ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಿಂದ ಹಿಂದೆಸರಿವ ಪ್ರಶ್ನೆ ಇಲ್ಲ- ರಾಜ್ಯಪಾಲ ಹುದ್ದೆ ಒಪ್ಪಲ್ಲ: ಯಡಿಯೂರಪ್ಪ

Last Updated 26 ಜುಲೈ 2021, 21:07 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯಪಾಲ ಹುದ್ದೆಯೂ ಸೇರಿದಂತೆ, ಕೇಂದ್ರದಲ್ಲಿ ಯಾವುದೇ ಸ್ಥಾನಮಾನ ವಹಿಸುವುದಿಲ್ಲ’ ಎಂದು ಬಿ.ಎಸ್‌. ಯಡಿಯೂರಪ್ಪ ಕಡ್ಡಿ ಮುರಿದಂತೆ ಹೇಳಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ರಾಜಭವನದ ಮುಂಭಾಗದಲ್ಲಿ ಸುದ್ದಿಗಾರರಿಗೆ ಈ ಮಾತುಗಳನ್ನು ಹೇಳುವಾಗ ಅವರು ನಿರಾಳರಾಗಿದ್ದರು.

ರಾಜೀನಾಮೆ ನೀಡುವ ವಿಷಯ ಪ್ರಸ್ತಾಪಿಸುವಾಗ ಗದ್ಗದಿತರಾಗಿದ್ದ ಯಡಿಯೂರಪ್ಪ ಅವರ ಮುಖ ಛಾಯೆ, ಪದತ್ಯಾಗದ ಬಳಿಕ ಸಂಪೂರ್ಣವಾಗಿ ಬದಲಾಗಿತ್ತು. ‘ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಹೆಸರನ್ನು ನಾನು ಪ್ರಸ್ತಾಪಿಸುವುದಿಲ್ಲ. ಅದು ಹೈಕಮಾಂಡ್‌ಗೆ ಬಿಟ್ಟದ್ದು. ಅವರು ಯಾರನ್ನು ಮಾಡಿದರೂ ಸಹಕಾರ ಕೊಡುತ್ತೇನೆ’ ಎಂದರು.

‘ರಾಜೀನಾಮೆ ನೀಡುವಂತೆ ದೆಹಲಿಯಿಂದ ಯಾವುದೇ ಒತ್ತಡ ಇಲ್ಲ. ನಾನೇ ನಿರ್ಧಾರ ಮಾಡಿ ರಾಜೀನಾಮೆ ಕೊಟ್ಟು, ಬೇರೆಯವರಿಗೆ
ಅವಕಾಶ ಸಿಗಬೇಕು, ಬೇರೆಯವರೂ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದೇನೆ’ ಎಂದು ಅವರು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನೂರಕ್ಕೆ ನೂರು ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ನಾಳೆಯಿಂದಲೇ ಆ ಕೆಲಸ ಆರಂಭಿಸುತ್ತೇನೆ. ಸಂಘಟನೆಯನ್ನು ಬಲಪಡಿಸುತ್ತೇನೆ. ಯಾವ ಕಾರಣಕ್ಕೂ ರಾಜಕೀಯದಿಂದ ಹಿಂದೆಸರಿಯುವ ಪ್ರಶ್ನೆ ಇಲ್ಲ. ಆಬಗ್ಗೆ ಅನುಮಾನ ಬೇಡ’ ಎಂದು ಹೇಳಿದರು.

‘75 ವಯಸ್ಸು ದಾಟಿದವರಿಗೆ ದೇಶದ ಎಲ್ಲೂ ಪಕ್ಷ ಅಧಿಕಾರ ಕೊಟ್ಟಿಲ್ಲ. ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧಾರ ಮಾಡಿದ್ದೆ. ಎರಡು ವರ್ಷ ತುಂಬಿದ ಶುಭ ಸಂದರ್ಭದಲ್ಲಿ ನೀಡುವುದುಒಳ್ಳೆಯದು ಎಂದು ಕೊಟ್ಟಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT