೆ’ ಎಂದು ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

ಪಂಪ ಮಹಾಕವಿ ರಸ್ತೆಯ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಸ್ತೆ ಎಂದು ಬದಲಾಯಿಸುವ ಬಗ್ಗೆ ಕಸಾಪ ಪ್ರಸ್ತಾವ ಮುಂದಿಟ್ಟಿದ್ದ ಬಗ್ಗೆ ಸಾಹಿತ್ಯ ವಲಯದ ಪ್ರಮುಖರು ಮತ್ತು ಕನ್ನಡ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಹೇಶ ಜೋಶಿ, ‘ಪಂಪ ಮಹಾಕವಿಯ ಬಗ್ಗೆ ಪರಿಷತ್‌ ಅಪಾರ ಗೌರವ ಹೊಂದಿದೆ. ಮಿಂಟೋ ಆಸ್ಪತ್ರೆ ವೃತ್ತದಿಂದ ಮಕ್ಕಳಕೂಟ ವೃತ್ತದವರೆಗಿನ ರಸ್ತೆಯನ್ನು ಕನ್ನಡಮಯಗೊಳಿಸಬೇಕು. ಕನ್ನಡ ಸಾಹಿತ್ಯ ಪರಂಪರೆ ಬಿಂಬಿಸುವ ಭೂದೃಶ್ಯ ಸಿದ್ಧಪಡಿಸಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಮಾರ್ಗವನ್ನು ಅಭಿವೃದ್ಧಿಪಡಿಸಿ ಕನ್ನಡಮಯ ವಾತಾವರಣ ನಿರ್ಮಿಸಬೇಕು ಎನ್ನುವ ಮನವಿಯನ್ನು ಮಾತ್ರ ಜೂನ್‌ 3ರಂದು ಪರಿಷತ್‌ ಬಿಬಿಎಂಪಿಗೆ ಸಲ್ಲಿಸಿತ್ತು’ ಎಂದು ವಿವರಿಸಿದ್ದಾರೆ.

‘ಪರಿಷತ್ತಿನ ಕೆಲವು ಅಭಿಮಾನಿಗಳು ಹಾಗೂ ಕನ್ನಡ ಪ್ರೇಮಿಗಳು, ಪಂಪ ಮಹಾಕವಿ ಹೆಸರಿನೊಂದಿಗೆ ಪರಿಷತ್ತಿನ ಹೆಸರನ್ನು ಸೇರಿಸಿ ʻಪಂಪ ಮಹಾಕವಿ - ಕನ್ನಡ ಸಾಹಿತ್ಯ ಪರಿಷತ್ತು ರಸ್ತೆʼ ಅಥವಾ ಆದಿಕವಿ ಪಂಪನಿಗೆ ನಾಡಿನ ಮೊದಲ ಗುರು ʻನಾಡೋಜʼ ಎಂಬ ಹೆಗ್ಗಳಿಕೆ ಇರುವುದರಿಂದ, ʻನಾಡೋಜ ಪಂಪ ಮಹಾಕವಿ-ಕನ್ನಡ ಸಾಹಿತ್ಯ ಪರಿಷತ್ತು ರಸ್ತೆʼ ಎಂದು ನಾಮಕರಣಕ್ಕೆ ಸಲಹೆ ನೀಡಿದ್ದರು. ಆದರೆ, ಪರಿಷತ್‌ ಈ ಬಗ್ಗೆ ಕೇವಲ ಸಲಹೆ, ಸೂಚನೆಗಳನ್ನು ಪಡೆದಿದೆಯೇ ಹೊರತು, ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.

‘ಆದರೆ, ಕೆಲವು ಪೂರ್ವಗ್ರಹಪೀಡಿತರು ಪರಿಷತ್ತಿನ ಏಳ್ಗೆ ಸಹಿಸಲಾಗದೆಯೇ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಯಾವುದೇ ಪರಿಣಾಮಕಾರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಪರಿಷತ್ತಿಗೆ ಒಂದು ಕಾನೂನು ಚೌಕಟ್ಟು ಇದೆ. ಕಾರ್ಯಕಾರಿ ಸಮಿತಿ ಎನ್ನುವ ಮಹತ್ವದ ವ್ಯವಸ್ಥೆ ಇದೆ. ಈ ಸಮಿತಿಯಲ್ಲೇ ಎಲ್ಲಾ ನಿರ್ಣಯಗಳು ಕೈಗೊಳ್ಳಲಾಗುತ್ತದೆಯೇ ಹೊರತು, ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವುದು ಸಾಧ್ಯವೇ ಇಲ್ಲ’ ಎಂದು ತಿಳಿಸಿದ್ದಾರೆ.‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು