ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1.35 ಲಕ್ಷ ಸಾರಿಗೆ ನೌಕರರಿಗಿಲ್ಲ ದೀಪಾವಳಿ ಸಂಭ್ರಮ!

ಇನ್ನೂ ಸಿಗದ ಅಕ್ಟೋಬರ್‌ ವೇತನ | ಸಹಾಯಧನ ಬಿಡುಗಡೆಗೆ ಆರ್ಥಿಕ ಇಲಾಖೆ ಆಕ್ಷೇಪ
Last Updated 14 ನವೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಈ ತಿಂಗಳ 14 ದಿನ ಕಳೆದರೂ ರಾಜ್ಯ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ) ಒಟ್ಟು 1.35 ಲಕ್ಷ ಸಿಬ್ಬಂದಿಗೆ ಅಕ್ಟೋಬರ್‌ ತಿಂಗಳ ವೇತನ ಪಾವತಿ ಆಗಿಲ್ಲ. ಹೀಗಾಗಿ, ಈ ಬಾರಿ ಅವರಿಗೆ ದೀಪಾವಳಿಯ ಸಂಭ್ರಮ ಇಲ್ಲ.

ಕೋವಿಡ್ ಕಾರಣದಿಂದ ನಾಲ್ಕೂ ನಿಗಮಗಳು ಆದಾಯ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿವೆ. ಹೀಗಾಗಿ, ಈ ನಿಗಮಗಳ ಸಿಬ್ಬಂದಿಗೆ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ವೇತನ ಪಾವತಿಸಲು ಪ್ರತಿ ತಿಂಗಳು ತಲಾ ₹ 211 ಕೋಟಿಯಂತೆ ಒಟ್ಟು ₹ 634.50 ಕೋಟಿ ವಿಶೇಷ ಅನುದಾನ ನೀಡುವಂತೆ ಸರ್ಕಾರಕ್ಕೆ ಅಕ್ಟೋಬರ್‌ 15ರಂದು ಸಾರಿಗೆ ಇಲಾಖೆ ಮನವಿ ಸಲ್ಲಿಸಿತ್ತು. ಆದರೆ, ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.

ಪ್ರಸಕ್ತ ಸಾಲಿನಲ್ಲಿ (2020–21) ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಿಗಮಗಳ ಸಿಬ್ಬಂದಿ ವೇತನ ಪಾವತಿಸಲು ಸಾರಿಗೆ ಇಲಾಖೆಗೆ ₹ 1,499.08 ಕೋಟಿ ಬಿಡುಗಡೆ ಮಾಡಿದ್ದ ಆರ್ಥಿಕ ಇಲಾಖೆ, ‘ಮುಂದಿನ ದಿನಗಳಲ್ಲಿ ನಿಗಮಗಳೇ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳಬೇಕು. ಸಹಾಯಧನ ಕೇಳಬಾರದು’ ಎಂದು ಷರತ್ತು ವಿಧಿಸಿತ್ತು. ಹೀಗಾಗಿ, ಮತ್ತೆ ಅನುದಾನ ನೀಡುವಂತೆ ಸಾರಿಗೆ ಇಲಾಖೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಿದೆ. ಆದರೆ, ಸಂಪನ್ಮೂಲ ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ವಿವರಿಸಿ ಸರ್ಕಾರಕ್ಕೆ ಸಾರಿಗೆ ಇಲಾಖೆ ಮತ್ತೆ ಮನವಿ ಸಲ್ಲಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ, ‘ನಿಗಮಗಳಿಗೆ ಆದಾಯ ಇಲ್ಲದಿರುವುದರಿಂದ ಮುಂದಿನ 3 ತಿಂಗಳಿಗೆ ಸಿಬ್ಬಂದಿಯ ವೇತನದ ಶೇ 75ರಷ್ಟು ವಿಶೇಷ ಸಹಾಯಧನ ನೀಡುವಂತೆ ಮಾಡಿದ್ದ ಮನವಿಗೆ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿರುವುದು ನಿಜ. ಕೊರೊನಾ ಕಾರಣದಿಂದ ಆದಾಯ ಇಲ್ಲ. ಹೀಗಾಗಿ, ಮನವಿಯನ್ನು ಮರು ಪರಿಶೀಲಿಸುವಂತೆ ಸರ್ಕಾರವನ್ನು ಕೋರಿದ್ದೇವೆ’ ಎಂದರು.

‘ಅಕ್ಟೋಬರ್‌ ತಿಂಗಳ ವೇತನ ಪಾವತಿ ಆಗಬಹುದು ಎಂಬ ನಿರೀಕ್ಷೆ ಇತ್ತು. ವೇತನ ಆಗದೇ ಇರುವುದರಿಂದ ಎಲ್ಲ ನೌಕರರಿಗೂ ಮುಂಗಡವಾಗಿ ತಲಾ ₹15 ಸಾವಿರ ಪಾವತಿ ಮಾಡುವಂತೆ ಆಯಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ನ.12ರಂದೇ ಪತ್ರ ಬರೆದಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿಲ್ಲ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್‌ ಹೇಳಿದರು.

* ವೇತನಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೆ ಹಣಕಾಸು ಇಲಾಖೆ ಮತ್ತು ಸಾರಿಗೆ ಇಲಾಖೆ ಮೂಲಕ ಪ್ರಯತ್ನ ನಡೆಯುತ್ತಿದೆ. 2–3 ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

– ಶಿವಯೋಗಿ ಸಿ. ಕಳಸದ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT