ಆದಾಯ ಮೀರಿದ ಆಸ್ತಿ| ಸೋಮಣ್ಣ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ‘ಆದಾಯ ಮೀರಿದ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ನಡೆಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿ ಕ್ರಿಮಿನಲ್ ಪ್ರಕರಣದ ಆರೋಪ ಎದುರಿಸುತ್ತಿರುವ ವಸತಿ ಸಚಿವ ವಿ. ಸೋಮಣ್ಣ ಅವರ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ವಿಚಾರಣೆಗೆ ಮಧ್ಯಂತರ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತಂತೆ ಸೋಮಣ್ಣ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ವಿಚಾರಣಾ ಕೋರ್ಟ್ಗೆ ಹಾಜರಾತಿಯಿಂದ ವಿನಾಯಿತಿ ಕೋರಿದ್ದ ಅರ್ಜಿದಾರರ ಮನವಿಗೆ ನ್ಯಾಯಪೀಠ, ‘ಅರ್ಜಿದಾರರ ಮನವಿಯನ್ನು ಸಕಾರಣಗಳ ಆಧಾರದಲ್ಲಿ ಪರಿಗಣಿಸಿ’ ಎಂದು ಜನಪ್ರತಿನಿಧಿಗಳ ಕೋರ್ಟ್ಗೆ ಸೂಚಿಸಿದೆ. ಬೇಸಿಗೆ ರಜೆ ನಂತರಕ್ಕೆ ವಿಚಾರಣೆ ಮುಂದೂಡಲಾಗಿದೆ.
ಅರ್ಜಿ ವಜಾ: ‘ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನನಗೆ ಸಮನ್ಸ್ ಜಾರಿ ಮಾಡಿರುವ ಕಾರಣ ಪೊಲೀಸರಿಂದ ಬಂಧನದ ಭೀತಿ ಇದೆ‘ ಎಂದು ಸೋಮಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ಬಿ. ಜಯಂತ್ ಕುಮಾರ್ (ಸಿಸಿಎಚ್–91) ಶುಕ್ರವಾರ ನಿರಾಕರಿಸಿದ್ದಾರೆ.
‘ಬಂಧನದ ಭೀತಿ ಇದ್ದರೆ ಮಾತ್ರವೇ ನಿರೀಕ್ಷಣಾ ಜಾಮೀನು ಕೋರಬಹುದು. ಈ ಪ್ರಕರಣದಲ್ಲಿ ಬಂಧನದ ಭೀತಿ ಪ್ರಮೇಯ ಉದ್ಭವಿಸದು. ಆದ್ದರಿಂದ, ಅರ್ಜಿ ಮಾನ್ಯ ಮಾಡಲಾಗದು‘ ಎಂದು ನ್ಯಾಯಾಧೀಶ ಜಯಂತ್ ಅರ್ಜಿ ವಜಾ ಮಾಡಿದ್ದಾರೆ.
ಮೂಡಲಪಾಳ್ಯದ ರಾಮಕೃಷ್ಣ ಸಲ್ಲಿಸಿರುವ ಖಾಸಗಿ ದೂರಿನ ಆಧಾರದಲ್ಲಿ ನ್ಯಾಯಾಧೀಶ ಜಯಂತ್ ಅವರು ಸೋಮಣ್ಣ ಅವರಿಗೆ ಖುದ್ದು ಕೋರ್ಟ್ಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದಾರೆ. ಇದೇ 16ರಂದು ಸೋಮಣ್ಣ ಕೋರ್ಟ್ಗೆ ಖುದ್ದು ಹಾಜರಾಗಬೇಕಿದೆ.
ದೂರು: ‘ಸೋಮಣ್ಣ, ಸಾರ್ವಜನಿಕ ಸೇವಕರಾಗಿ ಅಕ್ರಮ ಸಂಪಾದನೆ ಮಾಡುವ ಮೂಲಕ ಕ್ರಿಮಿನಲ್ ದುರ್ನಡತೆ ತೋರಿದ್ದಾರೆ. , ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ- 1988ರ ಕಲಂ 13(1)(ಬಿ) (ಡಿ) ಮತ್ತು (ಇ) ಕಲಂ 13(2)ರ ಅಡಿ ಪ್ರಕರಣ ದಾಖಲಿಸಲು ಆದೇಶಿಸಬೇಕು’ ಎಂಬುದು ದೂರು ದಾರರ ಕೋರಿಕೆ. ದೂರುದಾರರ ಪರಹೈಕೋರ್ಟ್ ವಕೀಲ ಬ್ಯಾತ ಎನ್.ಜಗದೀಶ್ ವಾದ ಮಂಡಿ ಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.