ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮಕ್ಕಳಿಗಾಗಿ ‘ಓದುವ ಬೆಳಕು’ ಯೋಜನೆ 14ರಿಂದ

ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನ ನ. 14ರಿಂದ 2021ರ ಜ. 24ರವರೆಗೆ
Last Updated 6 ನವೆಂಬರ್ 2020, 9:07 IST
ಅಕ್ಷರ ಗಾತ್ರ

ಬಳ್ಳಾರಿ: ಈ ಬಾರಿಯ ಮಕ್ಕಳ ದಿನಾಚರಣೆಯು ರಾಜ್ಯದ ಗ್ರಾಮೀಣ ಪ್ರದೇಶದ ಮಕ್ಕಳ ಪಾಲಿಗೆ ವಿಶೇಷವಾಗಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 6ರಿಂದ 18ವರ್ಷದೊಳಗಿನ ಮಕ್ಕಳಿಗಾಗಿ ‘ಓದುವ ಬೆಳಕು’ ಯೋಜನೆಯನ್ನು ಜಾರಿಗೊಳಿಸಲಿದೆ.

14ರಂದೇ ಎಲ್ಲ ಪಂಚಾಯ್ತಿಗಳಲ್ಲೂ ಯೋಜನೆ ಜಾರಿಯಾಗಲಿದ್ದು, ಅಂದು ಮೊದಲಿಗೆ ಪಂಚಾಯ್ತಿ ವ್ಯಾಪ್ತಿಯ ಕನಿಷ್ಠ 20 ಮಕ್ಕಳ ಹೆಸರನ್ನು ಸಮೀಪದ ಗ್ರಂಥಾಲಯಕ್ಕೆ ಉಚಿತವಾಗಿ ನೋಂದಾಯಿಸಲು ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದೆ. ಡಿ.15ರ ಒಳಗೆ ಪಂಚಾಯ್ತಿಗಳ ಎಲ್ಲ ಮಕ್ಕಳೂ ಗ್ರಂಥಾಲಯದ ಸದಸ್ಯರಾಗಿರಬೇಕು. ಮಕ್ಕಳ ಸದಸ್ಯತ್ವ ಶುಲ್ಕವನ್ನು ಪಂಚಾಯ್ತಿಗಳು ಸೆಸ್‌ನಿಂದ ಭರಿಸಬೇಕು ಎಂದೂ ಸ್ಪಷ್ಟಪಡಿಸಿದೆ.

ಅಭಿಯಾನ: ನವೆಂಬರ್‌ನಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸುವುದಕ್ಕಷ್ಟೇ ಸೀಮಿತಗೊಳ್ಳುತ್ತಿದ್ದ ಮಕ್ಕಳ ದಿನಾಚರಣೆಯನ್ನು ವಿಸ್ತರಿಸಿರುವ ಇಲಾಖೆಯು, ಇದೇ ಮೊದಲ ಬಾರಿಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯ್ತಿ ಅಭಿಯಾನವನ್ನು ನ. 14ರಿಂದ 2021ರ ಜ. 24ರವರೆಗೆ ಹಮ್ಮಿಕೊಂಡಿದೆ. ನ.7ರಂದು ಅಭಿಯಾನದ ಕುರಿತ ತರಬೇತಿ ಕಾರ್ಯಕ್ರಮವು ಯುಟ್ಯೂಬ್‌ನಲ್ಲಿ ಪ್ರಸಾರವಾಗಲಿದ್ದು, ಅಧಿಕಾರಿಗಳೊಂದಿಗೆ ಪ್ರತಿ ಪಂಚಾಯ್ತಿಯಿಂದ ಇಬ್ಬರು ಮಕ್ಕಳು ಪಾಲ್ಗೊಳ್ಳಲಿದ್ದಾರೆ.

10 ವಾರಗಳ ಕಾಲ ಎಲ್ಲ ಪಂಚಾಯ್ತಿಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಗಳೂ ಸೇರಿದಂತೆ ಹಲವು ಚಟುವಟಿಕೆಗಳೂ ನಡೆಯಲಿವೆ.
ಅಭಿಯಾನದ ಪೂರ್ವಸಿದ್ಧತೆ ಸಲುವಾಗಿ ಗ್ರಾಮ ಪಂಚಾಯ್ತಿ ಶಿಕ್ಷಣ ಕಾರ್ಯಪಡೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ. ಬಾಲ ವಿಕಾಸ ಸಮಿತಿ, ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಹಾಗೂ ಸಾಗಟವನ್ನು ತಡೆಯಲು ನಿಗಾ ವಹಿಸುವ ಸಮಿತಿ, ಗ್ರಾಮ ಪಂಚಾಯ್ತಿ ಗ್ರಂಥಾಲಯ, ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು ಸೇರಿದಂತೆ ಪಂಚಾಯತ್‌ ರಾಜ್‌ ಕಾಯ್ದೆ ಅಡಿ ರಚನೆಯಾಗಿರುವ ಎಲ್ಲ ಸಮಿತಿಗಳ ಪ್ರಮುಖರು ಮತ್ತು ಭಾಗೀದಾರರ ಸಭೆಯನ್ನು ನ.10ರ ಒಳಗೆ ನಡೆಸಬೇಕು ಎಂದು ಇಲಾಖೆಯು ಸೂಚಿಸಿದೆ.

ಫೇಸ್‌ಬುಕ್‌ ಪೇಜ್‌: ‘ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ಪ್ರತಿ ಪಂಚಾಯ್ತಿಯೂ ತನ್ನ ಹೆಸರಿನಲ್ಲಿ ನ.10ರ ಒಳಗೆ ಫೇಸ್‌ಬುಕ್‌ ಪೇಜ್‌ ತೆರೆಯಬೇಕು. ಅದರಲ್ಲಿ ಮಕ್ಕಳ ಆರೋಗ್ಯ, ಪೌಷ್ಠಿಕತೆ, ಸಮಸ್ಯೆಗಳ ಕುರಿತು ಮಕ್ಕಳೇ ತಮ್ಮ ಸಮಸ್ಯೆ, ಬೇಡಿಕೆ ಹಾಗೂ ಪ್ರಶ್ನೆಗಳನ್ನು ಬರೆಯಲು ಪಂಚಾಯ್ತಿಯೇ ಮಾರ್ಗದರ್ಶನವನ್ನೂ ನೀಡಬೇಕು. ಪೇಜ್‌ನಲ್ಲಿ ಬಂದ ವಿಷಯಗಳ ಕುರಿತೂ ಮಕ್ಕಳ ಗ್ರಾಮ ಸಭೆಯಲ್ಲಿ ಚರ್ಚೆಗಳನ್ನು ನಡೆಸಬೇಕು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌ ನ.4ರಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

‘ಪಂಚಾಯ್ತಿಯ ವಾರ್ಡ್‌ವಾರು ಮಕ್ಕಳ ಅಕ್ಟೋಬರ್‌ ಅಂತ್ಯದವರೆಗಿನ ಪರಿಸ್ಥಿತಿಯ ಮಾಹಿತಿಯನ್ನು ಅಂಕಿ ಅಂಶಗಳ ಸಮೇತ ಸಿದ್ಧಪಡಿಸಿ ಅಭಿವೃದ್ಧಿ ಅಧಿಕಾರಿಗಳು ಫೇಸ್‌ಬುಕ್‌ ಪೇಜ್‌ನಲ್ಲಿ ಪ್ರದರ್ಶಿಸಬೇಕು’ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಗಳೇನು?: ಅಭಿಯಾನದಲ್ಲಿ ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮಗಳ ಪಟ್ಟಿಯನ್ನೂ ಇಲಾಖೆಯು ಸಿದ್ಧಪಡಿಸಿದೆ. ಮಕ್ಕಳ ಜನನ ನೋಂದಣಿ ಮತ್ತು ಜನನ ಪ್ರಮಾಣ ಪತ್ರಗಳ ಸಮರ್ಪಕ ವಿತರಣೆ, ಮಕ್ಕಳಿಗಾಗಿ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು, ಕಥೆ ಹೇಳುವುದು, ಚಿತ್ರಕಲೆ ಜನಪದ ಗೀತೆ, ರಂಗಭೂಮಿ ಚಟುವಟಿಕೆ, ಮಾನಸಿಕ ಆರೋಗ್ಯ ರಕ್ಷಣೆಯ ಕಾರ್ಯಕ್ರಮ, ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮಗಳು ನಡೆಯಲಿವೆ.

ಪಂಚಾಯ್ತಿ ಬಾಲಮಿತ್ರ: ಅಭಿಯಾನದ ಪೂರ್ವಸಿದ್ಧತೆ ಸಮರ್ಪಕವಾಗಿ ನಡೆಯಬೇಕೆಂಬ ಉದ್ದೇಶದಿಂದ, ಪಂಚಾಯ್ತಿ ಶಿಕ್ಷಣ ಕಾರ್ಯಪಡೆಯ ಸದಸ್ಯರಲ್ಲಿ ಯಾರಾದರೂ ಒಬ್ಬರನ್ನು, ಅದರಲ್ಲೂ ಮಕ್ಕಳೊಡನೆ ಸುಲಭ ಸಂವಾದ ನಡೆಸಲು ಸಾಧ್ಯವಿರುವಂಥವರನ್ನು ‘ಪಂಚಾಯ್ತಿ ಬಾಲಮಿತ್ರ’ ಎಂದು ಘೋಷಿಸಲು ಸಿದ್ಧತೆ ನಡೆದಿದೆ.

ಮಕ್ಕಳ ಸಮಸ್ಯೆಗಳ ಬಗ್ಗೆ ಮಕ್ಕಳಿಂದಲೇ ಪತ್ರಗಳನ್ನು ಬರೆಸುವುದು, ಅಭಿಯಾನದ ಭಾಗೀದಾರರು ಮತ್ತು ವಿವಿಧ ಇಲಾಖೆಗಳ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುವುದು ಮತ್ತು ಹತ್ತು ವಾರಗಳ ಅಭಿಯಾನದಲ್ಲಿ ಮೂಡಿಬಂದ ಅಭಿಪ್ರಾಯಗಳನ್ನು ಆಧರಿಸಿ ಕ್ರಿಯಾಯೋಜನೆಯನ್ನು ತಯಾರಿಸಲು ಪಂಚಾಯ್ತಿಗೆ ನೆರವಾಗುವುದು ಬಾಲಮಿತ್ರರ ಪ್ರಮುಖ ಜವಾಬ್ದಾರಿ.

ಮಕ್ಕಳ ದನಿಪೆಟ್ಟಿಗೆ: ಮಕ್ಕಳ ಸಮಸ್ಯೆಗಳ ಕುರಿತು ಮಕ್ಕಳು ಮತ್ತು ಅವರ ಪೋಷಕರು, ಆಸಕ್ತರು ಪತ್ರ ಬರೆದು ಹಾಕಲು ಪಂಚಾಯ್ತಿಗಳ ಪ್ರತಿ ಗ್ರಾಮಗಳಲ್ಲೂ ಶಾಲೆ, ವಸತಿ ನಿಲಯ, ಅಂಗನವಾಡಿ, ನ್ಯಾಯ ಬೆಲೆ ಅಂಗಡಿ, ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ವಿವಿಧೆಡೆ ‘ಮಕ್ಕಳ ದನಿ ಪೆಟ್ಟಿಗೆ’ಯನ್ನು ಅಳವಡಿಸಲು ಇಲಾಖೆ ನಿರ್ಧರಿಸಿದ್ದು, ಅದರ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಕೂಡ ಇರಲಿದೆ.

ಕೋವಿಡ್‌ ಮುಂಜಾಗ್ರತೆ: ಮಕ್ಕಳ ಗ್ರಾಮಸಭೆ ನಡೆಯುವುದಕ್ಕೂ ಮುನ್ನ ಪಂಚಾಯ್ತಿ ವ್ಯಾಪ್ತಿಯ ಶಾಲೆಯ ಶಿಕ್ಷಕರೊಬ್ಬರು ಕೋವಿಡ್‌ ನಿಯಂತ್ರಣ ಸಂಬಂಧ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT