ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಬಿಸಿಗೆ ಶೇ 33 ಮೀಸಲು: ಕೆ.ಭಕ್ತವತ್ಸಲ ಆಯೋಗದ ಶಿಫಾರಸು

ಸ್ಥಳೀಯ ಸಂಸ್ಥೆಗಳ ಮೀಸಲಾತಿ
Last Updated 21 ಜುಲೈ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಸೇರಿದಂತೆ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ‘ಎ’ ಮತ್ತು ‘ಬಿ’ ಪ್ರವರ್ಗದ ಸಮುದಾಯಗಳಿಗೆ ಈಗಿರುವ ರಾಜಕೀಯ ಮೀಸಲಾತಿಯನ್ನು ಶೇ 33ಕ್ಕೆ ಹೆಚ್ಚಿಸುವಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿದ ಬಳಿಕವೇ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ವರ್ಗೀಕರಿಸಿ ಚುನಾವಣೆ ನಡೆಸಬೇಕು ಎಂದು ಸುಪ್ರೀಂ
ಕೋರ್ಟ್ ಹೇಳಿತ್ತು. ಹಿಂದುಳಿದಿರುವಿಕೆಯನ್ನು ಗುರುತಿಸುವ ಸಲುವಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಅಧ್ಯಕ್ಷತೆಯಲ್ಲಿ ಆಯೋಗವನ್ನು ಸರ್ಕಾರ ರಚಿಸಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರುವಾರ ಭೇಟಿ ಮಾಡಿದ ಭಕ್ತವತ್ಸಲ ನೇತೃತ್ವದ ಆಯೋಗದ ಸದಸ್ಯರು, ಅಂತಿಮ ವರದಿಯನ್ನು ಸಲ್ಲಿಸಿದರು.

ಒಟ್ಟು ಸ್ಥಾನಗಳ ಪೈಕಿ ಮೂರನೇ ಒಂದರಷ್ಟು ಅಂದರೆ ಶೇ 33ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳಿಗೆ (ಅಲ್ಪಸಂಖ್ಯಾತರೂ ಸೇರಿ) ನೀಡುವುದು ನ್ಯಾಯೋಚಿತ. ಆದರೆ, ಎಸ್‌ಸಿ, ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಒಟ್ಟು ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದೂ ಶಿಫಾರಸಿನಲ್ಲಿ ಪ್ರತಿಪಾದಿಸಿದೆ.

1996, 2001, 2010 ಮತ್ತು 2015ರಲ್ಲಿ ನಡೆದ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಪ್ರಾಯೋಗಿಕ ದತ್ತಾಂಶವನ್ನು ವಿಶ್ಲೇಷಿಸಿದಾಗ ಹಿಂದು
ಳಿದ ವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳು ಇನ್ನೂ ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿವೆ ಎಂದೂ ಆಯೋಗ ಹೇಳಿದೆ.

ಪ್ರಮುಖ ಶಿಫಾರಸುಗಳು:

*ಬಿಬಿಎಂಪಿಯಲ್ಲಿ ಮೇಯರ್‌ ಮತ್ತು ಉಪಮೇಯರ್‌ ಹುದ್ದೆಗಳಲ್ಲೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಪರಿಶೀಲಿಸಬೇಕು.

* ಬಿಬಿಎಂಪಿ ಮೇಯರ್‌ ಮತ್ತು ಉಪ ಮೇಯರ್ ಅವಧಿಯನ್ನು 30 ತಿಂಗಳಿಗೆ ನಿಗದಿಪಡಿಸುವ ಸಂಬಂಧ ‘ಕರ್ನಾಟಕ ಪುರಸಭೆ ನಗರಸಭೆ ಕಾಯ್ದೆ 1976’ ರ ‘ಸೆಕ್ಷನ್‌ 12’ಕ್ಕೆ ತಿದ್ದುಪಡಿ ತರಬೇಕು. ಈ ಕಾಯ್ದೆ ಪ್ರಕಾರ ಮೇಯರ್‌ ಮತ್ತು ಉಪಮೇಯರ್‌ ಅಧಿಕಾರ ಅವಧಿ 12 ತಿಂಗಳು. ಬಿಬಿಎಂಪಿ ಕಾಯ್ದೆ 2020ರ ಪ್ರಕಾರ ಈ ಹುದ್ದೆಗಳ ಅಧಿಕಾರ ಅವಧಿ 30 ತಿಂಗಳು.

* ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿ ತರಬೇಕು.

ಆಯೋಗ ನೇಮಕದ ಹಿನ್ನೆಲೆ: ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ನೀಡುವ ಸಂಬಂಧ ಸುಪ್ರೀಂಕೋರ್ಟ್‌ 2010ರಲ್ಲಿ ತೀರ್ಪು ನೀಡಿ, ‘ನಿಖರವಾದ ಅಂಕಿ– ಅಂಶಗಳ ಆಧಾರದಲ್ಲಿ ಮೂರು ಹಂತದಲ್ಲಿ ಪರಿಶೀಲನೆ ನಡೆಸಿ, ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಖಾತರಿಪಡಿಸಿದ ಬಳಿಕವೇ ರಾಜಕೀಯ ಮೀಸಲಾತಿ ನೀಡಬೇಕು’ ಎಂದಿತ್ತು.

2021ರ ಮಾರ್ಚ್‌ನಲ್ಲೂ ಸುಪ್ರೀಂ ಕೋರ್ಟ್‌ ಈ ಮಾತು ಪುನರುಚ್ಚರಿಸಿತ್ತು.
2022ರ ಜನವರಿಯಲ್ಲಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮೂರು ಹಂತದ ಪರಿಶೀಲನೆ ಇಲ್ಲದೆ ಹಿಂದುಳಿದ ವರ್ಗಗಳಿಗೆ ಮೀಸಲು ನೀಡಲು ಅವಕಾಶ ನಿರಾಕರಿಸಿತ್ತು. ಈ ಆದೇಶ ಇಡೀ ದೇಶಕ್ಕೆ ಅನ್ವಯವಾಗುತ್ತದೆ ಎಂದೂ ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿತ್ತು.

ಈ ತೀರ್ಪುಗಳಿಂದಾಗಿ ರಾಜ್ಯದಲ್ಲಿ ಬಿಬಿಎಂಪಿ, ಪಂಚಾಯತ್‌, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ಮೊದಲೇ ಮೀಸಲಾತಿ ನಿಗದಿ ಮಾಡುವುದು ಅನಿವಾರ್ಯವಾಗಿತ್ತು. ಹೀಗಾಗಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಲು ಉಂಟಾಗಿದ್ದ ತೊಡಕು ನಿವಾರಿಸಲು ಮಾರ್ಚ್‌ 31ರಂದು ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿತ್ತು. ಅದರ ಪ್ರಕಾರ ಭಕ್ತವತ್ಸಲ ನೇತೃತ್ವದಲ್ಲಿ ಆಯೋಗ ರಚಿಸಿ, ನಿವೃತ್ತ ಐಎಎಸ್‌ ಅಧಿಕಾರಿ ಸಿ.ಆರ್‌.ಚಿಕ್ಕಮಠ ಅವರನ್ನು ಸದಸ್ಯರಾಗಿ ನೇಮಿಸಲಾಯಿತು.

ಶೇ 50ರೊಳಗೆ ಶೇ 33ರಷ್ಟು ಹೇಗೆ?

ಒಬಿಸಿ ಮೀಸಲಾತಿ ಪ್ರಮಾಣವನ್ನು ಶೇ 33ಕ್ಕೆ ಹೆಚ್ಚಿಸಬೇಕು, ಆದರೆ ಒಟ್ಟು ಮೀಸಲಾತಿ ಪ್ರಮಾಣ ಶೇ 50 ಅನ್ನು ಮೀರಬಾರದು ಎಂದು ನ್ಯಾ.ಭಕ್ತವತ್ಸಲ ಸಮಿತಿ ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ (ಎಸ್‌ಸಿ) ಶೇ 17, ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಶೇ 5 ಹಾಗೂ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಶೇ 27ರಷ್ಟು ಮೀಸಲಾತಿ ಇದೆ. ಒಟ್ಟು ಕೂಡಿದರೆ ಶೇ 49ರಷ್ಟಾಗಲಿದೆ.

ಸಾಮಾನ್ಯವಾಗಿ ಒಬಿಸಿಗೆ 1/3 ಎಂದೂ ಹೇಳಲಾಗುತ್ತದೆ. ಆದರೆ, ಪ್ರದೇಶ ಅಥವಾ ಜಿಲ್ಲಾವಾರು ಜನಸಂಖ್ಯೆ ಆಧರಿಸಿ ಮೀಸಲಾತಿ ವರ್ಗೀಕರಣ ಮಾಡುವಾಗ ಸ್ಥಳೀಯವಾಗಿ ಪ್ರಮಾಣ ವ್ಯತ್ಯಯ ಆಗುತ್ತದೆಯಾದರೂ ಒಟ್ಟು ಮೀಸಲಾತಿ ಶೇ 50ರಷ್ಟನ್ನು ಮೀರುವುದಿಲ್ಲ. ಒಬಿಸಿಗೆ ಶೇ 27ರಷ್ಟೇ ಮೀಸಲಾತಿ ಸಿಗುತ್ತದೆ.

ಭಕ್ತವತ್ಸಲ ಸಮಿತಿಯು ಶೇ 33ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ಪರಿಶಿಷ್ಟ ಜಾತಿ/ಪಂಗಡಗಳ ಶೇ 22ರಷ್ಟನ್ನು ಸೇರಿಸಿದರೆ ಮೀಸಲಾತಿ ಪ್ರಮಾಣ ಶೇ 55ಕ್ಕೆ ಏರಲಿದೆ. ಶಿಕ್ಷಣ–ಉದ್ಯೋಗದ ಮೀಸಲಾತಿ ಲೆಕ್ಕದಲ್ಲಿ ಎಸ್‌ಸಿ –15, ಎಸ್‌ಟಿ –ಶೇ 3ರಷ್ಟಿದ್ದು, ಒಬಿಸಿಗೆ ಶೇ 32ರಷ್ಟಿದೆ ಇದು ಶೇ 50ರೊಳಗೆ ಇದೆ. ಶೇ 50ರ ಮಿತಿಯೊಳಗೆ ಒಬಿಸಿಗೆ ಶೇ 33ರಷ್ಟನ್ನು ಹೇಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ವರದಿಯಲ್ಲಿ ಸ್ಪಷ್ಟತೆಯಿಲ್ಲ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT